ಹಾಸನ

ಬಾರದ ಮಳೆ: ಒಣಗುತ್ತಿರುವ ಬೆಳೆ

Published On :

ಹಾಸನ: ಈಗ ಮಳೆರಾಯನಿಂದ ಮಾತ್ರ ಅನ್ನದಾತರನ್ನು ಕಾಪಾಡಲು ಸಾಧ್ಯ. ಆಕಾಶದಲ್ಲಿ ಮಧ್ಯಾಹ್ನ ಮುಗಿಯುತ್ತಲೇ ದಟ್ಟನೆ ಮೋಡ ಕಾಣಿಸುತ್ತದೆ. ಅದನ್ನು ಕಂಡ ರೈತ ಇವತ್ತು ಮಳೆ ಗ್ಯಾರಂಟಿ ಎಂದು ಖುಷಿ ಪಡುತ್ತಲೇ ನಿರಾಶೆ ಆವರಿಸಿಕೊಳ್ಳುತ್ತದೆ. ಬಂದೇ ಬಿಡ್ತು.. ಮಳೆ ಎನ್ನುವಾಗಲೇ ಬಿರುಗಾಳಿ ಬೀಸಿ ಮೋಡಗಳನ್ನು ಮಾಯ ಮಾಡಿ ಮಳೆಯನ್ನು ಇಲ್ಲವಾಗಿಸುತ್ತದೆ.
ಜಿಲ್ಲಾದ್ಯಂತ ಇತರೆ ಬೆಳೆಗಳಂತೆ ರೈತರಿಗೆ ಮೂರು ತಿಂಗಳಿಗೆ  ನಾಲ್ಕು ಕಾಸು ಸಿಗುವಂತೆ ಮಾಡುವ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆಯೂ ಮಳೆಯಿಲ್ಲದೇ ಒಣಗುತ್ತಿದೆ. ಜಿಲ್ಲೆಯಲ್ಲಿ 16, 000 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗಿದೆ. ಆರಂಭದಲ್ಲಿ ಮುಂಗಾರು ಮಳೆ ಪರವಾಗಿಲ್ಲ ಎಂಬುವಷ್ಟರ ಮಟ್ಟಿಗೆ ಸುರಿಯಿತು. ಇದನ್ನು ನಂಬಿ ರೈತರು ಆಲೂಗಡ್ಡೆ ಬಿತ್ತನೆ ಮಾಡಿದರು.
ಈಗ ಆಲೂಗಡ್ಡೆ ಗೆಂಡೆ ಕಟ್ಟುವ ಸಮಯ, ಮಳೆ ಬೇಕು. ಆದರೆ ಮಳೆ ಇಲ್ಲ. ಮಳೆ ಇಲ್ಲದ ಪರಿಣಾಮ ವಿಪರೀತ ಉಷ್ಣಾಂಶವಿದೆ. ಆಲೂ ಗೆಂಡೆ ಕಟ್ಟಲು 18 ರಿಂದ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಬೇಕು. ಆದರೀಗ 30 ರಿಂದ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಇದರಿಂದ ಗೆಂಡೆ ಕಟ್ಟಲು ಸಾಧ್ಯವಾಗುವುದಿಲ್ಲ. ಕಾರಣ, ಭೂಮಿಯಲ್ಲಿ ತೇವಾಂಶ ತೀವ್ರವಾಗಿ ಕಡಿಮೆಯಾಗಿ ಗೆಂಡೆ ಕಟ್ಟಲು ಬೇಕಾದ ಅಗತ್ಯ ಪೋಷಾಕಾಂಶಗಳನ್ನು ಸರಬರಾಜು ಮಾಡಲು ಬೇರಿಗೆ ಕಷ್ಟವಾಗುತ್ತದೆ.
