ಹಾಸನ

ನಗರದಲ್ಲಿ ಎಲ್ನೋಡಿ ಕಸ, ಕಸ...

Published On :

ಹಾಸನ: ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಕಸದ ರಾಶಿಗಳು ಹಾಗೂ ಅನೈರ್ಮಲ್ಯತೆ ಹೆಚ್ಚಾಗಿ ನಾನಾ ಕಾಯಿಲೆಗೆ ಎಡೆ ಮಾಡಿ ಕೊಡುತ್ತಿದೆ. ನಗರದಲ್ಲಿ ಉತ್ಪತ್ತಿಯಾಗುವ ಕರಗುವ ಹಾಗೂ ಕರಗದಂತಹ ಕಸವನ್ನು ಸಂಪೂರ್ಣವಾಗಿ ಸಂತೆಪೇಟೆ ನಗರಸಭೆಯ ಹಿಂಭಾಗದಲ್ಲಿ ರಾಶಿ ರಾಶಿ ಹಾಕಲಾಗುತ್ತಿದೆ. ಈ ಜಾಗದಲ್ಲಿ ಕಸದ ರಾಶಿ ಶಿಖರದಂತೆ ಬೆಳೆದಿದ್ದು ಈ ಭಾಗದಲ್ಲಿ ಅನೈರ್ಮಲ್ಯ ಹೆಚ್ಚಾಗಿದೆ.
ನಗರಸಭೆಯಿಂದ ನಗರದ ಕಸವನ್ನು ಒಂದೆಡೆ ಹಾಕಲು ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದೆ. ಆದರೆ ಆ ತೊಟ್ಟಿಯಲ್ಲಿ ಕಸ ಶೇಖರಣೆಯಾಗದೆ, ತೊಟ್ಟಿ ಮುಂದೆ ಹರಡಿ ಕೊಂಡಿರುತ್ತದೆ. ಇದಕ್ಕೆ ಕಾರಣ ಕಸವನ್ನು ಸರಿಯಾದ ಸಮಯಕ್ಕೆ ವಿಲೆವಾರಿ ಮಾಡದ ಕಾರಣ ಕಸ ಹರಡಿಕೊಂಡು ರಸ್ತೆಯಲ್ಲಿ ಬಿದ್ದು ಚೆಲ್ಲಾಡುತ್ತಿವೆ. ಇದರಿಂದ ಸಾರ್ವಜನಿಕರು ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರ ಬೆಳೆದಂತೆ ಅಲ್ಲಿ ಉತ್ಪತ್ತಿಯಾಗುವ ಕಸವು ಹೆಚ್ಚಲಿರುವುದು ಸಾಮಾನ್ಯ. ಈ ಹಿಂದೆ ನಗರದಲ್ಲಿ ಜನಸಂಖ್ಯೆ ಕಡಿಮೆ ಇದ್ದಿದ್ದರಿಂದ ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ನಗರಸಭೆಯ ಹಿಂದಿರುವ ಕೊಳಚೆ ಪ್ರದೇಶದಲ್ಲಿ ರಾಶಿ ಹಾಕಲಾಗುತ್ತಿತ್ತು. ಆದರೆ ಇತ್ತೀಚೆಗೆ ಕಸ ಹೆಚ್ಚಾಗಿ ಉತ್ಪತ್ತಿಯಾಗುತ್ತಿದ್ದರೂ ನಗರಸಭೆ ಅಥವಾ ಜಿಲ್ಲಾಡಳಿತವಾಗಲಿ ಈ ಕಸವನ್ನು ನಗರದ ಹೊರಗಡೆ ಹಾಕುವ ಕಾರ್ಯಕ್ಕೆ ಮುಂದಾಗುತ್ತಿಲ್ಲ.
ಸಂತೆಪೇಟೆ ಮೂಲಕ ಗೊರೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ಎರಡೂ ಬದಿಗಳಲ್ಲಿ ಕಸವನ್ನು ಸುರಿಯಲಾಗಿತ್ತು. ಇದರಿಂದ ಎರಡು ಕಡೆಗಳಲ್ಲಿ ಕಸ ಶಿಖರದಂತೆ ಗೋಚರಿಸುತ್ತಿದೆ. ಅಷ್ಟೇ ಅಲ್ಲದೆ ಹೆಚ್ಚಾಗಿ ದುರ್ವಾಸನೆ ಬೀರುವುದರಿಂದ ಈ ರಸ್ತೆಯಲ್ಲಿ ಓಡಾಡುವವರು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಶಾಪ ಹಾಕುವಂತಾಗಿದೆ. ಹಲವು ವರ್ಷಗಳಿಂದ ಕಸದ ರಾಶಿ ಹಾಕಿರುವುದರಿಂದ ಇಲ್ಲಿ ಹೆಚ್ಚಿನ ಅನೈರ್ಮಲ್ಯ ಉಂಟಾಗಿದೆ.

