ಹಾಸನ

ದೂರು 64, ಪರಿಹಾರ ಒಂದಕ್ಕೆ

Published On :

ಕನ್ನಡಪ್ರಭ ವಾರ್ತೆ, ಹಾಸನ, ಜೂ 25
ನಗರದ ಕಲಾಭವನದಲ್ಲಿ ಬುಧವಾರ ನಡೆದ ರಾಜ್ಯ ಲೋಕಾಯುಕ್ತರ ದೂರುಗಳ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಬಂದಿದ್ದ ಬಹಳಷ್ಟು ಜನರು ಜಿಲ್ಲೆಯ ನಾನಾ ಇಲಾಖೆಗಳಲ್ಲಿ ನಡೆಯುತ್ತಿರುವ ವಿಳಂಬ ನೀತಿ, ಭ್ರಷ್ಟಾಚಾರ ಮತ್ತಿತರ ಪ್ರಕರಣಗಳ ಬಗ್ಗೆ ಬ್ರಹ್ಮಾಂಡವನ್ನೇ ತೆರೆದಿಡಲು ಸಿದ್ದರಾಗಿ ಬಂದಿದ್ದರು. ಆದರೆ ಲೋಕಾಯುಕ್ತರು ಅದಕ್ಕೆ ಅವಕಾಶ ನೀಡದೇ ದೂರುಗಳ ಶೀಘ್ರ ವಿಲೇವೇರಿ ಮಾಡಿದರು.
 ಜನರು ಹಿಂದಿನ ನಿವೃತ್ತ ಲೋಕಾಯುಕ್ತ ವೆಂಕಟಾಚಲರಂತೆ ಈಗಿನ ಲೋಕಾಯುಕ್ತರು, ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳಿಗೆ ಸಾರ್ವಜನಿಕವಾಗಿ ಛೀಮಾರಿ ಹಾಕುತ್ತಾರೆ ಎಂದು ನಿರೀಕ್ಷೆ ಮಾಡಿದ್ದರು. ಆದರೆ ಲೋಕಾಯುಕ್ತರು, ಎಲ್ಲಾವನ್ನೂ ಸಮಚಿತ್ರ, ಸಮಭಾವದಿಂದ ಪರಾಮರ್ಶೆ ಮಾಡಿ, ಬಂದಿದ್ದ 64 ದೂರುಗಳ ಪೈಕಿ ಒಂದಕ್ಕೆ ಸ್ಥಳದಲ್ಲೇ ಪರಿಹಾರ ಸೂಚಿಸಿ, 63 ದೂರುಗಳ ಬಗ್ಗೆ ತನಿಖೆ ನಡೆಸಿ ನಿಗದಿತ ವೇಳೆಯಲ್ಲಿ ವರದಿ ನೀಡಬೇಕು ಎಂದು ಗಡುವು ನೀಡಿದರು. ಕಂದಾಯ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ. ಪುರಸಭೆ, ಭೂಸ್ವಾಧೀನ ಇಲಾಖೆಗಳ ಬಗ್ಗೆ ಹೆಚ್ಚು ದೂರುಗಳು ದಾಖಲಾಗಿದ್ದವು.
 ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಖಾಸಗಿ ಶಾಲೆಯಲ್ಲಿ ಮಗುವೊಂದಕ್ಕೆ ಪ್ರವೇಶ ನೀಡಲು ಸೂಚಿಸುವ ಮೂಲಕ ಸ್ಥಳದಲ್ಲೇ ಪರಿಹಾರ ನೀಡಿದ ಲೋಕಾಯುಕ್ತರು, ಉಳಿದ 63 ಸಾರ್ವಜನಿಕರ ದೂರುಗಳ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಆಯಾ ಇಲಾಖೆಯ ಮುಖ್ಯಾಧಿಕಾರಿಗಳಿಗೆ ಆದೇಶಿದರು.
ವಿಧಾನಸೌಧ ಸರಿಯಾಗಿಲ್ಲ ಅಂದ್ರೆ: ಹಾಸನ ತಾಲೂಕು ಯಲಗುಂದ ಗ್ರಾಮದ ವೈ.ಎಸ್. ಶಾಂತಕುಮಾರ್ ಅವರು, ಸುವರ್ಣ ಗ್ರಾಮ ಯೋಜನೆಯಡಿ 23.24 ಲಕ್ಷ ರು. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಇದು ಕಳಪೆಯಾಗಿದೆ ಎಂದು ದೂರಿದರು.  ಇದರಿಂದ ಅಸಮಾಧಾನಗೊಂಡ ಲೋಕಾಯುಕ್ತರು, ವಿಧಾನಸೌಧ ಸರಿಯಾಗಿ ನಿರ್ಮಾಣವಾಗಿಲ್ಲ ಅಂತ ಹೇಳಿದರೇ ತನಿಖೆ ಮಾಡಿಲಿಕ್ಕೆ ಆಗುತ್ತಾ ... ಪ್ಲೀಸ್.. ನೀವು ದಾಖಲೆಗಳನ್ನು ನೀಡಿ ಎಂದರು.
