ಪಡಿತರ ತರಲು ಹೋದ ಬಾಲಕ ಸಾವು
ಅರಸೀಕೆರೆ: ತಾಲೂಕಿನ ಅಣ್ಣೇನಹಳ್ಳಿ ಗ್ರಾಮದ ಸುನಿಲ್ (16) ಎಂಬ ಬಾಲಕ ಟಿ.ವಿ.ಎಸ್ ದ್ವಿಚಕ್ರ ವಾಹನದಲ್ಲಿ ಮೈಲನಹಳ್ಳಿ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ತರಲು ತೆರಳಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ಮೈಲನಹಳ್ಳಿ ಗೇಟ್ ಬಳಿ ಎದುರಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಈತನ ಜೊತೆಯಲ್ಲಿದ್ದ ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನು ಜೆ.ಸಿ.ಆಸ್ಪತ್ರೆಗೆ ದಾಖಲಿಸಲಾಗಿದೆ.ಇದರಿಂದ ಆಕ್ರೋಶಗೊಂಡ ಅಣ್ಣೇನಹಳ್ಳಿ ಗ್ರಾಮಸ್ಥರು ಮೈಲನಹಳ್ಳಿ ನ್ಯಾಯಬೆಲೆ ಅಂಗಡಿ ಮಾಲೀಕರ ಪರವಾನಗಿ ರದ್ದುಪಡಿಸಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಎದುರು ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು.
ಪೋಷಕರ ಆಕ್ರಂದನ: ಮಗನನ್ನು ಕಳೆದುಕೊಂಡ ತಂದೆ ಕುಮಾರ್, ಕುಟುಂಬವರ್ಗ ಮಗನನ್ನು ಕಳೆದುಕೊಂಡು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಪಟ್ಟಣದ ಜಯಚಾಮರಾಜೇಂದ್ರ ಆಸ್ಪತ್ರೆಯ ಆವರಣದಲ್ಲಿ ಸೇರಿದ್ದ ಗ್ರಾಮಸ್ಥರು ಮೃತ ಬಾಲಕ 10ನೇ ತರಗತಿ ಪರೀಕ್ಷೆ ತೆಗೆದುಕೊಂಡಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಎನ್ನಲಾಗಿದೆ.
ಗ್ರಾಮಸ್ಥರ ಪ್ರತಿಭಟನೆ: ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಅಣ್ಣೇನಹಳ್ಳಿ ಗ್ರಾಮಸ್ಥರು ತಾಲೂಕು ಕಚೇರಿ ಬಳಿ ಮೃತ ಬಾಲಕನ ಶವವಿಟ್ಟು ಪ್ರತಿಭಟನೆ ನಡೆಸಲು ಮುಂದಾದರು. ಪಡಿತರ ಅಂಗಡಿ ಸಾಕಷ್ಟು ದೂರವಿರುವುದರಿಂದ ಅಂಗಡಿ ಪರವಾನಗಿ ರದ್ದುಮಾಡಬೇಕೆಂದು ಅವರು ಆಗ್ರಹಿಸಿದರು.
ಪರಿಸ್ಥಿತಿ ಗಂಭೀರತೆಯನ್ನರಿತ ಪೊಲೀಸರು ಉದ್ರಿಕ್ತರ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಗ್ರಾಮಸ್ಥರು ಶವವನ್ನು ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿಯೇ ಬಿಟ್ಟು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇದೇ ವೇಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಅಣ್ಣೇನಹಳ್ಳಿ ಸಿದ್ದರಾಜು ಮಾತನಾಡಿ, ಅಣ್ಣೇನಹಳ್ಳಿ ಗ್ರಾಮದಿಂದ ಮೈಲನಹಳ್ಳಿ ಸುಮಾರು 6 ಕಿ.ಮೀ. ದೂರವಿದ್ದು ರೇಲ್ವೆ ಹಳಿ ಹಾಗೂ ರಾಷ್ಟ್ರೀಯ ಹೆದ್ದಾರಿ ದಾಟಿ ಪಡಿತರ ತರುವ ಅನಿವಾರ್ಯತೆ ಎದುರಾಗಿದೆ. ಇಂತಹ ದುಸ್ಥಿತಿಯಿಂದಾಗಿಯೇ ಬಾಲಕನೊಬ್ಬ ಪ್ರಾಣ ಕಳೆದುಕೊಳ್ಳುವಂತಾಗಿದೆ. ಅಂಗಡಿ ಮಾಲೀಕರು ಪ್ರತಿಬಾರಿಯೂ ಪಡಿತರ ನೀಡಲು ಸತಾಯಿಸುವುದು, ಬಿಲಲ್ನೀಡದೆ ಹೆಚ್ಚಿನ ಹಣ ಪಡೆಯುವುದು ಮಹಿಳೆಯರನ್ನು ಅಶ್ಲೀಲ ಪದಗಳಿಂದ ಮಾತನಾಡಿಸುವುದು, ದಿನಗಟ್ಟಲೇ ಕಾಯಿಸುವುದು, ಅಕ್ಕಿ ಒಂದು ದಿನ ನೀಡಿದರೆ, ಸೀಮೆಎಣ್ಣೆಗೆ ಮತ್ತೊಂದು ದಿನ ಕೊಡುವುದಾಗಿ ಅಲೆಸುವುದರಿಂದ ಇಂತಹ ದುರ್ಘಟನೆಗೆ ಕಾರಣವಾಗಿದೆ. ಕೂಡಲೇ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದು ಮಾಡಬೇಕು. ಅಣ್ಣೇನಹಳ್ಳಿ ಗ್ರಾಮಕ್ಕೆ ಪಯಾಂಯ ಪಡಿತರ ಅಂಗಡಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಭರವಸೆ: ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ನಟರಾಜ್ ಮಾತನಾಡಿ, ಹಿಂದೆ ಸರಪನಹಳ್ಳಿ ಗ್ರಾಮದಲ್ಲಿ ಪಡಿತರ ವಿತರಿಸಲು ಆದೇಶಿಸಲಾಗಿತ್ತು. ಇದನ್ನು ಉಲ್ಲಂಘಿಸಿ ಮೈಲನಹಳ್ಳಿ ಗ್ರಾಮದಲ್ಲಿ ಪಡಿತರ ವಿತರಿಸಿರುವ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರಲ್ಲದೆ ಅಣ್ಣೇನಹಳ್ಳಿ, ಸರಪರಹಳ್ಳಿ, ಅಣ್ಣೇನಹಳ್ಳಿ ಕಾವಲುಹಟ್ಟಿ ಗ್ರಾಮಗಳಿಗೆ ನೂತನ ಪಡಿತರ ಅಂಗಡಿ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

