ಸಮುದಾಯ ಹೀಗಳೆದವರ ಬಂಧಿಸಿ
ಕನ್ನಡಪ್ರಭ ವಾರ್ತೆ, ಹಾಸನ, ಮೇ 14
ಬೇಡ ಸಮುದಾಯವನ್ನು ಹದ್ದು, ಕಾಗೆಗಳಿಗೆ ಹೋಲಿಕೆ ಮಾಡಿರುವ ಕೆ.ಎಸ್.ನಾರಾಯಣಚಾರ್ಯ ಅವರನ್ನು ಬಂಧಿಸಬೇಕು ಹಾಗೂ ಅವರ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್. ವೃತ್ತ, ಬಿ.ಎಂ. ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಆರೋಪ: ನಾರಾಯಣಚಾರ್ಯ ಅವರು ಕಳೆದ ಮಾ. 15ರಂದು ಮೈಸೂರಿನಲ್ಲಿ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬೇಡ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಸಮುದಾಯದ ಘನತೆಗೆ ಧಕ್ಕೆ ಯನ್ನು ಉಂಟು ಮಾಡಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತೀಕ್ಷ್ಣ ಹಾಗೂ ಆಕ್ಷೇ ಪಾರ್ಹ ಶಬ್ದಗಳಿಂದ ವಾಲ್ಮೀಕಿ ಯಾರು ಎಂಬ ಕೃತಿಯಲ್ಲಿ ಬಳಸಿದ್ದಾರೆ ಎಂದು ಆರೋಪಿಸಿದರು.
ಚರಿತ್ರೆ ಪರಾಮರ್ಶಿಸಲಿ: ಈ ವ್ಯಕ್ತಿ ಅಪ್ರಬುದ್ಧ ವ್ಯಕ್ತಿಯಾಗಿದ್ದು, ಮತಿಭ್ರಮಣೆಯಿಂದ ಮಾತನಾಡಿದ್ದಾರೆ. ವಾಲ್ಮೀಕಿಯನ್ನು ಬ್ರಾಹ್ಮಣ ಎಂದು ಹೇಳಿದ್ದಾರೆ. ಕುವೆಂಪು ಅವರು ವಿಶ್ವಮಾನ ಸಂದೇಶ ನೀಡಿದ ಸಂದರ್ಭದಲ್ಲಿ ಕೆಲವರು ವರ್ತಿಸಿದ ರೀತಿಯನ್ನು ನಾರಾಯಣಾಚಾರ್ಯ ಪರಾಮರ್ಶಿಸಬೇಕು. ಹಿಂದು ದೇವಾಲಯಗಳಲ್ಲಿ ದಾಸರ, ಆಚಾರ್ಯರ, ಅರ್ಚಕರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಇಂದಿಗೂ ಪೂಜಿಸಲಾಗುತ್ತಿದೆ. ಪವಿತ್ರಗ್ರಂಥ ರಾಮಾಯಣವನ್ನು ನೀಡಿದ ಮಹರ್ಷಿ ವಾಲ್ಮೀಕಿಯ ರಾಮಾಯಣವನ್ನು ನಿಕೃಷ್ಟವಾಗಿ ಕಂಡು, ತುಳುಸಿ ರಾಮಾಯಣ ಪವಿತ್ರ ಹಾಗೂ ಶ್ರೇಷ್ಠವೆಂದು ವಾದಿಸಿದವರು ಯಾರು ಎಂಬುದನ್ನು ತಿಳಿಯಬೇಕಾಗಿದೆ ಎಂದರು. ಬೇಡ ನಾಯಕರ ಆರಾಧ್ಯ ದೈವ ಭಗವಾನ್ ವಾಲ್ಮೀಕಿಯನ್ನು ಬ್ರಾಹ್ಮಣ ಎಂದು ಪ್ರತಿಪಾದಿಸುವ ದುಸ್ಸಾಹಸ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಆಕ್ರೋಶ: ವಾಲ್ಮೀಕಿಯವರ ರಾಮಾಯಣಕ್ಕಿಂತ ಕೆಲವು ಮೇಲ್ವರ್ಗದವರು ರಚಿಸಿರುವ ತುಳಸಿ ರಾಮಾಯಣ ಶ್ರೇಷ್ಠವೆಂದು ವಾದಿಸಿರುವ ನಾರಾಯಣಾಚಾರ್ಯ, ತಮ್ಮ ಬಾಯಿ ಚಪಲ, ಕುಚೇಷ್ಟೆಗೆ ಲೇಖನ, ಪುಸ್ತಕ, ಗ್ರಂಥ ಹಾಗೂ ಕಾವ್ಯಗಳ ರಚನೆಯಲ್ಲಿ ಕೆಳ ಸಮುದಾಯಗಳನ್ನು ಹೀಯಾಳಿಸಿದ್ದಾರೆ.
ನೈಜತೆ ಮರೆಮಾಚುತ್ತಾ ವಂಚಿಸುತ್ತಿದ್ದಾರೆ. ಮನುವಾದ ಹಾಗೂ ಜಾತಿವಾದದ ದುಷ್ಟ ಪರಂಪರೆಯ ಪ್ರವರ್ತಕ ಕೆ.ಎಸ್.ನಾರಾಯಣಚಾರ್ಯ ವಾಲ್ಮೀಕಿಯವರನ್ನು ಬ್ರಾಹ್ಮಣ ಎಂದು ಪ್ರತಿಪಾದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೇದ, ಉಪನಿಷತ್ತು, ತಂತ್ರಮಂತ್ರಗಳ ವಿದ್ಯೆಗಳ ಮೌಢ್ಯದ ಹರಿಕಾರ ತಮ್ಮ ಆತ್ಮಾವಲೋಕನ ಮಾಡಿಕೊಂಡು ಕುಚೋದ್ಯ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಬೇಡ ಸಮುದಾಯವನ್ನು ಹೀಯಾಳಿಸಿ ಹಿನ್ನೆಲೆಯಲ್ಲಿ, ಸರ್ಕಾರ ಕೂಡಲೇ ನಾರಾಯಣಚಾರ್ಯ ಅವರನ್ನು ಬಂಧಿಸಿ ಹಾಗೂ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಕಾಶ್, ಗೌರವಾಧ್ಯಕ್ಷ ಮಹಂತಪ್ಪ, ಕಾರ್ಯದರ್ಶಿ ಧರ್ಮಪ್ಪನಾಯಕ ಹಾಗೂ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

