ಶಿಷ್ಟರಿಗೆ ತೆರೆದ ಮನೆ, ದುಷ್ಟರಿಗೆ ಬಂದಿಖಾನೆ
ಕನ್ನಡಪ್ರಭ ವಾರ್ತೆ ಹಾಸನ ಸೆ. 22
ನಗರದ ಎನ್.ಆರ್. ವೃತ್ತದಲ್ಲಿ ಬಾರ್ ನಡೆಸಲು ಅನುಮತಿ ನೀಡಿರುವುದು ಸರಿಯೇ...? ಕುಡಿತವನ್ನೇಕೆ ಬ್ಯಾನ್ ಮಾಡುವುದಿಲ್ಲ? ಹಾಸನದಲ್ಲೇಕೆ ಹೆಲ್ಮೆಟ್ ಕಡ್ಡಾಯವಿಲ್ಲ? ರಸ್ತೆ ನಿಯಮ ಉಲ್ಲಂಘಿಸಿದ ಪೊಲೀಸರ ವಿರುದ್ಧ ದಂಡ ವಿಧಿಸಿದ ವರದಿ ನಾವು ಎಲ್ಲೂ ನೋಡೇ ಇಲ್ಲ! ಅವರಿಗೇನಾದು ವಿಶೇಷ ವಿನಾಯತಿ ಇದೆಯೆ?
ಇದೇನಿದು! ಪ್ರಶ್ನೆಗಳ ಸರಮಾಲೆ ಎಂಬ ಕುತೂಹಲವೇ?... ಇದು ನೂರಾರು ಮಕ್ಕಳಿಂದ ಮೂಡಿಬಂದ ನೂರಾರು ಪ್ರಶ್ನೆಗಳು. ಯಾವಾಗಲೂ ಗಂಭೀರ ಮುಖಭಾವ ಹೊಂದಿರುವ ಪೊಲೀಸರಿಂದ ಮೇಲೆ ಕೇಳಿದ ಮಕ್ಕಳ ಪ್ರಶ್ನೆಗಳಿಗೆ ನಗುಮೊಗದ ಉತ್ತರ.
ಇವೆಲ್ಲವೂ ನಡೆದದ್ದು ಹಾಸನ ಬಡಾವಣಾ ಪೊಲೀಸ್ ಠಾಣೆಯವರು ನಗರದ ಸುಗಮ ಸಂಚಾರ ನಿರ್ವಹಣೆಯ ಮಾಹಿತಿ ಕುರಿತು ವಾಸವಿ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಸಿದ ತೆರೆದ ಮನೆ ಕಾರ್ಯಕ್ರಮದಲ್ಲಿ.
ಹಾಸನದಲ್ಲೂ ಟ್ರಾಫಿಕ್ ಜಾಸ್ತಿಯಾಗಿದೆ. ಬೈಕ್ ಓಡಿಸುವವರ ಹಾವಳಿ ಜಾಸ್ತಿ. ಹಾಸನದಲ್ಲೇಕೆ ಹೆಲ್ಮೆಟ್ ಕಡ್ಡಾಯವಿಲ್ಲ. ಬಸ್ಗಳಿಗಿರುವಂತೆ ದ್ವಿಚಕ್ರ ವಾಹನಗಳಿಗೂ, ಏಕೆ ಸ್ಪೀಡ್ ಕಂಟ್ರೋಲರ್ ಹಾಕಬಾರದು
ಪ್ರಮುಖ ವೃತ್ತದಲ್ಲೇ ಎಲ್ಲವೂ: ಎನ್.ಆರ್. ವೃತ್ತದ ನಗರದ ಮುಖ್ಯ ವೃತ್ತ. ಅದರ ಸಮೀಪದಲ್ಲಿ ಪ್ರವಾಸಿ ಮಂದಿರ, ಪೊಲೀಸ್ ಠಾಣೆ, ಬ್ಯಾಂಕ್ಗಳು, ಜಿಲ್ಲಾ ಪಂಚಾಯತ್ ಕಚೇರಿ, ಪಂಚತಾರ ಅಶೋಕ ಹೊಟೇಲ್ ಎಲ್ಲವೂ ಇವೆ. ಇಂತಹ ಅತ್ಯಂತ ಪ್ರಮುಖ ಸ್ಥಳದಲ್ಲೇ ಬಾರ್ ಕೂಡ ಇದೆ. ಬಾರ್ಗಳು ಈಗ ಬೆಳಗಿನ ವೇಳೆಯಲ್ಲೇ ತೆಗೆದಿರುತ್ತವೆ.
