ಶಿಥಿಲ ಲಕ್ಷ್ಮಣೇಶ್ವರ ದೇವಸ್ಥಾನಕ್ಕೆ ಕಾಯಕಲ್ಪ
ರಾಮನಾಥಪುರ: ಸಂಪೂರ್ಣ ಅಳಿವಿನ ಅಂಚಿನಲ್ಲಿದ್ದ ರಾಮನಾಥಪುರದ ಪುರಾಣ ಪ್ರಸಿದ್ಧ ಲಕ್ಷ್ಮಣೇಶ್ವರ ದೇವಸ್ಥಾನ 70 ಲಕ್ಷ ವೆಚ್ಚದಲ್ಲಿ ಕಾಯಕಲ್ಪದ ಭಾಗ್ಯ ಕಾಣುತ್ತಿದೆ.
ದೇವಾಲಯಗಳ ಬೀಡು ಎಂದೇ ಖ್ಯಾತಿವೆತ್ತ ರಾಮನಾಥಪುರದಲ್ಲಿನ ಲಕ್ಷ್ಮಣೇಶ್ವರ ದೇವಾಲಯ ಹಲವು ವರ್ಷಗಳಿಂದ ಕನಿಷ್ಠ ಪೂಜೆ ಕಾಣದೇ ಅವಸಾನದ ಹಾದಿ ಹಿಡಿದಿತ್ತು. ಭಕ್ತರ ಒತ್ತಾಸೆ ಮೇರೆಗೆ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರಾ ಇಲಾಖೆ ಈಗ ದೇವಸ್ಥಾನದ ನವೀಕರಣ ಕಾರ್ಯಕ್ಕೆ ಮುಂದಾಗಿದೆ. ಪ್ರಸ್ತುತ ಸಕಲೇಶಪುರ ಉಪ ವಿಭಾಗಾಧಿಕಾರಿಯಾಗಿ ನೇಮಕವಾಗಿರುವ ಡಾ. ಮಧುಕೇಶ್ವರ, 2010ರಲ್ಲಿ ಅರಕಲಗೂಡು ತಹಸೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಲಕ್ಷ್ಮಣೇಶ್ವರ ದೇವಸ್ಥಾನದ ಸ್ಥಿತಿ ನೋಡಿ ಸುತ್ತಲೂ ಕಾಂಪೌಂಡ್ ಕಟ್ಟಿ ಜೀರ್ಣೋದ್ಧಾರ ಕಾರ್ಯಕ್ಕೆ ಮನಸ್ಸು ಮಾಡಿದ್ದರು. ಅಷ್ಟರಲ್ಲಿ ಅವರು ಬೇರೆಡೆಗೆ ವರ್ಗಾವಣೆಯಾದರು. ಇತ್ತ ಶ್ರೀ ಕ್ಷೇತ್ರದ ಚಾತುರ್ಯುಗಮೂರ್ತಿ ರಾಮೇಶ್ವರ ದೇವಸ್ಥಾನದಲ್ಲಿ ಪೂಜೆಗೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರು ನದಿಯಾಚೆಗೆ ದಕ್ಷಿಣಕ್ಕೆ ಹಾಳು ಬಿದ್ದಿದ್ದ ಲಕ್ಷ್ಮಣೇಶ್ವರ ದೇವಾಲಯದ ಶೋಚನೀಯ ಸ್ಥಿತಿ ಕಂಡು ಬೇಸರ ಪಡುವಂತಾಗಿತ್ತು.
ಹಿನ್ನೆಲೆ
ಲೋಕದ ಉದ್ದಾರಕ್ಕಾಗಿ ಲಂಕಾಪತಿ ದಶಕಂಠ ರಾವಣನ ಅಸುರ ಪರಿವಾರ ಸಂಹರಿಸಿದ ತ್ರೇತಾಯುಗದ ಶ್ರೀರಾಮ ಇಕ್ವಾಕ್ಷು ವಂಶದ ಗುರು ಬ್ರಹ್ಮಪುತ್ರ ವಸಿಷ್ಠರ ಪ್ರೇರಣೆಯಿಂದ ತನ್ನ ಸಕಲ ಪರಿವಾರದೊಂದಿಗೆ ವಾಸವಾಪುರಿಗೆ (ಇಂದಿನ ರಾಮನಾಥಪುರ) ಪುಷ್ಪಕ ವಿಮಾನದಲ್ಲಿ ಬಂದಿಳಿದು ಪವಿತ್ರ ಕಾವೇರಿ ನದಿ ದಂಡೆ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆಗೈದನು. ಶ್ರೀರಾಮ ಅಚರಿಸಿದ್ದಕ್ಕಾಗಿ ಶ್ರೀರಾಮೇಶ್ವರ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ. ಅತ್ತ ಶ್ರೀರಾಮನ ಅನುಜ ಲಕ್ಷ್ಮಣ ನದಿಯಾಚೆ ದಕ್ಷಿಣಕ್ಕೆ ಶಿವಲಿಂಗು ಪ್ರತಿಷ್ಠಾಪಿಸಿದ ಕಾರಣಕ್ಕಾಗಿ ಲಕ್ಷ್ಮಣೇಶ್ವರ ಎಂದು ಪ್ರಸಿದ್ದಿಗೆ ಬಂದಿದೆ. ಮುಂದೆ ಹೊಯ್ಸಳರ ಸೋಮೇಶ್ವರ ಕಾಲದಲ್ಲಿ (ಕ್ರಿ.ಶ. 1235- 1253) ದೇವಸ್ಥಾನವನ್ನು ಅದ್ಭುತವಾಗಿ ನಿರ್ಮಾಣ ಮಾಡಲಾಯಿತು ಎಂಬುದು ಇತಿಹಾಸಕಾರರ ಅಭಿಪ್ರಾಯ.
ಜೀರ್ಣೋದ್ಧಾರ ಕೆಲಸ ಪೂರ್ಣಗೊಳಿಸಲು ಪ್ರಯತ್ನ
ರಾಮನಾಥಪುರದಲ್ಲಿ ಶಿಥಿಲಗೊಂಡಿದ್ದ ಲಕ್ಷ್ಮಣೇಶ್ವರ ದೇವಸ್ಥಾನವನ್ನು 13ನೇ ಹಣಕಾಸು ಯೋಜನೆಯಡಿ 70 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಈ ಹಣ ಸಾಕಾಗದಿದ್ದರೆ ಹೆಚ್ಚುವರಿ ಅನುದಾನಕ್ಕಾಗಿ ಉಳಿಕೆ ಕಾಮಗಾರಿಯ ಮತ್ತೊಂದು ಅಂದಾಜು ಪಟ್ಟಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಪುರಾತತ್ವ ಇಲಾಖೆ ಎಂಜಿನಿಯರ್ ದೊರೆರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

