ಜೆಡಿಎಸ್ ಮತ ವೃದ್ಧಿ
ಕನ್ನಡಪ್ರಭವಾರ್ತೆ ಅರಸೀಕೆರೆ ಮಾ. 16
ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ತಲಾ 11 ಸ್ಥಾನ ಪಡೆಯುವ ಮೂಲಕ ಸಮಬಲ ಸಾಧಿಸಿದೆಯಾದರೂ ಮತಗಳಿಕೆಯಲ್ಲಿ ಜೆಡಿಎಸ್ ತೀವ್ರ ಮುನ್ನಡೆ ಸಾಧಿಸಿದೆ.
ಒಟ್ಟು 31,897 ಮತದಾರರ ಪೈಕಿ 23,381 ಮಂದಿ ಮತ ಚಲಾಯಿಸಿದ್ದು, ಅದರಲ್ಲಿ 27 ಕ್ಷೇತ್ರಗಳಲ್ಲಿ ಜೆಡಿಎಸ್ 10,113 (ಶೇ.43.25) ಮತಗಳನ್ನು ಪಡೆದು ಕಾಂಗ್ರೆಸ್ಗಿಂತ 2499 ಮತಗಳನ್ನು ಹೆಚ್ಚಾಗಿ ಪಡೆದು ಮತಗಳಿಕೆಯಲ್ಲಿ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ಒಟ್ಟು 26 ಕ್ಷೇತ್ರಗಳಲ್ಲಿ 7614 ಮತಗಳನ್ನು ಗಳಿಸಿ (ಶೇ.32.56 ರಷ್ಟು) 11 ಸ್ಥಾನ ಪಡೆದು 8 ಕ್ಷೇತ್ರಗಳಲ್ಲಿ 2ನೇ ಸ್ಥಾನಕ್ಕಿಳಿದಿದ್ದರೆ 6 ಕ್ಷೇತ್ರಗಳಲ್ಲಿ 3ನೇ ಸ್ಥಾನಕ್ಕೆ ಕುಸಿದು 4 ಕ್ಷೇತ್ರಗಳಲ್ಲಿ ತನ್ನ ಠೇವಣೆ ಕಳೆದು ಕೊಂಡಿದೆ.
ಕೆಜೆಪಿ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 2499 ಶೇ.10.68ರಷ್ಟು ಮತಗಳನ್ನು ಗಳಿಸಿ 1 ಸ್ಥಾನಗಳಿಸಿ 4ರಲ್ಲಿ 2ನೇ ಸ್ಥಾನಗಳಿಸಿ 9 ಕ್ಷೇತ್ರಗಳಲ್ಲಿ ಮೂರನೇ ಸ್ಥಾನಕ್ಕಿಳಿದು 12 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ. ಬಿಜೆಪಿ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 1099 4.70ರಷ್ಟು ಮತಗಳಿಸಿ 2 ಸ್ಥಾನಗಳಲ್ಲಿ ಮಾತ್ರ 2ನೇ ಸ್ಥಾನಗಳಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ತನ್ನ ಹಿಡಿಗಂಟು ಕಳೆದುಕೊಂಡಿದೆ.
ಹೊಸ ಮುಖಗಳಿಗೆ ಮಣೆ: ಈ ಚುನಾವಣೆಯಲ್ಲಿ ಮತದಾರ 21 ಹೊಸ ಮುಖಗಳಿಗೆ ಮಣೆ ಹಾಕುವ ಮೂಲಕ ಪ್ರಥಮ ಬಾರಿಗೆ ಪುರಸಭೆಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಸ್ಪರ್ಧೆಯಲ್ಲಿದ್ದ ಮೂವರು ಮಾಜಿ ಅಧ್ಯಕ್ಷರ ಪೈಕಿ ಎಂ ಸಮೀವುಲ್ಲಾ 3ನೇ ಬಾರಿಗೆ ಆಯ್ಕೆಯಾಗಿದ್ದರೆ ರುಕ್ಮಿಣಿ ಜಯಕುಮಾರ್, ಜಿ.ಟಿ.ಗಣೇಶ್ ಸೋಲುಅನುಭವಿಸಿದ್ದರೆ ಸ್ಪರ್ಧೆಯಲ್ಲಿದ್ದ ಮೂವರು ಮಾಜಿ ಉಪಾಧ್ಯಕ್ಷರ ಪೈಕಿ ಶಾಂತರಾಜ್ ಸೋಲು ಅನುಭವಿಸಿದ್ದರೆ ಜೆಡಿಎಸ್ನಿಂದ ಖುಷಿಬಾಬು 2ನೇ ಬಾರಿಗೆ ಪಕ್ಷೇತರರಾಗಿ 4ನೇ ಬಾರಿಗೆ ಬಿ.ಎನ್. ವಿದ್ಯಾಧರ ಆಯ್ಕೆಯಾಗಿದ್ದಾರೆ.
