ಮೋದಿ ವಿಜಯ ಅದ್ವಿತೀಯ
ಅರಸೀಕೆರೆ: ಸಾಮಾನ್ಯರಲ್ಲಿ ಸಾಮಾನ್ಯನಾದ ಮನುಷ್ಯನೊಬ್ಬ ಮೂರು ಲಕ್ಷ ಕಿಮೀ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿ ರಾಷ್ಟ್ರೀಯ ಆದರ್ಶ ಮೌಲ್ಯಗಳ ತತ್ವ ಸಿದ್ಧಾಂತ ಪ್ರತಿಪಾದಿಸುವ ಮೂಲಕ ಭಾರತದ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಂತಹ ಅದ್ಭುತ ವಿಜಯವನ್ನು ನರೇಂದ್ರ ಮೋದಿ ಸಾಧಿಸಿದ್ದಾರೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಅಭಿಪ್ರಾಯಪಟ್ಟರು.
ಪಟ್ಟಣದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಏರ್ಪಡಿಸಿದ್ದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರಿಗೆ ಪರ್ವಕಾಲವಾಗಿದ್ದು, ಇಂದಿನಿಂದ ನೀವು ಕಾರ್ಯೋನ್ಮುಖವಾಗಿ ಹಳ್ಳಿ-ಹಳ್ಳಿಗಳಲ್ಲಿ ಮನೆ-ಮನೆಗಳಿಗೆ ಭೇಟಿ ನೀಡಿ ಪಕ್ಷವನ್ನು ಸದೃಢವಾಗಿ ಕಟ್ಟುವ ಮೂಲಕ ಮುಂಬರುವ ಗ್ರಾಪಂ, ತಾಪಂ, ಜಿಪಂ, ಪುರಸಭೆ ಚುನಾವಣೆಯಲ್ಲಿ ಭದ್ರ ಬುನಾದಿ ಹಾಕಿ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ವಿಜಯಿಶಾಲಿಯಾಗಲು ಪಣ ತೊಡಬೇಕೆಂದು ಕಿವಿಮಾತು ಹೇಳಿದರು. ಒಂದು ಕಾಲದಲ್ಲಿ ಬಿಜೆಪಿ ಎಂದರೆ ವಿರೋಧ ಪಕ್ಷಕ್ಕಷ್ಟೇ ಸೀಮಿತ ಎನ್ನುವ ಮಾತಿತ್ತು. ಆದರೆ ಅದೆ ಪಾರ್ಟಿ ತನ್ನ ಸ್ವಂತ ಬಲದಿಂದ ದೇಶದ ಚುಕ್ಕಾಣಿ ಹಿಡಿಯುತ್ತದೆ ಎಂಬ ಕನಸು ಇಂದು ನನಸಾಗಿದೆ ಎಂದರು.
ಇದು ದೇಶದ ಪ್ರತಿಯೊಬ್ಬ ಕಾರ್ಯಕರ್ತನ ನಿಸ್ವಾರ್ಥ ಹೋರಾಟ ಫಲವಾಗಿದ್ದು, ನಮ್ಮೆಲ್ಲರ ಸಾಧನೆಗಳ ಬಗ್ಗೆಯಾಗಲಿ ಮುಂದಿನ ಭವಿಷ್ಯದ ಗುರಿಯ ಬಗ್ಗೆಯಾಗಲಿ ಬಹಿರಂಗ ವೇದಿಕೆಯಲ್ಲಿ ಸ್ಪಷ್ಟತೆಯಿಂದ ನೆಚ್ಚಿನ ಆಶಾಕಿರಣ ನರೇಂದ್ರಮೋದಿ ಇಂದು ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ
ವಚನ ಸ್ವೀಕರಿಸಿದ್ದಾರೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸ್ಥಳೀಯ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ತಮ್ಮಗಳ ಅವಿರತ ಹೋರಾಟದ ಮೂಲಕ ಪಕ್ಷವನ್ನು ಸದೃಢವಾಗಿ ಕಟ್ಟುವ ಕಾರ್ಯವನ್ನು ಮಾಡಬೇಕಾಗಿದೆ. ಮುಂಬರುವ ಪ್ರತಿಯೊಂದು ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವ ಸಂಕಲ್ಪವನ್ನು ನಾವುಗಳೆಲ್ಲರೂ ಇಂದು ಕೈಗೊಳ್ಳಬೇಕು ಎಂದರು.