ಫೋಟೋ ತೆಗೆದು ಪೇಪರ್ಗೆ ಹಾಕಿಬಿಡಿ: ಬಾರ್ಗಳನ್ನು ಯಾವ ಸ್ಥಳದಲ್ಲಿ ತೆರೆಯಬೇಕು, ಎಲ್ಲಿ ತೆರೆಯಬಾರದು ಎಂಬುದಕ್ಕೆ ಕಾನೂನು ಇಲ್ಲವೇ? ಅಥವಾ ಕಾನೂನು ಪಾಲನೆ ಆಗುತ್ತಿಲ್ಲವೆ, ಕುಡಿದು ವಾಹನ ಓಡಿಸುವವರನ್ನು ಹಿಡಿಯುತ್ತೀರಿ. ಕೋರ್ಟ್ ದಂಡ ವಿಧಿಸುತ್ತದೆ ನಿಜ. ಆದರೆ ಕುಡಿದು ಗಾಡಿ ಓಡಿಸುವವರಿಂದ ಇನ್ನೊಬ್ಬರ ಪ್ರಾಣ ಬಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ದಂಡ ವಿಧಿಸಿ ಬಿಟ್ಟು ಬಿಡುವ ಬದಲು ಕುಡಿತವನ್ನೇ ಏಕೆ ಬ್ಯಾನ್ ಮಾಡುವುದಿಲ್ಲ. ಶಾಲೆಯ ಸಮೀಪದ ಅಂಗಡಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಇತ್ಯಾದಿ ಸೇದುವುದು ನಿಷೇಧವಾಗಿದೆ. ಉಲ್ಲಂಘನೆ ಮಾಡಿದವರಿಗೆ ಯಾವುದೇ ಶಿಕ್ಷೆ ಇಲ್ಲವೆ? ಈ ರೀತಿ ಮಾಡುವ ವಿದ್ಯಾವಂತರನ್ನು ಹಿಡಿದು ದಂಡ ವಿಧಿಸುವ ಬದಲು, ಫೋಟೋ ತೆಗೆದು ಪೇಪರ್ಗೆ ಹಾಕಿಬಿಡಿ. ಹೀಗೆಲ್ಲಾ ಸಲಹೆ ಕೊಟ್ಟವರು ಕಾನೂನು ತಜ್ಞರಲ್ಲ ಪ್ರೌಢಶಾಲೆ ದಾಟದ ವಿದ್ಯಾರ್ಥಿಗಳು. ತಮ್ಮ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಪ್ರಶ್ನೆಗಳಿಗೂ ಸಮಂಜಸ ಉತ್ತರ ನೀಡಿದ ಪೊಲೀಸ್ ಅಧಿಕಾರಿಗಳು, ಬಾರ್ ವಿಚಾರ ಅಬಕಾರಿ ಇಲಾಖೆಗೆ ಸಂಬಂಧಪಟ್ಟ ವಿಷಯ ಎಂದರು.
ಬಾಲ್ಯದಲ್ಲೇ ಅರಿವು ಅಗತ್ಯ: ಜಿಲ್ಲಾ ಪೊಲೀಸ್ ಸಹಾಯಕ ಅಧೀಕ್ಷಕಿ ಜೆ.ಕೆ. ರಶ್ಮಿ ಪ್ರಾಸಂಗಿಕವಾಗಿ ಮಾತನಾಡಿ, ಮಕ್ಕಳ ಮನದಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವುದಕ್ಕೆ ನಾಂದಿ ಹಾಡಿದರು. ಎಳೆಯ ಹಂತದಲ್ಲೇ ನಿಯಮಗಳ ಪಾಲನೆಯ ಬಗ್ಗೆ ಜಾಗೃತಿ ವಹಿಸಿದರೆ, ಅದು ತಮ್ಮ ಜೀವನದ ಒಂದು ಅಂಶವೇ ಆಗಿಬಿಡುತ್ತದೆ. ನಿಯಮ ಉಲ್ಲಂಘನೆಗೆ ಅವಕಾಶವನ್ನೇ ಕೊಡುವುದಿಲ್ಲ. ಶಾಂತವಾದ ಬದುಕು ನಮ್ಮದಾಗುತ್ತದೆ ಎಂದು ಮನದಟ್ಟು ಮಾಡಿದರು.
