ಹಾಸನ

ಎಲ್ಲ ಠಾಣೆಗೂ ಸಿಸಿ ಟಿವಿ

Published On :

ಜಾವಗಲ್: ಜಿಲ್ಲೆಯ ಎಲ್ಲಾ ಠಾಣೆಗೂ ಸಿಸಿ ಟಿವಿ ಸೌಲಭ್ಯವನ್ನು ಶೀಘ್ರವೇ ವ್ಯವಸ್ಥೆಗೊಳಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದರು.
 ಇಲ್ಲಿಯ ಠಾಣೆಯಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗೆ ಉತ್ತರಿಸಿ, ಇಲಾಖೆಯಲ್ಲಿ ಪಾರದರ್ಶಕತೆ ತರುವುದು ತಮ್ಮ ಮುಖ್ಯ ಉದ್ದೇಶವಾಗಿದ್ದು ಒಂದು ವಾರದೊಳಗೆ 20 ಅಂಶಗಳ ನಾಮಫಲಕಗಳ ವ್ಯವಸ್ಥೆಯನ್ನು ಎಲ್ಲಾ ಠಾಣೆಗಳು, ಶಾಲೆ, ಬಸ್ಸು ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಭ್ರಷ್ಟಾಚಾರ ಸಹಿಸುವುದಿಲ್ಲ: ಸಾರ್ವಜನಿಕರೊಂದಿಗೆ ಪೋಲೀಸರು ಸೌಜನ್ಯ ಯುತವಾಗಿ ವರ್ತಿಸಬೇಕು. ಲಂಚಗುಳಿತನ, ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ. ಠಾಣೆಗಳನ್ನು ರಾಜಿ ಪಂಚಾಯಿತಿಕೇಂದ್ರಗಳನ್ನಾಗಿ ಪರಿವರ್ತಿಸುವುದಿಲ್ಲವೆಂದು ಹಾಗೂ ಮಧ್ಯವರ್ತಿಗಳಿಗೆ ಆಸ್ಪದ ನೀಡುವುದಿಲ್ಲ ಎಂದು ತಿಳಿಸಿದರು.
 ಸಾರ್ವಜನಿಕರ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೊದಲು ಪೊಲೀಸರು ಸ್ಥಳೀಯ ಗಣ್ಯರೊಂದಿಗೆ ಸಮಾಲೋಚನೆ ನಡೆಸುವುದು ಅಗತ್ಯವೆಂದರು.
40 ಇಲಾಖೆಗಳು: ಜನಸಾಮಾನ್ಯರಿಗೆ ಕಂದಾಯ, ಪೋಲೀಸ್, ಕೃಷಿ, ಸಾರಿಗೆ, ತೋಟಗಾರಿಕೆಯಂತಹ ಕೆಲವೇ ಕೆಲವು ಇಲಾಖೆಗಳು ತಿಳಿದಿರುತ್ತವೆ. ಜಿಲ್ಲಾ ಮಟ್ಟದಲ್ಲಿ ಸುಮಾರು 40 ಇಲಾಖೆಗಳಿದ್ದರೂ ಜನ ಸಾಮಾನ್ಯರಿಗೆ ತಿಳಿದಿರುವುದಿಲ್ಲವೆಂದರು.
ತಾತ್ಕಾಲಿಕ ವ್ಯವಸ್ತೆ: ಜಾವಗಲ್ ಪಟ್ಟಣದ ಮುಖ್ಯ ರಸ್ತೆ ಬದಿಯ ತಿಂಡಿ ತಿನಿಸುಗಳ ತಳ್ಳು ಗಾಡಿಗಳನ್ನು ಕಳೆದ ವಾರ ದಿಢೀರನೆ ತೆರವು ಗೊಳಿಸಿದ್ದರಿಂದ ಸುಮಾರು 20-25 ಕುಟುಂಬಗಳಿಗೆ ಜೀವನ ನಿರ್ವಹಣೆಗೆ ತೊಂದರೆಯಾಗಿದ್ದರ ಬಗ್ಗೆ ಉತ್ತರಿಸಿ, ಇಲಾಖೆಯ ಸಹಕಾರದೊಂದಿಗೆ ಗ್ರಾಮ ಪಂಚಾಯ್ತಿಯು ಸ್ವಚ್ಛತೆ, ಸಂಚಾರ ಮುಂತಾದವುಗಳ ಬಗ್ಗೆ ಗಮನ ಹರಿಸಿ ತಾತ್ಕಾಲಿಕವಾಗಿ ವ್ಯಾಪಾರ ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದರು.
 ವೃತ್ತ ನಿರೀಕ್ಷಕ ಆರ್.ವಿ ಗಂಗಾಧರಪ್ಪ ಮಾತನಾಡಿ,  ಸಾರ್ವಜನಿಕರು ಜನ ಸಂಪರ್ಕ ಸಭೆಗಳಿಗೆ ಹೆಚ್ಚಾಗಿ ಭಾಗವಹಿಸಿ ಕುಂದು ಕೊರತೆಗಳನ್ನು ತಿಳಿಸಿದಾಗ ಇಲಾಖೆಯು ಸರಾಗವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ ಎಂದರು.
ಸಮಸ್ಯೆಗಳು ನೂರಾರು: ರಸ್ತೆ ಬದಿ ತಿಂಡಿ ಅಂಗಡಿಗಳ ವ್ಯಾಪಾರಸ್ಥರ ಸಮಸ್ಯೆ ಪರಿಹರಿಸಿಕೊಡುವುದು, ಹಂದಿ ಹಾವಳಿ ತಡೆಗಟ್ಟುವುದು ಟ್ರಾಫಿಕ್ ಸಮಸ್ಯೆ ಬಗೆಹರಿಸಿಕೊಡುವುದು, ಪ್ರತಿ ಹಳ್ಳಿಗಳಿಗೂ ಕಡ್ಡಾಯವಾಗಿ ಬೀಟ್ ವ್ಯವಸ್ಥೆ ಮಾಡುವುದು ಮ್ಯಾಕ್ಸಿಕ್ಯಾಬ್‌ಗಳಿಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡುವುದು ಮುಂತಾದ ವಿಚಾರಗಳ ಬಗ್ಗೆ ತಾಪಂ ಸದಸ್ಯೆ ಲಕ್ಷ್ಮೀರವಿಶಂಕರ್, ತಾಪಂ ಮಾಜಿ ಸದಸ್ಯ ಜೆ.ಕೆ.ಸಿದ್ದೇಗೌಡ, ಸಂಕೀಹಳ್ಳಿ ಬಸವರಾಜು ಡಿಗ್ಗೇನಹಳ್ಳಿ ರಾಜಶೇಖರ್, ಜೆ.ಜಿ ತಿಮ್ಮೇಗೌಡ, ಫಿರೋಜ್ ಗಾಂಧಿ, ಜೆ.ಎಂ. ಜಯರಾಜು, ಜೆ.ಆರ್.ಯೋಗೀಶ್, ನರಸಿಂಹ ಸ್ವಾಮಿ, ಲೋಕೇಶ್. ಎನ್, ಗುರು ಮಾತನಾಡಿದರು.
 ಡಿವೈಎಸ್ಪಿ ಐ.ಜಿ. ಮಂಜುನಾಥ್, ಪಿ.ಎಸ್.ಐ ನವೀನ್ ಭಾಗವಹಿಸಿದ್ದರು. ಹೋಬಳಿಯ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.