ಭಾರತೀಯ ಜನತಾ ಪಕ್ಷಕ್ಕೆ ತನ್ನದೇ ಆದ ವಿಶೇಷ ವೈಶಿಷ್ಟ್ಯತೆ ಇದ್ದು, ರಾಷ್ಟ್ರೀಯತೆ ಪ್ರಧಾನ ವಿಚಾರವಾಗಿದ್ದು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಸಮಸ್ಯೆಗಳ ಸವಾಲುಗಳು, ವಿದೇಶಿ ಬಂಡವಾಳ ವ್ಯಾಮೋಹದಿಂದ ದೇಶದ ಸಣ್ಣ ವ್ಯಾಪರಸ್ಥರ ಮೇಲೆ ಬೀರುವ ದುಷ್ಪರಿಣಾಮಗಳು ಸೇರಿದಂತೆ ಹತ್ತಾರು ಸಮಸ್ಯೆಗಳ ಬಗ್ಗೆ ಸಮಗ್ರ ಚಿಂತನೆ ನಡೆಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಅಂತಹ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಚಿಂತನೆ ನಮ್ಮ ಪಕ್ಷವು ಸಿದ್ಧಗೊಳಿಸಿದೆ ಎಂದರು.
ಬಿಜೆಪಿ ಜಿಲ್ಲಾ ವಕ್ತಾರ ಎನ್.ಡಿ.ಪ್ರಸಾದ್ ಮಾತನಾಡಿ, ಹಾಸನ ಜಿಲ್ಲೆ ಮಲೆನಾಡು ಮತ್ತು ಬಯಲುಸೀಮೆ ಪ್ರದೇಶಗಳ ವೈವಿಧ್ಯತೆ ಹೊಂದಿದ್ದು, ಅನೇಕ ತಾಲೂಕುಗಳಲ್ಲಿ ಇಂದು ಕುಡಿಯುವ ನೀರಿನ ಸಮಸ್ಯೆಯನ್ನು ಜನರು ಅನುಭವಿಸುತ್ತಿದ್ದಾರೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿ ಸಮರ್ಪಕ ರಸ್ತೆಗಳು ಇಲ್ಲದೆ ಜನರು ಅನೇಕ ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮಳೆಯ ಆಶ್ರಿತ ವ್ಯವಸಾಯ ಈ ಭಾಗದ ರೈತರ ಬದುಕಾಗಿದ್ದು, ವಾಣಿಜ್ಯ ಬೆಳೆ ತೆಂಗು ಮತ್ತು ಅಡಿಕೆಗಳು ತೇವಾಂಶ ಕೊರತೆ ಮತ್ತು ವಿವಿಧ ರೋಗ ಭಾಧೆಯಿಂದ ವಿನಾಶದ ಅಂಚಿನಲ್ಲಿವೆ. ಕೃಷಿಕರ ಪರವಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಅವಿರತ ಹೋರಾಟ ಕೈಗೊಳ್ಳಲಿದೆ ಎಂದರು.
ಮಾಜಿ ಶಾಸಕ ಎ.ಎಸ್.ಬಸವರಾಜು, ಜಿಲ್ಲಾಧ್ಯಕ್ಷ ರೇಣುಕುಮಾರ್, ಜಿಲ್ಲಾ ಕಾರ್ಯದರ್ಶಿ, ಜಿ.ವಿ.ಟಿ.ಬಸವರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಹರಳಕಟ್ಟಾ ರಮೇಶ್. ಜಿಪಂ ಸದಸ್ಯರಾದ ಕೃಷ್ಣನಾಯ್ಕ್, ಈಶ್ವರಹಳ್ಳಿ ಲಕ್ಷ್ಮಣ್, ತಾ.ಪಂ.ಸದಸ್ಯರಾದ ಬಿ.ಆರ್.ಜಯಣ್ಣ, ಪುಟ್ಟನಕಟ್ಟೆ ದಿನೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

