ಮೂಗುಮುಚ್ಚಿ ಓಡಾಡಬೇಕು...
ಅರಸೀಕೆರೆ ಪಟ್ಟಣದ ಶ್ಯಾನುಭೋಗರ ಬೀದಿ ರಸ್ತೆಯಲ್ಲಿರುವ ರಾಘವೇಂದ್ರ ಮಠದ ಸಮೀಪ ಮ್ಯಾನ್ ಹೋಲ್, ಕಳೆದ 15 ದಿನಗಳಿಂದ ತೆರೆದುಕೊಂಡಿದೆ. ಇದರಿಂದಾಗಿ ತ್ಯಾಜ್ಯ ಹಾಗೂ ಇನ್ನಿತರ ಮಲಿನ ವಸ್ತುಗಳು ರಸ್ತೆಯಲ್ಲಿ ಹರಿಯುವಂತಾಗಿದ್ದು ದುರ್ವಾಸನೆಯಿಂದ ಜನರು ಮೂಗುಮುಚ್ಚಿ ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ, ವಾರಗಳೇ ಕಳೆದಿದ್ದರೂ, ಸಂಬಂಧಿಸಿದ ಆರೋಗ್ಯಾಧಿಕಾರಿ ಇತ್ತ ತಲೆ ಹಾಕಿಲ್ಲ. ಕಳೆದ ಎರಡು ದಿನಗಳ ಹಿಂದಷ್ಟೇ ಪಾನಿಪುರಿ ಗಾಡಿಯೊಂದು ಗುಂಡಿಯಲ್ಲಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಸೇರುವಂತಾಗಿತ್ತು. ಈ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದುರ್ನಾತದಿಂದ ಸುತ್ತಲಿನ ಪ್ರದೇಶಗಳಲ್ಲಿ ರೋಗ ಹರಡುವ ಭೀತಿ ಎದುರಾಗಿದೆ. ಈಗಲಾದರೂ ಪುರಸಭೆ ಎಚ್ಚೆತ್ತು ದುರಸ್ತಿಗೆ ಮುಂದಾಗಬೇಕು.
- ಮಹಾದೇವಪ್ಪ, ಸಂಜಯ್, ಅಭಿಷೇಕ್
ಬ್ಯಾಂಕಿನ ಮುಂದೆ ದೊಡ್ಡ ಸಾಲು
ಹಾಸನ ನಗರದ ಬ್ಯಾಂಕ್ ಖಾತೆಯ ಪಾಸ್ ಬುಕ್ ಎಂಟ್ರಿಗೆ ಬ್ಯಾಂಕಿನ ಮುಂದೆ ದೊಡ್ಡ ಸಾಲು ನಿಲ್ಲುವುದು ಪ್ರತಿನಿತ್ಯದ ಗೋಳಿನ ಕತೆಯಾಗಿದೆ. ನಗರದ ಹೃದಯ ಭಾಗದಲ್ಲಿರುವ ಸಿಟಿ ಪೊಲೀಸ್ ಠಾಣೆ ಎದುರು ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯ ಕಚೇರಿಯಲ್ಲಿ ಪ್ರತಿನಿತ್ಯ ಸಾವಿರಾರು ಜನ ವ್ಯವಹಾರಕ್ಕೆ ಬರುತ್ತಾರೆ. ಹಣ ಕಟ್ಟಿದ- ಪಡೆದ ವಿವರ ತಿಳಿಯಲು ತಮ್ಮ ಪಾಸ್ ಬುಕ್ ಎಂಟ್ರಿ ಮಾಡಿಸುವುದು ಪ್ರತಿನಿತ್ಯ ನಡೆಯುತ್ತದೆ. ಯುವಕರು- ವಯಸ್ಸಾದ ವೃದ್ಧರು ಒಟ್ಟಿಗೆ ಸರದಿ ಸಾಲಿನಲ್ಲಿ ನಿಂತು ಒಂದೇ ಕಡೆ ಎಂಟ್ರಿ ಮಾಡಿಸಿಕೊಳ್ಳಬೇಕು.
