ಹಾಸನ

ಅಂತೂ ಉಸಿರು ಬಿಟ್ಟ ಮುಖಂಡರು

Published On :

ಅರಕಲಗೂಡು: ಬಿ ಫಾರಂಗಾಗಿ ಮುಗಿ ಬಿದ್ದ ಆಕಾಂಕ್ಷಿಗಳು ಒಂದೆಡೆಯಾದರೆ, ಗೆಲ್ಲುವ ವ್ಯಕ್ತಿಗಳಿಗೇ ಬಿ ಫಾರಂ ನೀಡಿ ಅಧಿಕಾರದ ಗದ್ದುಗೆ ಏರಲೇ ಬೇಕೆಂಬ ರಾಜಕೀಯ ಪಕ್ಷಗಳ ಮಿಡಿತ. ಇವುಗಳ ನಡುವೆ ಕೊನೆಗೂ ಶನಿವಾರ ಅಧಿಕೃತ ಅಭ್ಯರ್ಥಿಗಳ ಬಿ ಫಾರಂ ಹಂಚಿಕೆ ಕಾರ್ಯ ಮುಕ್ತಾಯಗೊಂಡು ಇದೀಗ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ತಾತ್ಕಾಲಿಕ ನಿಟ್ಟುಸಿರು ಬಿಟ್ಟಿದ್ದಾರೆ.
ಅರಕಲಗೂಡು ಪಟ್ಟಣ ಪಂಚಾಯಿತಿಯ ಒಟ್ಟು 15 ಸ್ಥಾನಗಳಿಗೆ ಈ ಭಾರಿ ಹೆಚ್ಚಿನ ಪ್ರಮಾಣದ ಆಕಾಂಕ್ಷಿಗಳು ಕಂಡು ಬಂದು, ಬಹುತೇಕ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲ ಪಡೆದು ಸ್ಪರ್ಧಿಸುವ ಆಕಾಂಕ್ಷೆ ಹೊಂದಿದವರ ಸಂಖ್ಯೆಯೂ ಅಧಿಕವಾಗಿತ್ತು.
ಅವುಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷ ಆಕಾಂಕ್ಷಿಗಳ ಒತ್ತಡದಿಂದ ತತ್ತರಿಸಿದರೆ, ಮತ್ತೊಂದೆಡೆ ಬಂಡಾಯ ಅಥವಾ ಪಕ್ಷಾಂತರ ತಪ್ಪಿಸುವ ಸಲುವಾಗಿ ಭಾರೀ ಕಸರತ್ತು ನಡೆಸಿದವು. ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಅಂತಿಮ ಕ್ಷಣದವರೆಗೂ ಬಿ ಫಾರಂ ನೀಡದೇ ಅಂತಿಮವಾಗಿ ಬಿ ಫಾರಂ ನೀಡಿಕೆಗೆ ಮುಂದಾದವು.
ಈ ನಡುವೆ ಕ್ಷೇತ್ರದಲ್ಲಿ ತೃತೀಯ ಶಕ್ತಿ ಎಂದೇ ಬಿಂಬಿಸಲಾಗುತ್ತಿರುವ ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಯೋಗಾರವುಶ್ ಪಟ್ಟಣದ ಎಲ್ಲಾ 15 ವಾರ್ಡುಗಳಿಂದಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ನ್ನು ಸಮಾನ ದೂರದಲ್ಲಿರಿಸಿ ಮಣಿಸಲು ಯತ್ನಿಸುತ್ತಿದ್ದಾರೆ.
 ಈ ನಿಟ್ಟಿನಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಲುವಾಗಿ ವ್ಯಾಪಕ ಪ್ರಯತ್ನ ನಡೆಸಿದ್ದಾರೆ. ಇನ್ನು ಬಿಜೆಪಿ 15 ಸ್ಥಾನಗಳ ಪೈಕಿ 8 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಯಶಸ್ವಿಯಾದರೆ, ಇದೇ ಮೊದಲ ಬಾರಿಗೆ ಬಿಎಸ್‌ಆರ್ ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಪಕ್ಷದ ಪರಿಚಯಕ್ಕೆ ಮುಂದಾಗಿದೆ.
ಹೊಸ ಮುಖಗಳ ಆಕಾಂಕ್ಷೆ: ಪ್ರಸಕ್ತ ಚುನಾವಣೆಯಲ್ಲಿ ಈ ಬಾರಿ ಹೊಸ ಮುಖಗಳು, ಅದರಲ್ಲೂ ಯುವಕರು ಚುನಾವಣಾ ಕಣಕ್ಕೆ ಧುಮುಕಲು ತಮ್ಮ ಆಸಕ್ತಿ ಪ್ರದರ್ಶಿಸಿ, ನಾಮಪತ್ರ ಸಲ್ಲಿಸಿದ್ದಾರೆ. ವಿವಿಧ ಪಕ್ಷಗಳೂ ಗೆಲುವಿನ ಗುರಿ ಹೊತ್ತು ಯುವಕರ ಬಗೆಗೆ ಒಲವು ವ್ಯಕ್ತಪಡಿಸಿ, ಕಣಕ್ಕಿಳಿಸಿವೆ.
 ಒಟ್ಟಾರೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಭ್ಯರ್ಥಿಗಳು ಮತ್ತು ರಾಜಕೀಯ ಮುಖಂಡರು ಗೆಲುವಿನ ಸಲುವಾಗಿ ಕಸರತ್ತುಗಳನ್ನು ನಡೆಸಿದ್ದಾರೆ.
ವಿಧಾನಸಭೆ ಚುನಾವಣೆ ಮೇಲೆ ಕಣ್ಣು: ಅರಕಲಗೂಡು ವಿಧಾನಸಭೆಯ ಕೇಂದ್ರ ಸ್ಥಾನ ಇದಾಗಿರುವುದರಿಂದ ಪ್ರಸಕ್ತ ಎದುರಾಗಿರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸುವ ಮೂಲಕ ಪಕ್ಷದ ಬಲಾಬಲದ ಸಂದೇಶವನ್ನು ಕ್ಷೇತ್ರದ ಇತರ ಪ್ರದೇಶಗಳಿಗೆ ರವಾನಿಸುವ ಪ್ರಯತ್ನ ಎಲ್ಲ ಪಕ್ಷಗಳದ್ದೂ ಆಗಿದೆ. ಈ ಹಿಂದೆ ಪಟ್ಟಣ ಪಂಚಾಯಿತಿ ಜೆಡಿಎಸ್ ಪ್ರಾಬಲ್ಯ ಹೊಂದಿದ್ದರೂ ಕಾಂಗ್ರೆಸ್ ಮೀಸಲಾತಿ ಹಿನ್ನೆಲೆಯಲ್ಲಿ ಅಧಿಕಾರ ಹೊಂದಿತ್ತು. ಪ್ರಸಕ್ತ ಪಟ್ಟಣ ಪಂಚಾಯಿತಿ ಯಾರ ತೆಕ್ಕೆಗೆ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
-ಅ.ರಾ.ಸುಬ್ಬರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.