ರಥದ ದುರಸ್ತಿ ವಿಳಂಬ
ಹೊಳೆನರಸೀಪುರ: ಅಷ್ಟೊಂದು ಗುಡುಗು -ಸಿಡಿಲು ಇದ್ರೂ ಮಳೆ ಮಾತ್ರ ಬೀಳ್ತಿಲ್ಲ, ಮೋಡ ಇದ್ದಿದ್ದು ನೋಡಿದ್ರೇ ಭಾರಿ ಮಳೆ ಬೀಳಂಗಿತ್ತು, ಈ ಸರ್ತಿ ಮಳೆ ಕಡಿಮೆನೋ ಏನೋ... ಈ ಎಲ್ಲ ಪ್ರಶ್ನೆಗಳಿಗೂ ಪಟ್ಟಣದಲ್ಲಿನ ಹಿರಿಯರು ನೀಡುತ್ತಿರುವ ಉತ್ತರ ನರಸಿಂಹ್ವಾಮಿ ದೇವ್ರ ತೇರನ್ನು ಮುಚ್ಚಿಲ್ಲ ಅದಕ್ಕೆ ಮಳೆಯೂ ಬರ್ತಿಲ್ಲ ಎಂಬುದಾಗಿದೆ.
ಇದು ಕಾಕತಾಳಿಯವೋ.. ಇಲ್ಲ ಮಳೇನೇ ಕಡಿಮೆಯೋ... ಅಂತೂ ಮಳೆಗಾಲ ಆರಂಭಗೊಂಡರೂ ಪಟ್ಟಣ ವ್ಯಾಪ್ತಿಯಲ್ಲಿ ಮಾತ್ರ ಬಂದ ಮಳೆಯೆಲ್ಲಾ ಕೈಕೊಡುತ್ತಿದೆ. ಇಲ್ಲಿನ ಬಹುತೇಕ ಹಿರಿಯರು ಹೇಳುವ ಮಾತನ್ನು ಕೇಳಿದಾಗ ಈ ಅನುಮಾನ ಎಲ್ಲರನ್ನೂ ಕಾಡದೇ ಇರದು. ಏಕೆಂದರೆ ಹಿರಿಯರು ಹೇಳುವಂತೆ ತಮಗೆ ಬುದ್ಧಿ ಬಂದಾಗಿನಿಂದಲೂ ತಮ್ಮ ಹಿರಿಯರು ಹೇಳುತ್ತಿದ್ದಂತೆ ಪಟ್ಟಣದ ಪುರದೈವವಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವರ ಜಾತ್ರೆಯ ಸಂದರ್ಭದಲ್ಲಿ ತೇರನ್ನು ಕಟ್ಟಿದ ಮೇಲೆ ಜಾತ್ರೆಗೂ ಮುನ್ನ ತೇರಿನ ಕಳಶಗಳ ಮೇಲೆ ನಾಲ್ಕು ಹನಿಯಾದರೂ ಮಳೆ ಬಿದ್ದೇ ಬೀಳುತ್ತದೆ ಎನ್ನುವ ಮಾತಂತೂ ಸತ್ಯವಾಗಿದೆ.
ಇನ್ನೂ ಜಾತ್ರೆಯೆಲ್ಲಾ ಕಳೆದ ಮೇಲೆ ವಾರದೊಳಗೆ ತೇರಿಗೆ ಕಟ್ಟಿದ್ದ ಮರ-ಮುಟ್ಟು ಹಾಗೂ ಕಳಶಗಳನ್ನು ಇಳಿಸಿ ತೇರಿನ ಮೇಲೆ ಹಿಂದಿನಿಂದಲೂ ಹಾಕುತ್ತಿದ್ದ ಅಟ್ಟಣಿಗೆ ಹಾಗೂ ಶೀಟುಗಳನ್ನು ಹೊದಿಸಿದ ಮೇಲಷ್ಟೇ ವಾಡಿಕೆಯಂತೆ ಮಳೆ ಬೀಳುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಬಲವಾಗಿ ಬೇರೂರಿದೆ. ಹಿಂದಿನಿಂದಲೂ ಇದ್ದ ಹಳೆಯ ತೇರನ್ನು ಕಟ್ಟಿ ಜಾತ್ರೆ ಮುಗಿದ ಕೂಡಲೇ ಬಿಚ್ಚಿ ಮೇಲ್ಬಾಗಕ್ಕೆ ಶೀಟುಗಳನ್ನು ಹೊದಿಸುವ ಸಂಪ್ರದಾಯ ನಡೆದುಕೊಂಡು ಬಂದಿತ್ತು.
ಇತ್ತೀಚೆಗೆ ನೂರಾರು ವರ್ಷಗಳ ಹಳೆಯ ತೇರಿನ ಬದಲಿಗೆ ನೂತನ ಬ್ರಹ್ಮರಥವನ್ನು ನಿರ್ಮಾಣಗೊಳಿಸಿದ ನಂತರದಲ್ಲಿ ನೂತನ ರಥಕ್ಕೆ ಸುವ್ಯವಸ್ಥಿತವಾದ ಶೆಡ್ ನಿರ್ಮಿಸಿ ಮಳೆ-ಬಿಸಿಲು-ಗಾಳಿಯಿಂದ ಸಂಪೂರ್ಣ ರಕ್ಷಣೆ ಒದಗಿಸಲಾಗಿತ್ತು. ಆದರೆ, ಈ ಬಾರಿಯ ರಥೋತ್ಸವದ ಸಂದರ್ಭದಲ್ಲಿ ಬ್ರಹ್ಮರಥದ ಗಾಲಿಗಳಿಗೆ ಹೊದಿಸಲಾಗಿದ್ದ ಕಬ್ಬಿಣದ ಬಳೆಗಳು ಕಳಚಿಹೋದ ಪರಿಣಾಮ ಅವುಗಳ ದುರಸ್ಥಿಗಾಗಿ ರಥಕ್ಕೆ ಇದ್ದ ಶೆಡ್ಡನ್ನು ಮತ್ತೆ ಹಾಕಿಲ್ಲ. ರಥದ ದುರಸ್ತಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಾರಣ ರಥದ ಶೆಡ್ ಹಾಕಲು ನಿಧಾನ ಮಾಡಲಾಗುತ್ತಿದೆ. ರಥವನ್ನು ಸುಸ್ಥಿತಿಯಲ್ಲಿಟ್ಟು ಅದರ ಸೂರನ್ನು ಮುಚ್ಚದೇ ನಿರ್ಲಕ್ಷ್ಯ ವಹಿಸಿರುವ ಸಂಬಂಧಿಸಿದವರಿಗೆ ಇದಾವುದರ ಪರಿವೆಯೂ ಇಲ್ಲದ ಕಾರಣ ಬಂದ ಮಳೆ ಬಂದಂತೆಯೇ ಹೋಗುತ್ತಿದೆ ಎಂಬ ಮಾತು ಪಟ್ಟಣದಲ್ಲಿ ಬಾಯಿಂದ ಬಾಯಿಗೆ ಹರಿದಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