ಪಂಪ್ ಸೆಟ್ ಆಧಾರದ ಮೇಲೆ ಬಿತ್ತನೆ ಮಾಡಿರುವ ಆಲೂಗಡ್ಡೆ ಬೆಳೆ ಒಣಗುತ್ತಿದೆ. ಕೆರೆ, ಕಟ್ಟೆಗಳು ಮಳೆಯಿಲ್ಲದೇ ಬತ್ತಿ ಹೋಗುತ್ತಿರುವುದರಿಂದ ಅಂತರ್ಜಲ ಕಡಿಮೆಯಾಗಿ ಆಲೂ ಬೆಳೆಗೆ ಬೇಕಾಗುವಷ್ಟು ನೀರು ಲಭ್ಯವಾಗುತ್ತಿಲ್ಲ. ಹಾಗಾಗಿ ಮಳೆ ಮತ್ತು ಪಂಪ್‌ಸೆಟ್ ನಂಬಿ ಬೆಳೆದಿರುವ ಆಲೂಗಡ್ಡೆ ಒಣಗುತ್ತಿದೆ.
ಸದ್ಯದಲ್ಲಿ ಮಳೆಯಾದರೂ ಆಲೂಗಡ್ಡೆ ಇಳುವರಿ ಕಡಿಮೆಯಾಗುತ್ತದೆ. ಈ ಬಾರಿ ಬಹುತೇಕ ಪಂಪ್ ಸೆಟ್ ಹೊಂದಿರುವ ರೈತರು ಶುಂಠಿ ಬೆಳೆಯುತ್ತಿರುವುದರಿಂದ ಬಚಾವ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಉತ್ತಮವಾಗಿತ್ತು: ಹಿಂದಿನ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆ ಉತ್ತಮವಾಗಿತ್ತು. ಆದ್ದರಿಂದ ಆಲೂಗಡ್ಡೆ ಬೆಳೆ ರೈತರ ಮನೆ ಸೇರಿತ್ತು. ಆದರೆ ಈ ವರ್ಷ ಮಳೆ ಕೈ ಕೊಟ್ಟಿರುವುದು ರೈತರನ್ನು ಕಂಗಾಲಾಗಿಸಿದೆ. ಈಗ ಆಲೂಗಡ್ಡೆ ಉತ್ತಮ ಬೆಲೆ ಇದೆ. ಕೆಜಿ ಆಲೂಗಡ್ಡೆ 30 ರಿಂದ 32 ರು. ಇದೆ. ಆದರೆ ಮಳೆ ಇಲ್ಲದೇ ಬಿತ್ತಿದ ಆಲೂಗಡ್ಡೆ ಒಣಗುತ್ತಿದೆ.
18 ಸಾವಿರ ವೆಚ್ಚ: ಈ ಬಾರಿ ಜಿಲ್ಲಾಡಳಿತ ಕೆಲ ಯಡವಟ್ಟುಗಳಿಂದ ಬಿತ್ತನೆ ಆಲೂಗಡ್ಡೆ ಬೆಲೆ ರೈತರ ಪಾಲಿಗೆ ಹೆಚ್ಚಾಯಿತು ಎಂದೇ ಹೇಳಬಹುದು. ಪರಿಣಾಮ ರೈತರು ಕ್ವಿಂಟಲ್ ಬಿತ್ತನೆ ಆಲೂಗಡ್ಡೆಯನ್ನು 2 ಸಾವಿರ ರು.ಗಳಿಗೂ ಹೆಚ್ಚು ಹಣ ತೆತ್ತು ಖರೀದಿಸಬೇಕಾಯಿತು. ಒಂದು ಹೆಕ್ಟೇರ್‌ಗೆ ಸುಮಾರು 5 ಕ್ವಿಂಟಲ್ ಬೇಕು. ಕ್ವಿಂಟಲ್‌ಗೆ 2 ಸಾವಿರ ರು. ನಂತಾದರೇ 10 ಸಾವಿರ ರು. ಆಯಿತು. ಅಲ್ಲದೇ ಕೂಲಿ, ರಸಗೊಬ್ಬರ ಮತ್ತಿತರ ವೆಚ್ಚಗಳಿಗೆ 5 ರಿಂದ 8 ಸಾವಿರ ರು. ವೆಚ್ಚವಾಗುತ್ತದೆ.

 ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.