ನಿವಾಸಿಗಳ ವನವಾಸ:  ಕಸ ವಿಲೇವಾರಿ ಕಾರ್ಯವನ್ನು ಸಂಬಂಧಪಟ್ಟವರು ಮಾಡುತ್ತಿಲ್ಲ ಹಾಗೂ ಹಾಳವಾದ ಗುಂಡಿ ತೆಗೆದು ಕಸವನ್ನು ಮುಚ್ಚದಿರುವ ಕಾರಣ ಈ ಭಾಗದ ನಿವಾಸಿಗಳು ವನವಾಸ ಪಡುವಂತಾಗಿದೆ. ಕಸ ಹೆಚ್ಚಾಗಿ, ಅನೈರ್ಮಲ್ಯ ಉಂಟಾಗಿದ್ದರೆ, ಇಲ್ಲಿ ಪ್ಲಾಸ್ಟಿಕ್ನಂತಹ ವಸ್ತುಗಳನ್ನು ಬೆಂಕಿ ಹಾಕಿ ಸುಡುತ್ತಿರುವುದರಿಂದ ದಟ್ಟವಾದ ಹೊಗೆ ಉಂಟಾಗಿ ವಾಯು ಮಾಲಿನ್ಯವೂ ಹೆಚ್ಚಾಗುತ್ತಿದೆ.
ಇಲ್ಲಿನ ಕಸವನ್ನು ನಗರದ ಹೊರವಲಯದಲ್ಲಿ ಹಾಕಿ ಕಸದಿಂದ ರಸ ತೆಗೆಯುವಂತಹ ಕಾರ್ಯಕ್ಕೆ ನಗರಸಭೆ ಸಿದ್ದತೆಯನ್ನು ನಡೆಸಿತ್ತು. ಮೈಸೂರು ಹಾಗೂ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಕೈಗೊಂಡಿರುವಂತಹ ವಿಧಾನವನ್ನು ಅನುಸರಿಸಿ ಕರಗುವಂತಹ ಕಸವನ್ನು ಬಳಸಿ ಗೊಬ್ಬರ ತಯಾರಿಸುವ ಹಾಗೂ ಗ್ಯಾಸ್ ಉತ್ಪತ್ತಿ ಮಾಡುವ ಯೋಜನೆ ತಯಾರಿಸಲಾಗಿತ್ತು.  ಆದರೆ ಆ ಯೋಜನೆ ಪ್ರಾರಂಭಕ್ಕೆ ಯಾಕೋ ಇನ್ನೂ ಕಾಲ ಕೂಡಿ ಬಂದಿಲ್ಲ.
ಸದಸ್ಯರಿಗೆ ಮನವಿ ಮಾಡಿದ್ದರೂ ಪ್ರಯೋಜನವಿಲ್ಲ:  ಕೆಲ ಕೊಳಚೆ ಪ್ರದೇಶಗಳು ಹಾಗೂ ಸ್ಲಂಬೋರ್ಡ್ಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ನಗರಸಭೆ ಸರಿಯಾದ ಸಮಯಕ್ಕೆ ವಿಲೇವಾರಿ ಮಾಡದ ಕಾರಣ ಈ ಕಾಲೋನಿಗಳಲ್ಲಿ ನಾನಾ ಕಾಯಿಲೆಗಳು ಹರಡಿ ಇಲ್ಲಿನ ನಿವಾಸಿಗಳು ಅಸ್ಪಸ್ಥಗೊಂಡು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಸವನ್ನು ಸರಿಯಾದ ಸಮಯಕ್ಕೆ ವಿಲೇವಾರಿ ಮಾಡುವಂತೆ ನಗರಸಭೆ ಹಾಗೂ ಸದಸ್ಯರಿಗೆ ಮನವಿ ಮಾಡಿದ್ದರೂ ಏನೂ ಪ್ರಯೋಜನವಾಗಿಲ್ಲ.
ನಗರಸಭೆ ಹಿಂಭಾಗ ಸಂಗ್ರಹವಾಗಿರುವ ಕಸದ ರಾಶಿಯನ್ನು ಕೂಡಲೇ ವಿಲೇವಾರಿ ಮಾಡಿ ನಗರದ ನೈರ್ಮಲ್ಯ ಕಾಪಾಡುವ ಅನಿವಾರ್ಯತೆ ಹೆಚ್ಚಾಗಿದೆ. ಇಲ್ಲವಾದಲ್ಲಿ ನಗರದಲ್ಲಿ ರೋಗರುಜಿನಗಳು ಹೆಚ್ಚಾಗಿ ಸಾವು-ನೋವು ಸಂಭವಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುತ್ತಾರಾ ಹೇಗೆ?

- ಪಿ.ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.