ಆದರೆ, ಎಂಟ್ರಿ ಬೇಗ ಆಗದೇ, ಬಿಸಿಲಿನಲ್ಲಿ ನಿಂತು ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ನೀಗಲು ಮತ್ತೊಂದು ಕೌಂಟರ್ ತೆರೆಯುವಂತೆ ಬ್ಯಾಂಕ್ ಸಿಬ್ಬಂದಿಯನ್ನು ಕೇಳಿದರೆ, ಅವರಿಂದ ಏಕವಚನದಲ್ಲಿ ನಕಾರಾತ್ಮಕವಾಗಿ ಒರಟಾದ ಉತ್ತರ ಬರುತ್ತದೆ. ಹಾಗಾದರೆ, ಜನರು ತಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ಕೇಳುವುದೆ ತಪ್ಪಾ ? ಎಂಬುದು ಪ್ರಶ್ನೆ. ಇಂತಹ ಸನ್ನಿವೇಶ ಹಲವಾರು ಬ್ಯಾಂಕ್ಗಳಲ್ಲಿ ನಡೆಯುತ್ತಿದೆ. ಮೊದಲು ಗ್ರಾಹಕರು ಎಚ್ಚರವಾಗುವುದು ಸೂಕ್ತ.
- ನೊಂದ ಗ್ರಾಹಕರು
ಗಬ್ಬು ನಾರುತ್ತಿರುವ ಚರಂಡಿಗಳು
ಹೊಳೆನರಸೀಪುರ ಪುರಸಭೆ ಆಡಳಿತ ಅಭಿವೃದ್ಧಿ ಹೆಸರಿನಲ್ಲಿ ಪಟ್ಟಣದ ನಾನಾ ಭಾಗಗಳಲ್ಲಿ ಅನಗತ್ಯವಾಗಿ ನಿರ್ಮಿಸಿರುವ ಬಹುತೇಕ ಚರಂಡಿಗಳಲ್ಲಿ ನೀರು ಹರಿಯದೆ ಕಸಕಡ್ಡಿಗಳ ತ್ಯಾಜ್ಯ ಕೊಳೆತು ಗಬ್ಬೆದ್ದು ನಾರುತ್ತಿದ್ದು ವೆಚ್ಚ ಮಾಡಿದ ಲಕ್ಷಾಂತರ ರು.ಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಬಡಾವಣೆ ಗಳು ಹೆಚ್ಚಾಗಿ ಅಭಿವೃದ್ಧಿ ಕಂಡಿಲ್ಲ. 3 ತಿಂಗಳು ಅಥವಾ 6 ತಿಂಗಳಿಗಳಿಗೊಮ್ಮೆ ಚೆನ್ನಾಗಿರುವ ಚರಂಡಿ ಮತ್ತು ರಸ್ತೆಗಳನ್ನು ಅಗೆಯುವುದು ಪುನಃ ಹೊಸದಾಗಿ ನಿರ್ಮಿಸುವುದೇ ಅಭಿವೃದ್ಧಿ ಎಂದು ಕಲ್ಪನೆ ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಭಾವಿಸಿದಂತಿದೆ.
ಹುಡುಗರಿಂದ ನಿರ್ಮಾಣಗೊಂಡ ಪಟ್ಟಣದ ಬಹುತೇಕ ಬಾಕ್ಸ್ ಮಾದರಿ ಚರಂಡಿ, ಮಳೆ ನೀರು ಚರಂಡಿಗಳಲ್ಲಿ ಶೇ. 50ರಷ್ಟು ಚರಂಡಿಗಳಲ್ಲಿ ಮಳೆ ನೀರಿರಲಿ, ಯಾವ ಮನೆಗಳ ನೀರು ಹರಿಯುವುದನ್ನು ಕಾಣಲಾಗುತ್ತಿಲ್ಲ. ಮಳೆ ನೀರು ಚರಂಡಿಗಳಲ್ಲಿ ಮಳೆ ನೀರು ಹರಿಯದೆ ರಸ್ತೆಯ ಮೇಲೆ ಹರಿಯುತ್ತಿರುವುದನ್ನು ಇಂದಿಗೂ ಕಾಣಬಹುದು. ಅಲ್ಲದೇ ಅವೈಜ್ಞಾನಿಕವಾಗಿ ನಿರ್ಮಿಸಿರುವ ಅನೇಕ ಚರಂಡಿಗಳ ಒಳಭಾಗದಲ್ಲಿ ನೀರು ಸರಾಗ ಹರಿಯುವ ಹಾಗೆ ವಾಟಾ ಕೊಡದೆ ಚರಂಡಿಗಳ ಮೇಲೆ ಸಿಮೆಂಟ್ ಕಾಂಕ್ರೀಟ್ನ ಮೇಲ್ಛಾವಣಿ (ಸಿಮೆಂಟ್ ಸ್ಲ್ಯಾಬ್) ಹಾಸಿರುವ ಕಾರಣ ಕಸ, ಕಡ್ಡಿಗಳು ಸೇರಿ ಸೊಳ್ಳೆಗಳ ವಾಸಸ್ಥಾನವಾಗಿದೆ.
