ನಿಯಮ ಪಾಲಿಸಿ, ಅಪಘಾತ ತಪ್ಪಿಸಿ
ಸಕಲೇಶಪುರ: ಚಾಲಕರಲ್ಲಿರುವ ಆಹಂ ಹಾಗೂ ನಿರ್ಲಕ್ಷ್ಯವೇ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದ್ದಾರೆ.
ಪಟ್ಟಣದ ಪುರಸಭವನದಲ್ಲಿ ಸಾರಿಗೆ ಇಲಾಖೆ ಹಮ್ಮಿಕೊಂಡಿದ್ದ ರಸ್ತೆ ಅಪಘಾತ ತಡೆಗಟ್ಟುವ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಶೇ 90 ರಷ್ಟು ಅಪಘಾತಗಳನ್ನು ತಪ್ಪಿಸ ಬಹುದಾಗಿದೆ ಎಂದರು.
ಶೇ.1 ರಷ್ಟೂ ಪಾಲಿಸುತ್ತಿಲ್ಲ: ದೇಶದಲ್ಲಿ ಸಾಕಷ್ಟು ಕಾನೂನು ಹಾಗೂ ಅರಿವು ಮೂಡಿಸುವ ಕುರಿತು ಪುಸ್ತಕಗಳಿದ್ದರು ಇದುವರೆಗೆ ಕಾನೂನಿನ ಶೇ.1ರಷ್ಟು ಪಾಲನೆಯಾಗುತ್ತಿಲ್ಲ ಹಾಗೂ ಪುಸ್ತಕಗಳನ್ನು ಓದುವಷ್ಟು ವ್ಯವದಾನವು ಜನರಿಗಿಲ್ಲ. ಆದ್ದರಿಂದ ಶಿಸ್ತನ್ನು ಆಳವಡಿಸಿಕೊಂಡರೆ ಮಾತ್ರ ದಿನಂಪ್ರತಿ ಸಂಭವಿಸುವ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ.
ಅಧಿಕಾರಿಗಳು ರಸ್ತೆನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಸಾಹಿತಿ ಜ.ಹೊ. ನಾರಾಣಸ್ವಾಮಿ ಮಾತನಾಡಿ, ಕಾನೂನು ಮುರಿಯುವುದೇ ಬುದ್ಧಿವಂತಿಕೆ ಎಂಬ ಮನೋಭಾವನೆ ದೂರವಾಗುವವರೆಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿರುತ್ತವೆ. ಕಾನೂನು ಪಾಲನೆಯ ಮೂಲಕ ದೇಶದ ಗೌರವ ಹೆಚ್ಚುತ್ತದೆ ಎಂಬ ಮನೂಭಾವನೆ ಜನರಲ್ಲಿ ಮೂಡಬೇಕಿದ್ದು ಇದನ್ನು ವಿದ್ಯಾರ್ಥಿ ದಿಸೆಯಲ್ಲೆ ಮಾಡಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚು ಅಪಘಾತ: ಸಹಾಯಕ ಪ್ರಾದೇಶಿಕ ಸಾರಿಗೆ ಆಯುಕ್ತ ಮುಗುಳವಳ್ಳಿ ಕೇಶವ ಧರಣಿ ಮಾತನಾಡಿ, ದೇಶದಲ್ಲಿ ಹೆಚ್ಚು ವಾಹನ ಅಪಘಾತಗಳು ಸಂಭವಿಸುವ ರಾಜ್ಯ ಕರ್ನಾಟಕ ಎಂಬ ಕುಖ್ಯಾತಿ ಪಡೆದಿದ್ದು. ರಾಜ್ಯದಲ್ಲಿ ಕಳೆದ ವರ್ಷ ರಸ್ತೆ ಅಪಘಾತಗಳಲ್ಲಿ 9480 ಜನ ಜೀವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲೇ ಹೆಚ್ಚು ಅಪಘಾತ ಸಂಭವಿಸುವುದು ಹಾಸನ ಜಿಲ್ಲೆಯಾಗಿದ್ದು, ಇಲ್ಲಿ 448 ಜನರು ರಸ್ತೆ ಅಪಘಾತಗಳಿಗೆ ಬಲಿಯಾಗಿದ್ದಾರೆ. ಇದರಲ್ಲಿ ಸಕಲೇಶಪುರದಲ್ಲೆ ಸಾವಿಗೀಡಾದವರ ಸಂಖ್ಯೆ 140 ಆಗಿದೆ ಎಂದರು. ಸಹಾಯಕ ಸಾರಿಗೆ ಆಯುಕ್ತ ಮುಗುಳವಳ್ಳಿ ಕೇಶವ ಧರಣಿ ಅವರ ರಸ್ತೆ ಅಪಘಾತ ತಪ್ಪಿಸುವುದು ಹೇಗೆ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಉಪವಿಭಾಗಾಧಿಕಾರಿ ಮಧುಕೇಶ್ವರ್, ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು, ಡಾ.ಮಲ್ಲಿಕಾರ್ಜುನಸ್ವಾಮಿ, ಅಬಕಾರಿ ಡಿ.ವೈ.ಎಸ್.ಪಿ ಮಹದೇವಿಬಾಯಿ, ಕಸಾಪ ಕಾರ್ಯದರ್ಶಿ ಪ್ರಸನ್ನಕುಮಾರ್, ಅರುಣ್ ರಕ್ಷಿದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