 ಹಾಸನ ತಾಲೂಕು ದೊಡ್ಡ ಮಂಡಿಗನಹಳ್ಳಿ ಶಂಕರ್ ಎಂಬುವರು ಹಾಸನ ನಗರದ ಖಾಸಗಿ ಶಾಲೆಯಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ತಮ್ಮ ಮಗುವಿಗೆ ಎಲ್‌ಕೆಜಿಗೆ ಪ್ರವೇಶ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದು ಏಕೆ  ಎಂದು ಲೋಕಾಯುಕ್ತರು ಪ್ರಶ್ನಿಸಿ, ಕೂಡಲೇ ಮಗುವಿಗೆ ಪ್ರವೇಶ ಕೊಡಿಸಿ ಎಂದು ಆದೇಶಿದರು.
ಎರಡು ಬಿಲ್:  ಹಾಸನ ನಗರದ ವಿದ್ಯಾನಗರ ಬಡಾವಣೆ ನಿವಾಸಿ ಬಿ.ಆರ್. ಮಂಜುನಾಥ್ ಎಂಬುವರು ತಮ್ಮ ಬಡಾವಣೆಯ ಒಳಚರಂಡಿಯನ್ನು 13.50 ಲಕ್ಷ ರು. ವೆಚ್ಚದಲ್ಲಿ ಕೆಲ ದಿನಗಳ ಹಿಂದಷ್ಟೇ ನಿರ್ಮಿಸಲಾಗಹಿದೆ. ಈಗ ಮತ್ತೆ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಎರಡೆರಡು ಬಿಲ್‌ಗಳನ್ನು ಪಾವತಿ ಮಾಡುವ ಮೂಲಕ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ನಗರಸಭೆ ಆಯುಕ್ತರು, ಸಾರ್ವನಿಕರ ಅಪೇಕ್ಷೆ ಮೇರೆಗೆ ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಇದನ್ನು ಒಪ್ಪದ ದೂರುದಾರ, ಸಾರ್, ಅದು ಅಪ್ಪಟ್ಟ ಸುಳ್ಳು ಸಾರ್ ಎಂದು ತಿರುಗೇಟು ನೀಡಿದರು. ಆಗ ಲೋಕಾಯುಕ್ತರು, ಈ ಬಗ್ಗೆ ತನಿಖೆ ಮಾಡಿ ತಿಂಗಳಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು.
ಲೋಕಾಯುಕ್ತ  ರಿಜಿಸ್ಟ್ರಾರ್ ಎಚ್. ಆರ್. ಶೇಷಪಾಂಡೆ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಎಸ್ಪಿ ರವಿ ಡಿ ಚನ್ನಣ್ಣನವರ,  ಜಿಪಂ ಸಿಇಓ ಉಪೇಂದ್ರ ಪ್ರತಾಪ್ ಸಿಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ, ಹಾಸನ ಉಪ ವಿಭಾಗಾಧಿಕಾರಿ ಶರತ್, ಸಕಲೇಶಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್, ಹಾಸನ ಲೋಕಾಯುಕ್ತ ಎಸ್ಪಿ ವೇದಾಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.