ಹಾಸನ

ರಸ್ತೆ ದುರಸ್ತಿಯಲ್ಲೂ ತಾರತಮ್ಯ, ಅಧಿಕಾರಿಗಳ ನಿರ್ಲಕ್ಷ್ಯ

Published On :

ಹಾಸನ: ಕೇವಲ ಏಳೇ ಏಳು ಮನೆಗಳಿರುವ ರಸ್ತೆಗೆ ಡಾಂಬರೀಕರಣಗೊಳಿಸಿದರೆ, 27 ಮನೆಗಳುಳ್ಳ ಇನ್ನೊಂದು ರಸ್ತೆಯನ್ನು ದುರಸ್ತಿಗೊಳಿಸದೆ ನಿರ್ಲಕ್ಷ್ಯ ವಹಿಸಿ, ತಾರತಮ್ಯ ಎಸಗಿಲಾಗಿದೆ ಎಂದು ಬಡಾವಣೆಯ ನಿವಾಸಿಗಳು ದೂರಿದ್ದಾರೆ.
ನಗರದ ವಿದ್ಯಾನಗರದ ಶಂಕರಾಚಾರ್ಯ ರಸ್ತೆ ಕಳೆದ ಮೂರು ವರ್ಷದಿಂದ ಯಾವುದೇ ದುರಸ್ತಿ ಕಂಡಿಲ್ಲ, ಸಾಲದೆಂಬಂತೆ ಈ ರಸ್ತೆಯ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಬಡಾವಣೆಯ 80 ಅಡಿಯ ಆದಿಚುಂಚನಗಿರಿ ಮುಖ್ಯರಸ್ತೆ. ಎಂ.ಜಿ. ರಸ್ತೆಯಿಂದ ಹೊಯ್ಸಳ ನಗರ ರಸ್ತೆ ಕಡೆಗೆ ಪೂರ್ವಕ್ಕೆ ಚಲಿಸಿ, ಮುಖ್ಯ ರಸ್ತೆಯ ಬಲ ಬದಿಗೆ ಎರಡು ರಸ್ತೆಗಳು ಕಾಣಬರುತ್ತವೆ.
ಒಂದು ಬಹುಪುಣ್ಯವಂತ ರಸ್ತೆ. ಅದು ವಿವೇಕಾನಂದ ರಸ್ತೆ. ಈ ರಸ್ತೆಯಲ್ಲಿರುವುದು ಕೇವಲ ಏಳು ಮನೆಗಳು.  ರಸ್ತೆಯ ಒಂದು ಮಗ್ಗುಲಲ್ಲಿ ವಿಶಾಲ ಆಟದ ಮೈದಾನ. ಬೆಳಗಿನ ಹೊತ್ತಿನಲ್ಲಿ ಕ್ರಿಕೆಟ್ ಆಡುವ ಹುಡುಗರು. ಸಂಜೆಯ ತಂಪಿನಲ್ಲಿ ಒಂದಿಷ್ಟು ಯುವ ಜೋಡಿಗಳ ತಾಣ. ಜೊತೆಗೆ  ಬಹುಭಾರದ ವಾಹನಗಳು ಬರದಂತೆ ತಡೆಯಿದೆ. ಈ ರಸ್ತೆ ಈಗ್ಗೆ ಕೇವಲ ವರ್ಷದ ಹಿಂದೆ ಬಹು ಸುಭದ್ರ ಕಾಂಕ್ರಿಟ್ ಸೌಭಾಗ್ಯ ಕಂಡಿತ್ತು.  
ಕಳೆದ ವಾರ ಈ ರಸ್ತೆಗೆ ಮತ್ತೆ ಅಕ್ಕಪಕ್ಕದಲ್ಲಿ ಒಂದೂವರೆ ಅಡಿಯಷ್ಟು ಕಾಂಕ್ರಿಟ್ ರಸ್ತೆ ವಿಸ್ತರಣೆಯ ಸೌಭಾಗ್ಯ. ವಿಸ್ತರಣೆಗೆ ನೀಡಿದ ಕಾರಣ ಎರಡು ವಾಹನಗಳು ಏಕಕಾಲದಲ್ಲಿ ಚಲಿಸಲು ಸಾಧ್ಯವಾಗುತ್ತಿಲ್ಲ ಎಂಬುದು. ಇದು ಹುಡಾ ಕೃಪೆಯೋ ಅಥವಾ 150ನೇ ಜನ್ಮ ವರ್ಷಾಚರಣೆಯ ವಿವೇಕಾನಂದರ ಹೆಸರಿನ ಬಲವೋ, ಮಂಜುನಾಥನ ದಯೆಯೋ ಇರಬೇಕು ಎನ್ನುತ್ತಾರೆ  ನಿವಾಸಿಗಳು.   