ಸೋದರತೆಯ ಸಂಬಂಧ ಮೆರೆಯಿರಿ: ಗಂಡು ಮಕ್ಕಳು ಭಾವನಾತ್ಮಕ ಭಾರತದ ಸೋದರತೆಯ ಸಂಬಂಧವನ್ನು ಮೈಗೂಡಿಸಿಕೊಂಡು ಪರಸ್ಪರ ನೆರವಾಗಬೇಕು, ಒಳ್ಳೆಯವರ ಸಹವಾಸ ಮಾಡಿ, ಕೆಟ್ಟ ಕೆಲಸ ಮಾಡದ ಮಕ್ಕಳಿಗೆ ಹೆದರಿಕೆ ಎಂಬುದು ಇರುವುದಿಲ್ಲ. ಆದ್ದರಿಂದ ಪೊಲೀಸರೊಂದಿಗೆ ಧೈರ್ಯವಾಗಿ ವ್ಯವಹರಿಸಿ ಎಂದರು.
ನಂತರ ಎರಡು ಗಂಟೆಗೂ ಹೆಚ್ಚು ಕಾಲ ಮಕ್ಕಳೊಡನೆ ಸಂವಾದ ನಡೆಸಿದ ಬಡಾವಣಾ ಠಾಣೆಯ ಪೊಲೀಸ್ ಉಪ ನಿರೀಕ್ಷಕ ವಿಜಯಕೃಷ್ಣ ಠಾಣೆಯಲ್ಲಿ ತಾವು ನಿರ್ವಹಿಸುವ ಕೆಲಸಗಳು, ಹಂತ ಹಂತದ ಜವಾಬ್ದಾರಿಗಳು ಎಲ್ಲವನ್ನೂ ತಿಳಿಸಿಕೊಟ್ಟರು. ಪೊಲೀಸ್ ಠಾಣೆ ಒಳ್ಳೆಯವರಿಗೆ ಸದಾ ತೆರೆದ ಮನೆ, ದುರುಳರಿಗೆ ಮಾತ್ರ ಬಂದಿಖಾನೆ. ಇದರ ಪರಿಚಯಾತ್ಮಕ ಕಾರ್ಯಕ್ರಮವೇ ತೆರೆದಮನೆ ಎಂಬುದನ್ನು ತಿಳಿಯ ಪಡಿಸಿದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸಂಚಾರಿ ನಿಯಮಗಳು. ಅದರ ಉಲ್ಲಂಘನೆಗೆ ವಿಧಿಸುವ ದಂಡ ಶುಲ್ಕಗಳ ವಿಚಾರಗಳನ್ನು ವಿಷದವಾಗಿ ಪರಿಚಯಿಸಿದರು. ಸಂದರ್ಭಕ್ಕೆ ಪೂರಕವಾಗಿದ್ದ ಮಕ್ಕಳು ಹಾಡಿದ ಹೊಸ ಹಾದಿಯ ಮಾಡೋಣ ಗೀತೆ, ತೆರೆದ ಮನೆಯ ಕಲ್ಪನೆಯ ಚಿತ್ರ ನಿರ್ಮಾಣ ಮಾಡಿದ್ದ ಕಲಾ ಶಿಕ್ಷಕ ವಿರೂಪಾಕ್ಷರ ಚಿತ್ರ ಮೆಚ್ಚುಗೆಗೆ ಪಾತ್ರವಾಯಿತು. ಶಾಲಾ ಮುಖ್ಯ ಶಿಕ್ಷಕಿ ಶೀಲಾ ಸ್ವಾಗತಿಸಿ, ಕಲ್ಪನಾ ಅಲೋನಿ ವಂದಿಸಿದರು. ಪ್ರತಿಭಾಗಿರೀಶ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

