ಆಲೂ ಬಿತ್ತನೆಯಲ್ಲಿ ರೈತ ನಿರತ
ಕನ್ನಡಪ್ರಭ ವಾರ್ತೆ ್ಣ ಹಾಸನ ್ಣ ಮೇ 25
ಜಿಲ್ಲೆಯ ಪಾರಂಪರಿಕ ಹಾಗೂ ವಾಣಿಜ್ಯ ಬೆಳೆಯಾದ ಆಲೂಗಡ್ಡೆ ಬಿತ್ತನೆ ಕಾರ್ಯದಲ್ಲಿ ಜಿಲ್ಲೆಯ ರೈತರು ನಿರತರಾಗಿದ್ದಾರೆ.
ಜಿಲ್ಲೆಯ ನಾನಾ ಕಡೆಗಳಲ್ಲಿ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಆಲೂಗಡ್ಡೆ ಬಿತ್ತನೆಯಲ್ಲಿ ತೊಡಗಿದ್ದರೆ. ಇತ್ತ ರೈತರಿಗೆ ವಿತರಿಸಲು ಈ ಬಾರಿ ತರಿಸಲಾಗಿದ್ದ 27 ಸಾವಿರ ಟನ್ ಆಲೂಗೆಡ್ಡೆ ಬಿತ್ತನೆ ಬೀಜದಲ್ಲಿ ಈಗಾಗಲೇ ಶೇ.90 ರಷ್ಟು ಮಾರಾಟವಾಗಿದೆ.
ಮಳೆಯಾಗಿರುವುದರಿಂದ ಆಲೂ ಗಡ್ಡೆ ಬಿತ್ತನೆ ಬೀಜ ಕೊಳ್ಳಲು ರೈತರು ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದ್ದಾರೆ. ಬಿತ್ತನೆ ಆಲೂಗಡ್ಡೆ ಖಾಲಿಯಾಗುತ್ತಿರುವುದರಿಂದ ವರ್ತಕರು ರಾಜಸ್ಥಾನದಿಂದ ಬಿತ್ತನೆ ಬೀಜ ತರಿಸುತ್ತಿದ್ದಾರೆ.
ಆಲೂಗಡ್ಡೆ ಬೆಳೆ, ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದು, ಬಿತ್ತನೆ ಬೀಜ ಮಾರಾಟ ಮಾಡಲು ಆರಂಭಿಸಿದ ದಿನದಿಂದಲೂ ರೈತರು ಬೀಜ ಕೊಳ್ಳಲು ಆಸಕ್ತಿ ತೊರಿದ್ದರು. ಪ್ರತಿ ಬಾರಿಯಂತೆ ಈ ಬಾರಿಯೂ ಆಲೂಗಡ್ಡೆ ವರ್ತಕರು ರಾಜಸ್ಥಾನದಿಂದ 27 ಸಾವಿರ ಟನ್ ಆಲೂಗಡ್ಡೆ ಬೀಜವನ್ನು ತರೆಸಿ ನಗರದ ಶಿಥಲಗೃಹಗಳಲ್ಲಿ (ಕೋಲ್ಡ್ ಸ್ಟೋರೇಜ್) ದಾಸ್ತಾನು ಮಾಡಿಕೊಂಡಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ ದರ ಹೆಚ್ಚಾದರೂ ರೈತರು ಅದನ್ನು ಲೆಕ್ಕಿಸದೆ ಬೀಜ ಕೊಳ್ಳಲು ಆಸಕ್ತಿ ತೋರಿದ್ದಾರೆ. 27 ಸಾವಿರ ಟನ್ ಆಲೂಗೆಡ್ಡೆ ಬಿತ್ತನೆ ಬೀಜದಲ್ಲಿ ಈಗಾಗಲೇ ಶೇ.90 ರಷ್ಟು ಮಾರಾಟವಾಗಿದ್ದು, ಜಿಲ್ಲೆಯ ಬಹುತೇಕ ರೈತರು ಬಿತ್ತನೆ ಬೀಜವನ್ನು ಖರೀದಿಸಿದ್ದಾರೆ. ಆಲೂಗೆಡ್ಡೆಗೆ ಅಂಗಮಾರಿ ರೋಗ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ಮೇ ತಿಂಗಳ ಅಂತ್ಯದೊಳಗೆ ಬೀಜ ಹಾಕಬೇಕಾಗಿರುವುದರಿಂದ ಜಿಲ್ಲೆಯ ಬಹುತೇಕ ರೈತರು ಬೀಜವನ್ನು ಕೊಂಡು ಈಗಾಗಲೇ ಕೃಷಿ ಮಾಡಿದ್ದಾರೆ. ಜೊತೆಗೆ ಹೊರ ಜಿಲ್ಲೆಯ ರೈತರೂ ಆಲೂಗೆಡ್ಡೆ ಬೆಳೆಯ ಬಗ್ಗೆ ಆಸಕ್ತಿ ತೊರಿದ್ದು, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ರೈತರು ಆಲೂ ಬಿತ್ತನೆ ಬೀಜ ಕೊಳ್ಳಲು ಮಾರುಕಟ್ಟೆ ಆಗಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಮಟ್ಟಿಗೆ ತರಿಸಲಾಗಿದ್ದ ಆಲೂಗೆಡ್ಡೆ ಈಗ ಮುಗಿಯುವ ಹಂತದಲ್ಲಿ ಇರುವುದರಿಂದ ಮತ್ತೆ ರಾಜಸ್ಥಾನದಿಂದ ಬಿತ್ತನೆ ಬೀಜ ತರಿಸಲಾಗುತ್ತಿದೆ. ರೈಲಿನಲ್ಲಿ ಬಂದಿದ್ದ ಬೀಜಕ್ಕೆ ಜಿಲ್ಲಾಡಳಿತ 1,900 ರು. ನಿಂದ 2 ಸಾವಿರ ರು. ದರ ನಿಗದಿ ಮಾಡಿತ್ತು. ಆದರೆ ಕಳೆದ ಗುರುವಾರದಿಂದ ಮಾರುಕಟ್ಟೆಗೆ ಲಾರಿಗಳಲ್ಲಿ ಬರುತ್ತಿರುವ ಬಿತ್ತನೆ ಬೀಜಕ್ಕೆ ವ್ಯಾಪಾರಿಗಳು 2,200 ರೂ ಗಳನ್ನು ನಿಗದಿ ಮಾಡಿದ್ದಾರೆ. ಲಾರಿಗಳಲ್ಲಿ ತರಿಸುವುದರಿಂದ ಖರ್ಚು ಹೆಚ್ಚಾಗುವುದರಿಂದ ದರವನ್ನೂ ಹೆಚ್ಚಳ ಮಾಡಲಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ರೈತರ ಬೇಡಿಕೆಗೆ ಅನುಗುಣವಾಗಿ ಆಲೂ ಬೀಜ ತರೆಸಿಕೊಳ್ಳಲಾಗುತ್ತಿದ್ದು, ಮೇ ಅಂತ್ಯದವರೆಗೂ ಬಿತ್ತನೆ ಬೀಜ ಮಾರಾಟವಾಗುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ರೈತರು ಆಲೂಗಡ್ಡೆ ಬೆಳೆ ತೆಗೆಯಲು ಹೆಚ್ಚಿನ ಆಸಕ್ತಿ ತೋರಿದ್ದಾರೆ.
ಮೇ ತಿಂಗಳ ಅಂತ್ಯದೊಳಗೆ ಆಲೂಗಡ್ಡೆ ಬಿತ್ತನೆ ಮಾಡುವುದರಿಂದ ಅಂಗಮಾರಿ ರೋಗ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಅಷ್ಟರೊಳಗೆ ಆಲೂ ಬಿತ್ತನೆ ಮಾಡಬೇಕಾಗಿದೆ. ಆದ್ರೆ ಇಲ್ಲಿ ಬಿತ್ತನೆ ಆಲೂಗಡ್ಡೆ ಕೊರತೆ ಕಾಣಿಸಿಕೊಂಡಿದೆ. ಹೀಗಾಗಿ ಸಕಾಲದಲ್ಲಿ ಬಿತ್ತಲೆ ಆಲೂಗಡ್ಡೆಯನ್ನು ಒದಗಿಸಬೇಕು.
ಟಿ ದ್ಯಾವೇಗೌಡ, ರೈತ
ಈ ಬಾರಿ ಕಡಿಮೆ ಆಲೂಗಡ್ಡೆ ತರಿಸಿದ್ದರಿಂದ ಆಲೂಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ವರ್ತಕರು ತರಿಸಿದ್ದ ಆಲೂಗಡ್ಡೆ ಖಾಲಿಯಾಗುತ್ತಿದೆ. ಬೇಡಿಕೆ ಹೆಚ್ಚಿರುವುದರಿಂದ ಹೆಚ್ಚಿನ ಆಲೂಗಡ್ಡೆಯನ್ನು ತರಿಸಿ ಮಾರಾಟ ಮಾಡಬೇಕು. ಈ ಬಗ್ಗೆ ಜಿಲ್ಲಾಡಳಿತ ರೈತರ ಪರವಾಗಿ ಕಾರ್ಯನಿರ್ವಹಿಸಬೇಕು.
ಟಿ ಮರಿಯಪ್ಪ, ರೈತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