ಸಿಮೆಂಟ್ ಕಾಂಕ್ರೀಟ್ ಚಾವಣಿಯಿಂದಾಗಿ ಸ್ವಚ್ಛತೆಗೆ ಅಡ್ಡಿಯಾಗಿದ್ದು, ಪೌರ ಕಾರ್ಮಿಕರು ಸರಿಯಾಗಿ ಸ್ವಚ್ಛತೆ ನಿರ್ವಹಿಸದ ಕಾರಣ ನಿವಾಸಿಗಳು ತೊಂದರೆ ಅನುಭವಿಸುವುದು ಮಾಮೂಲಾಗಿದ್ದರೆ, ಇತರೆ ಚರಂಡಿಗಳಲ್ಲಿ ಕಸ- ಕಡ್ಡಿ ಮತ್ತಿತರ ತ್ಯಾಜ್ಯ ಕೊಳೆತು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ.
ಮಳೆ ಸುರಿದ ಸಂದರ್ಭದಲ್ಲಂತೂ ಈ ಚರಂಡಿಗಳಿಂದ ತಡೆಯಲಾರದ ಕೆಟ್ಟ ವಾಸನೆ ತೇಲಿ ಬರುತ್ತದೆ. ಇನ್ನು ತೆರೆದ ಚರಂಡಿಗಳ ಪರಿಸ್ಥಿತಿ ಹೇಳತೀರದು. ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ ಮುಂಭಾಗದ ಚರಂಡಿಗಳು ಸೇರಿದಂತೆ ಹಾಸನ- ಮೈಸೂರು ರಸ್ತೆ ಟಿ.ಎ.ಪಿ.ಸಿ.ಎಂ.ಎಸ್ ರಸ್ತೆ, ಹೊಳೆಬೀದಿ, ಹೇಮಾವತಿ ರೈಸ್ ಮಿಲ್ ಮುಂಭಾಗ, ಕವರ್ ಡೆಕ್ ರಸ್ತೆ ಪಕ್ಕದ ಚರಂಡಿಗಳು, ಬಿ.ಸಿ.ಎಂ. ಕಾಲೇಜು ಗರ್ಲ್ಸ್ ಹಾಸ್ಟೆಲ್ ಮುಂಭಾಗ, ಚೆನ್ನಾಂಬಿಕ ಮತ್ತು ಶ್ರೀಲಕ್ಷ್ಮೀನರಸಿಂಹ ಚಿತ್ರಮಂದಿರಗಳ ಹಿಂಭಾಗದ ಚರಂಡಿಗಳು ಸೇರಿದಂತೆ ಪಟ್ಟಣದ ಬಹುತೇಕ ಚರಂಡಿಗಳಲ್ಲಿ ನೀರು ಮುಂದೆ ಹರಿಯದೆ ಅಲ್ಲಲ್ಲಿ ಉದ್ದಕ್ಕೂ ನಿಂತು. ಕಸ ಮತ್ತಿತರ ವಸ್ತುಗಳು ಕೊಳೆತು ಕೆಸರು ಮತ್ತು ಹೂಳು ತುಂಬಿಕೊಂಡು ಹೊರಬರುವ ದಟ್ಟವಾಸನೆ ಸುತ್ತಮುತ್ತಲ ಪರಿಸರ ಹಾಗೂ ಜನರ ಆರೋಗ್ಯವನ್ನು ಕೆಡಿಸುತ್ತಿದೆ. ಕೊಚ್ಚೆ ತುಂಬಿದ ಚರಂಡಿಗಳಲ್ಲಿ ವಾಸಿಸುವ ಸೊಳ್ಳೆಗಳಿಂದ ಸಾಂಕ್ರಾಮಿಕ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಈ ಬಗ್ಗೆ ಪುರಸಭೆ ಎಚ್ಚೆತ್ತುಕೊಳ್ಳಬೇಕಿದೆ.
- ಮಹೇಶ್, ಭಾಗ್ಯಮ್ಮ, ಗ್ರಾಪಂ ಮಾಜಿ ಸದಸ್ಯರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

