ಹಾವೇರಿ

ಪಡಿತರ ಪರಿಷ್ಕೃತ ಪಟ್ಟಿ

Published On :

ಹಾವೇರಿ: ಜಿಲ್ಲೆಯಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಡಿಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡುತ್ತಿರುವ ಅಕ್ಕಿ ಮತ್ತು ಗೋದಿ ಪ್ರಮಾಣದಲ್ಲಿ ಘಟಕವಾರು ಪರಿಷ್ಟೃತ ಬದಲಾವಣೆ ಮಾಡಲಾಗಿದೆ.
ಏಪ್ರಿಲ್ 2013ನೇ ಮಾಸಿಕ ಯುನಿಟ್ ಪದ್ಧತಿಯನ್ನು ಅಳವಡಿಸಿ ಆಹಾರಧಾನ್ಯ ಬಿಡುಗಡೆ ಮಾಡಲು ಆದೇಶ ಮಾಡಲಾಗಿದೆಯೆಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ.
ಯುನಿಟ್ ಪದ್ಧತಿ: ಒಂಟು ಯುನಿಟ್‌ಗೆ 4 ಕೆಜಿ ಅಕ್ಕಿ ಹಾಗೂ 1 ಕೆಜಿ ಗೋದಿ, ಎರಡು ಯುನಿಟ್‌ಗೆ 8 ಕೆಜಿ ಅಕ್ಕಿ ಹಾಗೂ 1 ಕೆಜಿ ಗೋದಿ, ಮೂರು ಯುನಿಟ್‌ಗೆ 12 ಕೆಜಿ ಅಕ್ಕಿ ಹಾಗೂ 1 ಕೆಜಿ ಗೋದಿ, ನಾಲ್ಕು ಯುನಿಟ್‌ಗೆ 15 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋದಿ, 5 ಹಾಗೂ ಮೇಲ್ಪಟ್ಟ ಯುನಿಟ್‌ಗಳಿಗೆ 15 ಕೆಜಿ ಅಕ್ಕಿ ಮತ್ತು 3 ಕೆಜಿ ಗೋದಿ ನೀಡಲಾಗುವುದು.
ಏಪ್ರಿಲ್ ತಿಂಗಳಿಗೆ ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ಹಾಗೂ ಗೋದಿಯನ್ನು ಹಂಚಿಕೆ ನೀಡಿರುವುದಿಲ್ಲವೆಂದು ತಿಳಿಸಿದ್ದಾರೆ.

ಸುವ್ಯವಸ್ಥಿತ ಆಡಳಿತಕ್ಕೆ ಕಾಂಗ್ರೆಸ್ ಬದ್ಧ: ಎಚ್ಕೆ
ಗದಗ:
ರಾಜ್ಯದಲ್ಲಿ ಮತ್ತೆ ಸುವ್ಯವಸ್ಥಿತ ಆಡಳಿತ ನೀಡಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸೋಮವಾರ ನಗರದ ಎಪಿಎಂಸಿ ಯಾರ್ಡ್ ಬಳಿ ಇರುವ ಕೆ.ಎಚ್. ಪಾಟೀಲ ಸಭಾಭವನದಲ್ಲಿ ರಾಜೀವಗಾಂದಿ ಪಂಚಾಯತ್ ರಾಜ್ ಸಂಘಟನೆ ಗದಗ ತಾಲೂಕು ಘಟಕದ ವತಿಯಿಂದ ನೋಂದಾಯಿತ ಸದಸ್ಯರ ಗ್ರಾಮ ಘಟಕದ ಪದಾಧಿಕಾರಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದ ರಾಜಕೀಯ ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಐದು ವರ್ಷ ಆಳಿದ ಬಿಜೆಪಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮಾಡುವ ಮೂಲಕ ರಾಜ್ಯವನ್ನು ಅಧೋಗತಿಗೆ ತಳ್ಳಿದೆ. ರು. 1.50 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ರಾಜ್ಯದ ಅಮೂಲ್ಯ ಸಂಪತ್ತನ್ನು ದೋಚಿ, ರಾಜ್ಯವನ್ನು ಅವನತಿಯ ಹಾದಿ ಹಿಡಿಸಿದೆ ಎಂದು ದೂರಿದರು.
ಮುಖ್ಯಮಂತ್ರಿಯೊಬ್ಬರು ಹಗರಣಗಳ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿ ಬಂದಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾತ್ರ. ಇಂಥ ಹೊಲಸು ರಾಜಕೀಯದ ಮೂಲಕ ರಾಜ್ಯವನ್ನು ಬಿಜೆಪಿ ದಿಕ್ಕು ತಪ್ಪಿಸಿದೆ. ರಾಜ್ಯದ ಅರಣ್ಯ ಸಂಪತ್ತು, ಗಣಿಗಳನ್ನು ಸ್ವಹಿತಾಸಕ್ತಿಗೆ ಮಾರಿಕೊಂಡು ಜನರ ಆಕ್ರೋಶಕ್ಕೆ ಗುರಿಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಬೆಂಬಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮಾಜಿ ಸಚಿವ ಬಿ.ಆರ್. ಯಾವಗಲ್ ಪಕ್ಷ ಸಂಘಟನೆ ಕುರಿತು ಮಾತನಾಡಿದರು.

ಜಿಗುಪ್ಸೆ: ಮೂವರು ಆತ್ಮಹತ್ಯೆ
ರಾಣಿಬೆನ್ನೂರು:
ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿದ ಧಾರುಣ ಘಟನೆ ಸೋಮವಾರ ಮಧ್ಯಾಹ್ನ ರಾಣಿಬೆನ್ನೂರು ರೇಲ್ವೆ ನಿಲ್ದಾಣದಲ್ಲಿ ನಡೆದಿದೆ. ರಾಣಿಬೆನ್ನೂರು ತಾಲೂಕಿನ ಅರನಗಿರಿ ಗ್ರಾಮದ ವಿಶಾಲಾಕ್ಷಮ್ಮ ಶಿವಲಿಂಗಪ್ಪ ಅರಾಧ್ಯಮಠ(35), ಈಕೆಯ ಮಕ್ಕಳಾದ ಮಹಾಲಕ್ಷೀ(11) ಹಾಗೂ ಕಾವೇರಿ(6) ಎಂಬಾತರೇ ರೈಲ್ವೆ ಹಳಿಗೆ ಬಿದ್ದು ಬಲಿಯಾದ ನತದೃಷ್ಟರು. ದಾದರ್ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ ರಾಣೆಬೆನ್ನೂರು ಸ್ಟೇಶನ್ ಬಳಿ ಚಲಿಸುತ್ತಿದ್ದ ಸಂದರ್ಭ ಮೂವರು ತಕ್ಷಣ ರೈಲಿನ ಹಳಿ ಮೇಲೆ ಬಿದ್ದಿದ್ದರಿಂದ ಸ್ಥಳದಲ್ಲೆ ಮೃತರಾಗಿದ್ದಾರೆ. ಈ ಕುರಿತು ರಾಣೆಬೆನ್ನೂರು ರೇಲ್ವೆ ಪಿಎಸ್‌ಐ ಬಿ.ಡಿ. ದ್ಯಾವನಗೌಡ ಪ್ರಕರಣ ದಾಖಲಿಸಿಕೊಂಡಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.