ಬೆಳಗೊಳದಲ್ಲಿ ಹಸ್ತಪ್ರತಿ ಕೋರ್ಸ್ಗೆ ಚಿಂತನೆ
ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ನ 24
ಹಸ್ತಪ್ರತಿಗಳಲ್ಲಿ ಸಾಹಿತ್ಯವನ್ನು ಕನ್ನಡ ಹಾಗೂ ಇತರೆ ಭಾಷೆಗಳಿಗೆ ಅನುವಾದಿಸುತ್ತಿರುವ ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಹಸ್ತಪ್ರತಿ ಡಿಪ್ಲೊಮೋ ಕೋರ್ಸ್ ತೆರೆಯುವಂತೆ ಮನವಿ ಮಾಡಿದ್ದು, ಕೋರ್ಸ್ ತೆರೆಯುವ ಚಿಂತನೆ ನಡೆದಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹಿ.ಚಿ ಬೋರಲಿಂಗಯ್ಯ ತಿಳಿಸಿದರು.
ತಾಲೂಕಿನ ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಹಸ್ತಪ್ರತಿ ತರಬೇತಿ ಹಾಗೂ ಜಾಗೃತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮ ವಿಶ್ವವಿದ್ಯಾನಿಲಯದ ವತಿಯಿಂದ ಹಸ್ತ ಪ್ರತಿ ಡಿಪ್ಲೊಮಾ ಕೋರ್ಸ್ ತೆರೆಯಲು ಮನವಿ ಮಾಡಿದ್ದು, ಈ ಬಗ್ಗೆ ವಿಶ್ವವಿದ್ಯಾನಿಲಯದ ಸಮಿತಿ ವರದಿಯ ಶಿಫಾರಸ್ಸು ಬಂದ ತಕ್ಷಣ ಕೋರ್ಸ್ ತೆರೆಯಲು ಮುಂದಾಗಲಾಗುವುದು ಎಂದು ತಿಳಿಸಿದರು.
ಓಲೆಗರಿ ಹಾಗೂ ಪುಸ್ತಕದಲ್ಲಿನ ಹಸ್ತಪ್ರತಿಗಳಲ್ಲಿನ ಸಾಹಿತ್ಯವನ್ನು ಸಂಶೋಧಿಸಿ ಹಲವು ಪುಸ್ತಕಗಳನ್ನು ಹೊರ ತಂದಿರುವ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಸ್ಥೆ ಸಾಹಿತ್ಯದ ಅನುವಾದದಲ್ಲಿ ತೊಡಗಿಸಿಕೊಂಡಿದ್ದು, ಡಿಪ್ಲೊಮೋ ಕೋರ್ಸ್ ತೆರೆದರೆ ಸಂಶೋಧನೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಹಸ್ತಪ್ರತಿಗಳು ಹಲವು ಮನೆಗಳಲ್ಲಿ ತುಂಬಿದ್ದು, ಅವುಗಳನ್ನು ನಾವು ಪತ್ತೆ ಹಚ್ಚಿ ಅದರಲ್ಲಿನ ಸಾಹಿತ್ಯವನ್ನು ಜನತೆ ನೀಡುವ ಕಾರ್ಯವನ್ನು ವಿಶ್ವವಿದ್ಯಾನಿಲಯ ಕೈಗೊಂಡಿದೆ. ಹಸ್ತಪ್ರತಿಗಳನ್ನು ಕೆಲವು ಮನೆಗಳಲ್ಲಿ ಪೂಜ್ಯ ವಸ್ತುಗಳಾಗಿಸಿಕೊಂಡಿದ್ದರೆ, ಕೆಲವರು ತಮ್ಮ ಬಡತನಕ್ಕಾಗಿ ಅದನ್ನು ಮಾರಾಟ ವಸ್ತುವಾಗಿಸಿಕೊಂಡಿದ್ದಾರೆ. ಹಸ್ತಪ್ರತಿಗಳನ್ನು ಮಾರಾಟ ಮಾಡುವ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಅದರಿಂದ ಸಾರ್ವಜನಿಕವಾಗಿ ಉಪಯೋಗವಾಗುವ ಬಗ್ಗೆ ತಿಳಿದು ಅವುಗಳನ್ನು ನೀಡಬೇಕು ಎಂದು ವಿನಂತಿಸಿದರು.
ಹಸ್ತಪ್ರತಿಗಳಲ್ಲಿ ಸಂಸ್ಕೃತಿ: ಹಸ್ತಪ್ರತಿಗಳಲ್ಲಿ ದೇಶದ ಅಂದಿನ ಸಂಸ್ಕೃತಿ ಹಾಗೂ ಸಾಹಿತ್ಯ ಹುದುಗಿದ್ದು, ಅದರ ಅರಿವು ಇಂದಿನ ಜನತೆಗೆ ಅಗತ್ಯವಿರುವುದರಿಂದ ಅವುಗಳನ್ನು ಜನತೆ ಬಚ್ಚಿಡದೆ ಹಾಗೂ ಕೆಡದಂತೆ ಕಾಪಾಡಿಕೊಂಡು ಸಂಶೋಧಕರಿಗೆ ನೀಡಿದರೆ ಒಳಿತಾಗುತ್ತದೆ ಎಂದರು.
ರಾಜ ಮಹಾರಾಜರ ಕಾಲದಲ್ಲಿನ ಚರಿತ್ರೆ ಹಾಗೂ ಅಂದಿನ ಸಂಸ್ಕೃತಿ ಹಸ್ತಪ್ರತಿಗಳಿಂದ ತಿಳಿಯಬಹುದಾಗಿದ್ದು, ಅವುಗಳಲ್ಲಿ ಕೆಲ ವೈಜ್ಞಾನಿಕ ಹಾಗೂ ಮೌಡ್ಯತೆಯ ಸನ್ನಿವೇಶಗಳನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಸಾಹಿತಿ ಸಿ.ಪಿ ಕೃಷ್ಣಕುಮಾರ್ ಮಾತನಾಡಿ ಶಾಸನಗಳು ಹಸ್ತಪ್ರತಿಗಳು ತಮಗೆ ಸಲಹೆ ಹಾಗೂ ಸಂಸ್ಕೃತಿಯನ್ನು ನೀಡುವುದರಿಂದ ಅವು ಸಜೀವವಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ತಮ್ಮದಾಗಿರುವುದರಿಂದ ಸಂರಕ್ಷಿಸಿಡುವುದು ತಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಹಸ್ತಪ್ರತಿಗಳನ್ನು ತಮ್ಮ ಮನೆಗಳ ಒಂದು ಕಡೆ ಹಲವು ದಿನಗಳಿಂದ ಇಟ್ಟುಕೊಂಡು ಅವುಗಳಿಗೆ ಪೂಜೆ ಮಾಡುವುದರಿಂದ ಎಣ್ಣೆ ತಾಗುತ್ತದೆ. ಕೆಲವೊಮ್ಮೆ ಗೆದ್ದಲು, ಹಿಡಿಯುವ ಸಂಭವವಿರುವುದರಿಂದ ಅವುಗಳ ಸಂರಕ್ಷಣೆ ಮಾಡುವವರಿಗೆ ನೀಡಬೇಕೆಂದು ಕೋರಿದರು.
ಡಾ.ಕೆ ರವೀಂದ್ರನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವೀರೇಶ ಬಡಿಗಾರ, ಪ್ರಾಕೃತ ಅಧ್ಯಯನ ಸಂಸೆ ಪ್ರಭಾರ ನಿರ್ದೇಶಕ ಸಣ್ಣಯ್ಯ ಉಪಸ್ಥಿತರಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

