ನಗರಸಭೆ ವಿಸರ್ಜಿಸಿ
ಕನ್ನಡಪ್ರಭ ವಾರ್ತೆ ಹಾಸನ ಜು 10
ನಗರಸಭೆಯು ನಗರದ ಕಸವನ್ನು ಸರಿಯಾಗಿ ವಿಲೇವಾರಿ ಮಾಡದ ಹಾಗೂ ಅಭಿವೃದ್ಧಿ ಕುಂಠಿತವಾಗಿರುವುದರಿಂದ ಕೂಡಲೇ ನಗರಸಭೆಯನ್ನು ವಿಸರ್ಜಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದಲ್ಲಿ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಅನೈರ್ಮಲ್ಯಕ್ಕೆ ದಾರಿ: ನಗರದ ಸಂತೇಪೇಟೆಯಲ್ಲಿ ಕಸದ ರಾಶಿ ಬೆಳೆದು ಅನೈರ್ಮಲ್ಯಕ್ಕೆ ಕಾರಣವಾಗಿದೆ. ನಗರದಲ್ಲಿ ಉತ್ಪತ್ತಿಯಾಗುವಂತಹ ಕಸವನ್ನೆಲ್ಲ ತೆಗೆದುಕೊಂಡು ಬಂದು ಇಲ್ಲಿಗೆ ಸುರಿಯುತ್ತಿರುವುದರಿಂದ ಕಸದ ರಾಶಿ ಶಿಖರದಂತೆ ಬೆಳೆದಿದೆ. ಇಲ್ಲಿ ಸುರಿದಿರುವಂತಹ ಕಸವನ್ನು ಸರಿಯಾಗಿ ವಿಲೇವಾರಿ ಮಾಡದ ಕಾರಣ ದಶಕಗಳಿಂದ ಕಸ ವಿಲೇವಾರಿ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ಸಾರ್ವಜನಿಕರು ಇಲ್ಲಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯ ಹಿಂದೆ ಸೃಷ್ಟಿಯಾಗಿರುವ ಕಸದ ರಾಶಿಯನ್ನು ಇಲ್ಲಿಂದ ವಿಲೇವಾರಿ ಮಾಡುವುದಾಗಿ ಹೇಳಿದ್ದ ನಗರಸಭೆಯು ಈವರೆಗೂ ಇಲ್ಲಿರುವ ಕಸವನ್ನು ಸರಿಯಾದ ಸಮಯಕ್ಕೆ ವಿಲೇವಾರಿ ಮಾಡಿಲ್ಲ. ಗೊರೂರು ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಮಾರ್ಗದ ಎರಡು ಬದಿಗಳಲ್ಲಿ ಕಸವನ್ನು ಸುರಿಯಲಾಗುತ್ತಿದೆ. ಇದರಿಂದ ಎರಡು ಕಡೆಗಳಲ್ಲಿ ಕಸದ ರಾಶಿ ಗಿರಿ ಶಿಖರದಂತೆ ಗೋಚರಿಸುತ್ತಿದೆ. ಇದರಿಂದ ಅನೈರ್ಮಲ್ಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ನಗರಸಭೆ ನಿರ್ಲಕ್ಷ್ಯ: ಇಲ್ಲಿರುವ ಕಸವನ್ನು ವಿಲೇವಾರಿ ಮಾಡುವುದಾಗಿ ಹೇಳಿ ನಗರಸಭೆಯು ಈವರೆಗೂ ಮಾಡದ ಕಾರಣ ಈ ರಸ್ತೆಯಲ್ಲಿ ಓಡಾಡುವಂತಹ ಸಾರ್ವಜನಿಕರು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ದಶಕಗಳಿಂದ ಸಕವನ್ನು ಇಲ್ಲಿ ಸುರಿಯುತ್ತಿರುವುದರಿಂದ ಕರಗದಂತಹ ವಸ್ತುಗಳು ಅನೈರ್ಮಲ್ಯವನ್ನು ಉಂಟು ಮಾಡುತ್ತಿದ್ದು, ಜೊತೆಗೆ ಕಸದ ರಾಶಿಯು ದುರ್ವಾಸನೆ ಬೀರುತ್ತಿರುವುದರಿಂದ ನಗರದ ನೈರ್ಮಲ್ಯ ನಾಶವಾಗುತ್ತಿದೆ ಎಂದು ದೂರಿದರು.
ನಗಸಭೆಯಲ್ಲಿ ಅಧ್ಯಕ್ಷರು ಹಾಗೂ ಆಯುಕ್ತರ ನಡುವಿನ ಜಗಳಿದಿಂದ ಅಭಿವೃದ್ಧಿ ಕೆಲಗಳು ಕುಂಠಿತಗೊಂಡಿವೆ. ಇದರಿಂದ ಅಭಿವೃದ್ಧಿ ಕಾರ್ಯಗಳು ನಗರದಲ್ಲಿ ಕಾಣತ್ತಿಲ್ಲ. ಜೊತೆಗೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿದರು.
ಕಸ ವಿಲೇವಾರಿ ಮಾಡಿ: ಕಸವನ್ನು ವಿಲೇವಾರಿ ಮಾಡುವಂತಹ ಕಾರ್ಯವನ್ನು ಸಂಬಂಧಪಟ್ಟ ನಗರಸಭೆಯು ಮಾಡುತ್ತಿಲ್ಲ ಹಾಗೂ ಆಳವಾದ ಗುಂಡಿ ತೆಗೆದು ಕಸವನ್ನು ಮುಚ್ಚುವಂತಹ ಕಾರ್ಯವನ್ನು ಮಾಡದ ಕಾರಣ ಈ ಭಾಗದ ಜನರು ವನವಾಸ ಪಡುತ್ತಿದ್ದಾರೆ. ಆದ್ದರಿಂದ ಕೂಡಲೇ ನಗರಸಭೆಯನ್ನು ವಿಸರ್ಜಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪ್ರಸನ್ನಕುಮಾರ್, ಅಗಿಲೆ ಯೋಗೇಶ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

