ಸಂಘಗಳಿಂದ ಮಹಿಳಾ ಸ್ವಾವಲಂಬನೆ
ಕ.ಪ್ರ.ವಾರ್ತೆ ಅರಸೀಕೆರೆ ಸೆ.2
ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆಯಿಂದ ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳು ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಪಟ್ಟಣದ ಮಲ್ಲೇಶ್ವರ ನಗರದಲ್ಲಿನ ಕುರುಬ ಸಮಾಜ ಸಮುದಾಯ ಭವನದಲ್ಲಿ ನಡೆದ ಆಹಲ್ಯಾಭಾಯಿ ಹೊಳ್ಕರ್ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಗೆ ಪರೋಕ್ಷ ಸಹಕಾರ ನೀಡುತ್ತಿರುವ ಮಹಿಳಾ ಸ್ವಸಹಾಯ ಸಂಘಗಳನ್ನು ಅಸ್ತಿತ್ವಕ್ಕೆ ತರುವ ಮೂಲಕ ಸಮಾಜದ ಸರ್ವಾಂಗೀಣ ಬೆಳೆವಣಿಗೆಗೆ ತೆಗೆದುಕೊಂಡ ನಿರ್ಧಾರ ಅತ್ಯಂತ ಸ್ವಾಗತಾರ್ಹ ಎಂದರು.
ಸ್ವಸಹಾಯ ಸಂಘದಿಂದ ಆರ್ಥಿಕ ನೇರವು ಪಡೆದ ಮಹಿಳೆಯರು ಹೈನುಗಾರಿಕೆ, ಗೃಹ ಕೈಗಾರಿಕೆ ಸೇರಿದಂತೆ ಇತ್ಯಾದಿ ಕಸುಬುಗಳನ್ನು ಆರಂಭಿಸಿ ಕುಟುಂಬದ ಆರ್ಥಿಕ ಸಬಲತೆ ಹೆಚ್ಚಿಸಿಕೊಳ್ಳುವ ಜೊತೆಗೆ ಅನೇಕ ಬಡ ಕುಟುಂಬಗಳಿಗೆ ಶಾಪವಾಗಿದ್ದ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟದ ವಿರುದ್ಧ ಮಹಿಳೆಯರು ಹೋರಾಟ ನಡೆಸಿದ ಕಾರಣ ಅನೇಕ ಗ್ರಾಮಗಳಿಂದು ಮದ್ಯ ಮಾರಾಟದಿಂದ ಮುಕ್ತವಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಸನಾತನ ಧರ್ಮದಲ್ಲಿ ಮಹಿಳೆ ಶ್ರೇಷ್ಠ ಸ್ಥಾನ: ಆಹಲ್ಯಾಭಾಯಿ ಅವರ ಭಾವಚಿತ್ರದ ಅನಾವರಣ ಮಾಡಿದ ಹಾಸನದ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿ ಸನಾತನ ಧರ್ಮದಲ್ಲಿ ಮಹಿಳೆಯರಿಗೆ ಶ್ರೇಷ್ಠವಾದ ಸ್ಥಾನವಿದೆ. ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿರುವ ಕಾರಣ ಕೌಟುಂಬಿಕ ಸಮಸ್ಯೆಗಳು ದೂರವಾಗಿ ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗುತ್ತಿದೆ. ಆರ್ಥಿಕ ಸಮಾನತೆ ಜೊತೆಗೆ ಧಾರ್ಮಿಕ ಭಾವನೆಗಳನ್ನು ಸಮಾಜದಲ್ಲಿ ಬೆಳೆಸುವ ಜವಾಬ್ದಾರಿ ಕೂಡ ಮಹಿಳೆಯರ ಮೇಲಿದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಕೆ.ಆರ್.ನಗರದ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಪೂಜ್ಯ ಸ್ಥಾನದಲ್ಲಿ ಕಾಣಲಾಗುವುದು. ತಾಯಿ, ಸಹೋದರಿ, ಮಡದಿ, ಮಗಳಾಗಿ ಕುಟುಂಬದಲ್ಲಿ ಬೆಳೆಯುವ ಮಹಿಳೆ ಕುಟುಂಬ ಶ್ರೇಯಸ್ಸಿಗಾಗಿ ಅವಿರತ ಶ್ರಮಿಸುವ ಆಕೆಯ ಜವಾಬ್ದಾರಿ ಅತ್ಯಂತ ಮಹತ್ವಪೂರ್ಣವಾದುದು ಎಂದು ಹೇಳಿದರು.
ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಧಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮಮತ ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಸದಸ್ಯ ಹುಚ್ಚೇಗೌಡ, ಪಟೇಲ್ ಶಿವಪ್ಪ, ಪ್ರೇಮಮ್ಮ, ಟಿ.ಆರ್.ಕೃಷ್ಣಮೂರ್ತಿ ಅವರು ಮಾತನಾಡಿದರು.
ತಾಲೂಕು ಕನಕ ನೌಕರ ಸಂಘದ ಅಧ್ಯಕ್ಷ ಕವಲೀರಪ್ಪ, ವಕೀಲ ಆದಿಹಳ್ಳಿ ಲೋಕೇಶ್, ರೈತಸಂಘದ ಮುಖಂಡ ಕನಕಂಚೇನಹಳ್ಳಿ ಪ್ರಸನ್ನಕುಮಾರ್, ಪುರಸಭಾ ಮಾಜಿ ಸದಸ್ಯ ರೇವಣ್ಣ, ಮಹಿಳಾ ಸಹಕಾರ ಸಂಘದ ನಿರ್ದೇಶಕರು ಇದ್ದರು. ನಿವೃತ್ತ ಉಪ ತಹಸೀಲ್ದಾರ್ ಮೋಹನ್ಬೆಣ್ಣಿರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

