ನಾಗರಿಕರಲ್ಲಿ ರಸ್ತೆ ಸುರಕ್ಷತೆ ಅರಿವು: ಎಸ್ಪಿ
ಕ.ಪ್ರ.ವಾರ್ತೆ ಬೇಲೂರು ನ.23
ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಅರಿವು ಮೂಡುತ್ತಿದೆ ಎಂದು ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್ ಹೇಳಿದರು.
ವಾಯುಮಾಲಿನ್ಯ ಮಾಸಾಚರಣೆ ಅಂಗವಾಗಿ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಸಕಲೇಶಪುರ ವತಿಯಿಂದ ಬೇಲೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಆಟೋರಿಕ್ಷ ಮತ್ತು ಟ್ರಾಕ್ಟರ್ ಚಾಲಕರಿಗೆ ಲೈಸನ್ಸ್ ವಿತರಣಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ 2010 ರಲ್ಲಿ 404 , 2012 ರಲ್ಲಿ 379 , 2013 ರಲ್ಲಿ 329 ರಸ್ತೆ ಅಪಘಾತಗಳು ನಡೆದಿದ್ದು, ಅಪಘಾತ ಕಡಿಮೆಯಾಗ ತೊಡಗಿದ್ದು ಸಾರ್ವಜನಿಕರಲ್ಲಿ ಸಾರಿಗೆ ಇಲಾಖೆ ಹಮ್ಮಿಕೊಂಡಿರುವ ಜನ ಜಾಗೃತಿಯೇ ಕಾರಣ ಎಂದರು.
ವಾಹನ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡಬಾರದು. ಇದರಿಂದ ಅನಾಹುತವಾದಾಗ ತಮ್ಮ ಅವಲಂಬಿತರಿಗೆ ಅನ್ಯಾಯವಾಗುತ್ತದೆ. ಚಾಲಕರು ಕಡ್ಡಾಯವಾಗಿ ಪರವಾನಗಿ ಪಡೆಯುವುದು ಅಗತ್ಯ ಎಂದರು.
ಶಾಸಕ ವೈ.ಎನ್.ರುದ್ರೇಶ್ಗೌಡ ಮಾತನಾಡಿ, ಚಾಲಕರು ಸಾರಿಗೆ ಇಲಾಖೆಯ ಕಾನೂನಿನಂತೆ ಚಾಲನೆ ಮಾಡಬೇಕು ಹಾಗೂ ಅತಿವೇಗದಿಂದ ಅಪಘಾತಗಳು ಹೆಚ್ಚುವ ಸಂಭವವಿದ್ದು ಎಚ್ಚರಿಕೆಯಿಂದ ಚಾಲನೆ ಮಾಡುವುದು ಒಳಿತು ಎಂದು ತಿಳಿಸಿದರು.
ಸಾರಿಗೆ ಇಲಾಖೆ ಅಧಿಕಾರಿ ಕೇಶವ ಧರಣಿ ಮಾತನಾಡಿ, ಬೇರೆ ರಾಷ್ಟಗಳಿಗೆ ಹೋಲಿಸಿದರೆ ಭಾತರದಲ್ಲಿ ಹೆಚ್ಚಿನ ಅಪಘಾತ ಸಂಭವಿಸುತ್ತಿದ್ದು ರಸ್ತೆ ನಿಯಮ ಉಲ್ಲಂಘನೆ ಮಾಡಿದರೆ ಆಪಾಯ ತಪ್ಪಿದಲ್ಲ ಚಾಲಕರು ಗಮನಹರಿಸಿ ಚಾಲನೆ ಮಾಡುವುದು ಒಳ್ಳೆಯದು ಎಂದು ನುಡಿದರು.