ಕಳೆದ ಬಾರಿ ಪುರಸಭಾ 27 ಸ್ಥಾನಗಳ ಪೈಕಿ 22 ಸ್ಥಾನಗಳನ್ನು ಗಳಿಸಿದ್ದ ಜೆಡಿಎಸ್ 11 ಸ್ಥಾನಕ್ಕೆ ಕುಸಿಯಲು ಶಾಸಕರ ನಿರಂಕುಶ ಆಡಳಿತ, ಬಸವಜಯಂತಿ ಆಚರಣೆ ವಿವಾದ, ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದ ತಹಶೀಲ್ದಾರ್ ಚಿದಾನಂದ್ ವಿಚಾರದಲ್ಲಿ ತೆಗೆದುಕೊಂಡ ನಿಲುವುಗಳು, ಗ್ರಾಮಾಂತರ ಸಬ್ಇನ್ಸ್ಪೆಕ್ಟರ್ ನಂಜೇಗೌಡರ ವರ್ಗಾವಣೆ, ಗಣೇಶೋತ್ಸವ ಸಂದರ್ಭದಲ್ಲಿ ಆದ ಗಲಭೆ, ಬಿ.ಎನ್.ವಿದ್ಯಾಧರ್ ಅವರಿಗೆ ಅಧ್ಯಕ್ಷ ಪದವಿ ಕೈತಪ್ಪುವಂತೆ ಮಾಡಿದ್ದು, ಕೆಲ ಜೆಡಿಎಸ್ ಪ್ರಾಮಾಣಿಕ ಕಾರ್ಯಕರ್ತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಇವೆಲ್ಲವುಗಳು ಪುರಸಭಾ ಚುನಾವಣೆ ಮೇಲೆ ಪರಿಣಾಮ ಬೀರಿವೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿಬರುತ್ತಿದೆ.
ಕಾಂಗ್ರೆಸ್ ಬಲವರ್ಧನೆ: ಕಳೆದ ಬಾರಿ 2 ಸ್ಥಾನಗಳಿಸಿ ಹೀನಾಯ ಸ್ಥಿತಿಯಲ್ಲಿದ್ದ ಗರಿಗೆದರಿ 11 ಸ್ಥಾನಗಳನ್ನು ಪಡೆಯುವುದರ ಮೂಲಕ ಕಾಂಗ್ರೆಸ್ ತನ್ನ ಬಲವರ್ಧನೆ ಪ್ರಗತಿಯನ್ನು ಸಾಬೀತು ಪಡಿಸಿದೆಯಾದರೂ ಜೆಡಿಎಸ್ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ನಾಯಕರಲ್ಲಿ ಇರುವ ಒಳ ಜಗಳ, ಆಂತರಿಕ ಭಿನ್ನಮತ ಕೈಬಿಟ್ಟು ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದರೆ ಸ್ವಸಾಮರ್ಥ್ಯದಿಂದ ಅಧಿಕಾರವೇರುತ್ತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಯಡಿಯೂರಪ್ಪನವರ ಹೊಸ ಪಕ್ಷ ಕೆಜೆಪಿ ಬಾರಿ ನಿರೀಕ್ಷೆ ಮೂಡಿಸಿತ್ತಾದರೂ ಬಹು ನಾಯಕತ್ವ ತರಾತುರಿಯಲ್ಲಿ ಬಂದ ಚುನಾವಣೆ ಸಮರ್ಥ ಅಭ್ಯರ್ಥಿಗಳ ಆಯ್ಕೆ ಮಾಡುವಲ್ಲಿ ವಿಫಲ ಸೋಲಿಗೆ ಪ್ರಮುಖ ಕಾರಣಗಳಾಗಿವೆ.
ರಾಜ್ಯದಲ್ಲಿ ಆಡಳಿತ ಸೂತ್ರವಿಡಿದಿದ್ದರೂ ಸರ್ಕಾರದ ಜನಪರ ಯೋಜನೆಗಳನ್ನು ಮತದಾರರಿಗೆ ಮುಟ್ಟಿಸುವಲ್ಲಿ ಉತ್ತಮ ಅಬ್ಯರ್ಥಿಗಳನ್ನು ಸ್ಪರ್ಧೆಗಿಳಿಸುವಲ್ಲಿ ಸಂಪೂರ್ಣ ವಿಫಲರಾಗಿರುವುದು ಹೀನಾಯ ಸೋಲಿಗೆ ಕಾರಣವಾಗಿದೆ.
ಅಧ್ಯಕ್ಷ ಚುನಾವಣೆಗಾಗಿ ರಂಗ ಸಜ್ಜಾಗಿದ್ದು ಸಮಾನ ಸ್ಥಾನಗಳಿಸಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ನಲ್ಲಿ ಯಾರು ಅಧ್ಯಕ್ಷ ಪದವಿಗೇರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