ಇನ್ನೊಂದು ರಸ್ತೆಗೆ ಈಗ ಡಾಂಬರೀಕರಣದ ಮಹಾಭಾಗ್ಯ. ಈ ರಸ್ತೆಯ ಕಾಮಗಾರಿಯನ್ನು ಎಚ್.ಕೆ. ಸುರೇಶ್ ಎಂಬ ಗುತ್ತಿಗೆದಾರರು ಪೂರ್ಣಗೊಳಿಸಿರುವುದು ಜೂನ್ 2012ರಂದು. ರಸ್ತೆಯ ಉದ್ದ 1.15ಕಿ.ಮಿ. ವೆಚ್ಚದ ಅಂದಾಜು 26.75 ಲಕ್ಷ. ಇನ್ನೂ ಎಂಟು ತಿಂಗಳಷ್ಟೇ ಕಳೆದಿದ್ದು, ಇದರ ಜೊತೆಗೆ ಇದರ ಸಮೀಪದ ಎರಡು ಮೂರು ರಸ್ತೆಗಳೂ ಡಾಂಬರೀಕರಣದಿಂದ ಸಜ್ಜಾಗುತ್ತಿವೆ. ಚುನಾವಣೆ ಹತ್ತಿರವಾಗುತ್ತಿದೆ.  ಆ ಸಮಯದಲ್ಲಿ ಈ ರಸ್ತೆಗಳಲ್ಲಿ ವಾಹನಸಂಚಾರ ಹೆಚ್ಚಾಗಬಹುದು. ಅಕ್ಕಪಕ್ಕದವರಿಗೆ ಧೂಳಿನ ಬೇಗೆ ತಟ್ಟದಿರಲಿ ಎಂಬ ಕಾರಣ ಇರಬಹುದೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.  ಏನೇ ಆಗಲಿ ಇದು ಜನೋಪಯೋಗಿಯೇ.
ಈ ಎರಡೂ ರಸ್ತೆಗಳಿಗೆ ಲಗತ್ತಾಗಿ ಒಂದು ರಸ್ತೆ ಇದೆ.  ಹೆಸರು ಶಂಕರಾಚಾರ್ಯ ರಸ್ತೆ.  ಈ ರಸ್ತೆಯಲ್ಲಿ ಇರುವುದು 23 ಮನೆಗಳು. ಈ ರಸ್ತೆಯ ಸಂಪರ್ಕ ಕಡಿತಗೊಳಿಸಿ ಮೂರು ವರ್ಷಗಳೇ ಕಳೆದಿದ್ದರೂ, ಸಾರ್ವಜನಿಕರು ಪ್ರತಿಭಟನೆ ಮಾಡಿ, ತೊಂದರೆಯನ್ನು ಎಲ್ಲಾ ಮುಖ್ಯ ಅಧಿಕಾರಿಗಳ, ಜನನಾಯಕರ ಗಮನಕ್ಕೆ ತಂದಿದ್ದರೂ ಜಾಣ ಕಿವುಡು, ಜಾಣ ಕುರುಡು ಪ್ರದರ್ಶಿಸುತ್ತಿರುವುದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ ಎಂದು  ಹೇಳಿದ್ದಾರೆ.
ಅಕ್ಕಪಕ್ಕದ ರಸ್ತೆಗಳ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡುವ ಅಧಿಕಾರಿಗಳು ಈ ರಸ್ತೆಯ ಬಗೆಗೇಕೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಅವರೇ ಉತ್ತರಿಸಬೇಕು. ಅವೆರಡೂ ಪುಣ್ಯವಂತ ರಸ್ತೆಗಳಾದರೆ, ಇದು ನಿಜವಾಗಿ ಬಡಪಾಯಿ ರಸ್ತೆಯೇ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.