ಪುರಸಭೆ ಮಾಜಿ ಅಧ್ಯಕ್ಷ ತೊ.ಚ.ಅನಂತ ಸುಬ್ಬರಾಯ, ತಹಸೀಲ್ದಾರ್ ಜಗದೀಶ್, ಕಣ್ಣಿನ ತಜ್ಞ ಡಾ.ನಾರಾಯಣಸ್ವಾಮಿ, ಸಾರಿಗೆ ಅಧಿಕಾರಿ ಅನಿಲ್ಕುಮಾರ್ ಮತ್ತು ಸಿಬ್ಬಂದಿಗಳು ಹಾಗೂ ನೂರಾರು ಆಟೋ ಮತ್ತು ಟ್ರಾಕ್ಟರ್ ಚಾಲಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಚಾಲಕರಿಗೆ ಲೈಸನ್ಸ್ ನೀಡಲಾಯಿತು.
ಬೈಕ್ ಅಪಘಾತ: ಅರಕಲಗೂಡಿನ ವ್ಯಕ್ತಿ ಸಾವು, ಇಬ್ಬರು ಗಂಭೀರ
ಸೋಮವಾರಪೇಟೆ: ಮಾದಾಪುರದಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಸಮೀಪದ ಜಂಬೂರು ಗ್ರಾಮದಲ್ಲಿ ಬೈಕ್ ಅಪಘಾತಕ್ಕೀಡಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡುರಾತ್ರಿ 12 ಗಂಟೆಗೆ ಸಂಭವಿಸಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಅಲಸನಹಳ್ಳಿ ಗ್ರಾಮದ ಲೋಕೇಶ್ (25) ಎಂಬಾತನೇ ಮೃತಪಟ್ಟವ. ಲೋಕೇಶ್ ಸೇರಿದಂತೆ ಇತರ ಇಬ್ಬರು ಸಂಚರಿಸುತ್ತಿದ್ದ ಬೈಕ್ ರಾತ್ರಿ 12 ಗಂಟೆ ಸುಮಾರಿಗೆ ಜಂಬೂರು ಗ್ರಾಮದ ಲಕ್ಷ್ಮೀಜಾಲ ಎಸ್ಟೇಟ್ನ ತಿರುವು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಅಪ್ಪಳಿಸಿದೆ. ಘಟನೆಯಿಂದ ಲೋಕೇಶ್ಗೆ ಗಂಭೀರ ಗಾಯಗಳಾಗಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಕುಳಿತಿದ್ದ ವಿನೋದ್ ಹಾಗೂ ಶಿವಕುಮಾರ್ಗೂ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಅರಕಲಗೂಡಿಗೆ ಸಂಬಂಧಿಕರು ಕೊಂಡೊಯ್ದಿದ್ದಾರೆ.
ಹುಂಡಿ ಒಡೆದು ಕಳವು
ಹಾಸನ: ನಗರದ ದೇವಾಲಯವೊಂದರ ಹಿಂಬಾಗಿಲನ್ನು ಒಡೆದು ಶುಕ್ರವಾರ ರಾತ್ರಿ ಕಳವು ಮಾಡಲಾಗಿದೆ. ನಗರದ ವಲ್ಲಬಾಯಿ ರಸ್ತೆ ಬಳಿ ಇರುವ ಶ್ರೀ ವಿಜಯಲಕ್ಷ್ಮಿ ದೇವಾಲಯದ ಹಿಂಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಬಾಗಿಲನ್ನು ತೆಗೆದು ಒಳ ನುಗ್ಗಿದ ಕಳ್ಳರು, ಗರ್ಭಗುಡಿಯ ಬೀರುವಿನಲ್ಲಿ ಇಟ್ಟಿದ್ದ ದೇವಿಯ ಎರಡು ತಾಳಿ ಹಾಗೂ ಭಕ್ತಾದಿಗಳು ನೀಡುವ ಕಾಣಿಕೆ ಹುಂಡಿಯನ್ನು ಒಡೆದು ಸಾವಿರಾರು ರು. ದೋಚಿದ್ದಾರೆ. ದೇವಾಲಯದ ಬಾಗಿಲು ತೆಗೆಯಲು ಉಪಯೋಗಿಸಿದ ಕಬ್ಬಿಣದ ಸಲಾಕೆಯನ್ನು ಅಲ್ಲೆ ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಎಸ್ಐ ಸಂಜೀವೇಗೌಡ ಭೇಟಿ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

