ಹಾಸನ

ರಸ್ತೆ ಬದಿ ಅಂಗಡಿ ಉಳಿಸಿ

Published On :

ಹಾಸನ: ಡೈರಿ ವೃತ್ತದ ಸುತ್ತ ಇರುವ ರಸ್ತೆ ಬದಿ ಅಂಗಡಿಗಳನ್ನು ಉಳಿಸುವಂತೆ ರಸ್ತೆ ಬದಿ ವ್ಯಾಪಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಕಳೆದ ಹಲವು ವರ್ಷಗಳಿಂದ ರಸ್ತೆ ಬದಿ ಸಣ್ಣ ಅಂಗಡಿಗಳನ್ನು ಹಾಕಿಕೊಂಡು ನಮ್ಮ ಕುಟುಂಬ ನಿರ್ವಹಿಸಲಾಗುತ್ತಿದೆ. ಆದರೆ ಈಗ ಏಕಾಏಕಿ ಅಂಗಡಿ ತೆರುವುಗೊಳಿಸುವ ಆದೇಶವನ್ನು ಜಿಲ್ಲಾಧಿಕಾರಿ ಹೊರಡಿಸಿದ್ದಾರೆ. ಸೋಮವಾರ 10 ಗಂಟೆಯೊಳಗೆ ತೆರವುಗೊಳಿಸುವಂತೆ ಎರಡು ದಿನದ ಹಿಂದೆ ಗಡುವು ನೀಡಲಾಗಿತ್ತು. ಡೈರಿ ವೃತ್ತದ ಸುತ್ತ ಇರುವ 30 ಅಂಗಡಿಗಳನ್ನು ಯಾರು ತೆರವುಗೊಳಿಸಿರುವುದಿಲ್ಲ. ಈ ಅಂಗಡಿಗಳಿಂದ ನಮ್ಮ ಜೀವನ ನಡೆಸಲಾಗುತ್ತಿದ್ದು, ತೆರವುಗೊಳಿಸಲು ಜಿಲ್ಲಾಡಳಿತ ಮುಂದಾದರೇ ನಮ್ಮ ಜೀವನ ಬೀದಿ ಪಾಲಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು. ಇದೆ ವೇಳೆ ರಸ್ತೆ ಬದಿ ಅಂಗಡಿ ವ್ಯಾಪಾರಸ್ಥರಾದ ಮಂಜುಳಾ, ಉಷಾ, ಸರಸಮ್ಮ, ರತ್ಮಮ್ಮ, ಆನಂದ್ ಇದ್ದರು.
ಇಬ್ಬರು ಕಳ್ಳರ ಬಂಧನ
ಮೈಸೂರು: ಇಬ್ಬರು ಕಳ್ಳರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿ, 2.50 ಲಕ್ಷ ಮೌಲ್ಯದ ಚಿನ್ನದ ಸರ, ಆಟೋ ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹಿನಕಲ್ ನಿವಾಸಿ ಲೇ. ನಂಜುಂಡಸ್ವಾಮಿ ಎಂಬವರ ಪುತ್ರ ಯೋಗೇಶ ಅ. ಕಪ್ಪೆ (23) ಮತ್ತು ಹೂಟಗಳ್ಳಿ ಕೆಎಚ್‌ಬಿ ಕಾಲೋನಿ ನಿವಾಸಿ ಶಿವರಾಜು ಎಂಬವರ ಪುತ್ರ ಅಶೋಕ (23) ಬಂಧಿತ ಆರೋಪಿಗಳು. ಆರೋಪಿ ಯೋಗೇಶ್ ಕಳವು ಮಾಡಿದ್ದ ವಿಜಯನಗರ ಠಾಣೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ಯಾಸೆಂಜರ್ ಆಟೋ, 1 ದ್ವಿಚಕ್ರ ವಾಹನ, ಕೃಷ್ಣರಾಜ ಠಾಣೆ ಹಾಗೂ ಬೆಂಗಳೂರು ನಗರದಲ್ಲಿ ಕಳುವು ಮಾಡಿದ್ದ ತಲಾ ಒಂದು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಯೋಗೇಶ್ ಹಾಗೂ ಅಶೋಕ ಸೇರಿ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಸರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಗ್ರಾಂ. ತೂಕದ ಚಿನ್ನದ ಸರದ ತುಂಡನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಜಯನಗರ ಠಾಣೆಯ ಇನ್ಸ್‌ಪೆಕ್ಟರ್ ಸಿ.ವಿ.ರವಿ, ಎಸ್‌ಐ ರಘುಪ್ರಸಾದ್, ಎಎಸ್‌ಐ ಎಂ.ವೈ. ವಸಂತಕುಮಾರ್, ಮತ್ತು ಸಿಬ್ಬಂದಿ ಕೃಷ್ಣ, ದಿವಾಕರ, ಚನ್ನಬಸವಯ್ಯ, ಸೋಮಶೆಟ್ಟಿ, ಸಾಗರ್, ಸುರೇಶ ಈ ಪತ್ತೆ ಮಾಡಿದ್ದಾರೆ.
ಸಾರಿಗೆ ಸೆಸ್‌ಗೆ ಖಂಡನೆ
ಮೈಸೂರು: ನಗರ ಪಾಲಿಕೆಯು ಆಸ್ತಿ ತೆರಿಗೆ ಜೊತೆಗೆ ನಗರ ಸಾರಿಗೆ ಶೀರ್ಷಿಕೆಯಡಿ ಉಪಕರ ವಿಧಿಸುವುದು ಮತ್ತು ಕಾನೂನು ಬಾಹಿರ ಎಂದು ಜೆ.ಪಿ. ನಗರ ನಿವಾಸಿ ಜಿ.ಎಲ್. ನಾಗರಾಜ ಅರಸ್ ಮತ್ತು ಎನ್. ರಾಜೇಂದ್ರ ಖಂಡಿಸಿದ್ದಾರೆ. ನಾಗರಿಕರಿಗೆ ಕೆಲವು ಸವಲತ್ತು ನೀಡಲು, ಆಡಳಿತ ಯಂತ್ರ ಸೇವೆಗೆ ತಕ್ಕ ತೆರಿಗೆ ವಸೂಲು ಮಾಡುವುದು ಸರ್ವವಿಧಿತ. ತೆರಿಗೆ ವಿಧಿಸುವಾಗ ಯಾವ ವಿಧಾನ ಅನುಸರಿಸಬೇಕು ಎಂಬ ಬಗ್ಗೆ ಕೆಎಂಸಿ ಕಾಯ್ದೆಯಲ್ಲಿದೆ. ಹೊಸ ತೆರಿಗೆ ವಿಧಿಸುವಾಗ ಅನುಸರಿಸಬೇಕಾದ ಮಾರ್ಗದಂತೆ ಎಲ್ಲಾ ವಿಧವಾದ ಆಗು ಹೋಗುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ನಗರದ ಗ್ರಾಹಕ ಸಂಸ್ಥೆಯು ಈಗಾಗಲೆ 4ನೇ ಅಪರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನಗರ ಸಾರಿಗೆ ಸೆಸ್ ಎಂಬ ಶೀರ್ಷಿಕೆಯಡಿ ವಸೂಲು ಮಾಡಲು ಪಾಲಿಕೆ ಮುಂದಾಗಿದೆ. ಅಲ್ಲದೆ ಏ. 1 ರಿಂದಲೆ ಈ ಆದೇಶ ಜಾರಿಗೆ ತಂದಿರುವುದು ಕಾನೂನು ಬಾಹಿರ. ಏಕೆಂದರೆ ಕೆಎಸ್‌ಆರ್‌ಟಿಸಿ ಸಂಸ್ಥೆಯು ರಾಜ್ಯ ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ನಗರ ಪಾಲಿಕೆಗೂ ಮತ್ತು ಸಾರಿಗೆ ಸಂಸ್ಥೆಗೂ ಯಾವ ಸಂಬಂಧವೂ ಇಲ್ಲ. ಆದ್ದರಿಂದ ಸಾರಿಗೆ ಸೆಸ್ ಪಾವತಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.