ಏರಿತು ಅಮೃತದ ನಂಜು
ಕ.ಪ್ರ. ವಾರ್ತೆ, ಹಾಸನ, ಮೇ 12
ಮೂರು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ಭೂಮಿಯನ್ನು ಅರಣ್ಯ ಇಲಾಖೆಯು ವಶಪಡಿಸಿಕೊಳ್ಳಲು ಮುಂದಾಗಿ ಕಲ್ಲು ನೆಟ್ಟಿದ್ದನ್ನು ಕಿತ್ತು ಹಾಕುವ ಮೂಲಕ ತಾಲೂಕಿನ ಸಾಲಗಾಮೆ ಹೋಬಳಿಯ ನಾನಾ ಗ್ರಾಮಸ್ಥರು ಕರ್ನಾಟಕ ಪ್ರಾಂತ ರೈತ ಸಂಘ, ಬಗರ್ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಾಲ್ಕು ಗ್ರಾಮದ ರೈತರು ಸೇರಿ ಕರ್ನಾಟಕ ಪ್ರಾಂತ ರೈತ ಸಂಘ, ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಲ್ಲುಗಳನ್ನು ಕಿತ್ತುಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
ತಾಲೂಕಿನ ಸಾಲಗಾಮೆ ಹೋಬಳಿಯ ಚೌಡೇನಹಳ್ಳಿ, ಯಲಗುಂದ, ರಾಮದೇವರಪುರ ಮತ್ತು ಕೆಲವತ್ತಿ ಗ್ರಾಮದ ಸುಮಾರು 500 ಕ್ಕು ಹೆಚ್ಚು ರೈತರು 504 ಎಕರೆ ಭೂಮಿಯನ್ನು ಕಳೆದ 30 ವರ್ಷಗಳಿಂದ ಸಾಗುವಳಿಮಾಡಿಕೊಂಡು ಬರುತ್ತಿದ್ದು ಇದಕ್ಕೆ ಸರ್ಕಾರದಿಂದ ಗ್ರಾಂಟ್ ಸರ್ಟಿಫಿಕೇಟ್ ಕೂಡ ಪಡೆದುಕೊಂಡಿದ್ದಾರೆ. ಆದರೆ ಕಳೆದ ವಾರ ಅರಣ್ಯ ಇಲಾಖೆಯಿಂದ ಈ ಪ್ರದೇಶದಲ್ಲಿ ಸರ್ವೇ ನಡೆಸಿ ಗುರುತಿನ ಕಲ್ಲುಗಳನ್ನು ನೆಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ತಾಪ: ಯಲಗುಂದ, ಚೌಡೇನಹಳ್ಳಿ, ರಾಮದೇವರಪುರ, ಕೆಲವತ್ತಿ, ಸುಂಡಹಳ್ಳಿ, ಹರುವನಹಳ್ಳಿ ಗ್ರಾಮಗಳಲ್ಲಿ ವಾಸಿಸುವ 504 ಕುಟುಂಬಗಳಿಗೆ ಅಮೃತ ಮಹಲ್ ಪ್ರದೇಶಕ್ಕೆ ಸೇರಿದ 504 ಎಕರೆ ಭೂಮಿಯನ್ನು ನೀಡಲಾಗಿತ್ತು. ಅದಕ್ಕೆ 2002-03 ರಲ್ಲಿ ಸಾಗುವಳಿ ಪತ್ರವನ್ನು ನೀಡಲಾಗಿತ್ತು. ಅಲ್ಲದೇ, 2006ರಲ್ಲಿ ಹಾಸನ ತಾಲೂಕಿನ ತಹಸೀಲ್ದಾರ್ ಆಗಿದ್ದ ಟಿ. ಲಕ್ಕೇಗೌಡ ಎಂಬುವವರು 76 ಎಕರೆಗೆ ಪಹಣಿಯನ್ನೂ ಸಹ ನೀಡಿ ಸಕ್ರಮಗೊಳಿಸಿದ್ದಾರೆ. ಇದರ ಆಧಾರದ ಮೇಲೆ ರೈತರು, ಸರ್ಕಾರದಿಂದ ದೊರೆಯುವ ಸಾಲ ಮತ್ತಿತರ ಸವಲತ್ತು ಪಡೆದುಕೊಂಡಿದ್ದಾರೆ. ಈಗ ಭೂಮಾಪನ ಇಲಾಖೆ ಮೂಲಕ ಅರಣ್ಯ ಇಲಾಖೆಯವರು ಅಮೃತ ಮಹಲ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ರೈತರ ಜಮೀನಿನ ಸುತ್ತಲು ಕಲ್ಲನ್ನು ನೆಟ್ಟು ಅಳತೆ ಕಾರ್ಯ ಆರಂಭಿಸಿದೆ. ಇದಕ್ಕೆ ಕಾರಣ, ರಾಜ್ಯ ಸರ್ಕಾರ ಇತ್ತೀಚೆಗೆ ನಾಟಿ ಹಸುಗಳ ಮೇವಿಗಾಗಿ ಬಿಟ್ಟಿದ್ದ ಅಮೃತ ಮಹಲ್ ಪ್ರದೇಶವನ್ನು ವಶಪಡಿಸಿಕೊಂಡು ಅದನ್ನು ಗೋ ಸಂರಕ್ಷಣಾ ಕೇಂದ್ರಗಳನ್ನು ಮಾಡುವ ಆದೇಶ ಹೊರಡಿಸಿರುವುದು. ಇದು ರೈತರಲ್ಲಿ ಬದುಕು ಕಳೆದುಕೊಳ್ಳುವ ಆತಂಕ ಸೃಷ್ಟಿಸಲು ಕಾರಣವಾಗಿದೆ ಎಂದು ಆರೋಪಿಸಿದರು.
ನಕಾಶೆಯಲ್ಲಿ 504 ಎಕರೆ ಭೂಮಿ ಅಮೃತ್ ಮಹಲ್ಗೆ ಸೇರಿದ ಭೂಮಿ ಎಂತಲೇ ಇದೆ. ಆದರೆ, 1982ರಲ್ಲಿ ನಮಗೆ ಉಳುಮೆ ಮಾಡಲು ಅವಕಾಶ ನೀಡಲಾಗಿದೆ. ನಂತರ ಸಾಗುವಳಿ ಪತ್ರ ನೀಡಲಾಗಿದೆ. ನಂತರ ಆನೇಕ ಮಂದಿಗೆ ಪಹಣಿ ನೀಡಲಾಗಿದೆ. ಇದರ ಆಧಾರದ ಮೇಲೆ ಲೋನ್ ಕಾರ್ಡ್ ಮತ್ತಿತರ ಸರ್ಕಾರಿ ಸೌಲಭ್ಯ ಪಡೆಯಲಾಗಿದೆ. ಆದರೆ, ಈಗ ಅರಣ್ಯ ಇಲಾಖೆಯಲ್ಲಿ ಇದ್ದರೂ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವ ಅರಣ್ಯ ಪ್ರದೇಶ ಸರ್ವೆ ಕಾರ್ಯ ನಡೆಸುವ ಘಟಕ 504 ಎಕರೆ ಅಮೃತ ಮಹಲ್ಗಲ್ಲದೇ ಮೀಸಲು ಅರಣ್ಯಕ್ಕೂ ಸೇರಿದ್ದು, ಆದ್ದರಿಂದ ಸರ್ವೆ ಮಾಡಲಾಗುತ್ತಿದೆ. ಇದನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಎಚ್ಚರಿಕೆ: ಸರ್ಕಾರ ಕೂಡಲೇ ರೈತರು ಮೂರು ದಶಕಗಳಿಂದ ಸಾಗುವಳಿ ಮಾಡಿರುವ ಭೂಮಿಯನ್ನು ರೈತರಿಗೆ ಉಳಿಸಿಕೊಡಬೇಕು ಇಲ್ಲವಾದರೆ ಈ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಬಗರ್ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯ ನವೀನ್ ಕುಮಾರ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಕಾಂಗ್ರೆಸ್ ಮುಖಂಡ ಎಚ್.ಕೆ.ಮಹೇಶ್, ಗ್ರಾಮಸ್ಥರಾದ ಬವಸರಾಜು, ಪ್ರಕಾಶ್, ಹಲಗೆ ಗೌಡ, ಪರಮೇಶ್, ಜಯಣ್ಣ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

