ಬೆಳೆವಿಮೆ ಬಿಡುಗಡೆ ಮಾಡಿ
ಬ್ಯಾಡಗಿ: ಬೆಳೆವಿಮೆ ಹಣ ಬಿಡುಗಡೆ ಮುಂತಾದ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಹೋರಾಟ ಸಮಿತಿ ಸದಸ್ಯರು ಮಂಗಳವಾರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮುರಿಗೆಪ್ಪ ಶೆಟ್ಟರ ಮಾತನಾಡಿ, 2012ರಲ್ಲಿ ತಾಲೂಕಿನ ಬಹುತೇಕ ರೈತರು ವಿಮೆ ಕಂತನ್ನು ತುಂಬಿದ್ದಾರೆ. ಹಣ ಬಿಡುಗಡೆಯಾದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಅದು ರೈತನ ಕೈ ತಲುಪಿಲ್ಲ. ಬೇರೆ ತಾಲೂಕಿನಲ್ಲಿ ಬೆಳೆವಿಮೆ ಹಣ ಪಡೆದ ಬಗ್ಗೆ ವದಂತಿಯಿದ್ದು, ಮತ್ತಷ್ಟು ಕಂಗಾಲಾಗಿರುವ ತಾಲೂಕಿನ ರೈತರು ಬ್ಯಾಂಕ್ ಹಾಗೂ ಕೃಷಿ ಇಲಾಖೆ ಕಚೇರಿಗೆ ನಿತ್ಯ ಅಲೆದಾಡುವಂತಾಗಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಖಚಿತ ಮಾಹಿತಿ ನೀಡುತ್ತಿಲ್ಲ. ಇದನ್ನೂ ಹೋರಾಟ ಮಾಡಿಯೇ ಪಡೆದುಕೊಳ್ಳಬೇಕೇ ಎಂದು ಪ್ರಶ್ನಿಸಿದರು.
ಯಾವ ಹಂತದಲ್ಲಿದೆ?: ಕಳೆದ ವರ್ಷ ಬರಗಾಲ ಎದುರಿಸಿದ ರೈತರು ಕೃಷಿಗೆ ವ್ಯಯ ಮಾಡಿದ ಹಣ ವ್ಯರ್ಥವಾಯಿತು, ಬೆಳೆವಿಮೆ ಹಣವಾದರೂ ಮುಂಗಾರು ಹಂಗಾಮಿನಲ್ಲಿ ಗೊಬ್ಬರ, ಬೀಜಕ್ಕೆ ಹಣಕಾಸಿನ ಆಸರೆಯಾಗಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರಿಗೆಲ್ಲ ನಿರಾಸೆಯಾಗಿದ್ದು, ಸರ್ಕಾರದ ಘೋಷಣೆ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು. ತಾಲೂಕಿನ ಸುಮಾರು 16 ಸಾವಿರ ರೈತರಿಗೆ ರು. 13.35 ಕೋಟಿ ಬೆಳೆವಿಮೆ ಬಿಡುಗಡೆಯಾಗಬೇಕಿದ್ದು, ಕೇಂದ್ರ ಸರ್ಕಾರ ಹಾಗೂ ವಿಮಾ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ ಹಣ ಮಂಜೂರಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಲು ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದ ಅವರು, ಶೀಘ್ರದಲ್ಲೇ ಬೆಳೆವಿಮೆ ಹಣ ರೈತರ ಖಾತೆಗಳಿಗೆ ಜಮಾ ಮಾಡುವಂತೆ ಆಗ್ರಹಿಸಿದರು.
ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಿಂದಿನ ಸರ್ಕಾರ ಸುವರ್ಣಭೂಮಿ ಯೋಜನೆ ಮೂಲಕ ಸಣ್ಣ, ಅತಿಸಣ್ಣ ರೈತರಿಗೆ ತಲಾ ರು. 10 ಸಾವಿರ ಅನುದಾನ ನೀಡಿದೆ. ಆದರೆ ತಾಲೂಕಿನಲ್ಲಿ ಅರ್ಜಿ ಸಲ್ಲಿಸಿದ 11793 ರೈತರ ಪೈಕಿ 5703 ಜನರಿಗೆ ಅನುದಾನ ಸಿಕ್ಕರೂ 6090 ರೈತರು ಯೋಜನೆಯಿಂದ ವಂಚಿತರಾಗಿದ್ದಾರೆ. ಸುವರ್ಣಭೂಮಿ ಯೋಜನೆ ಮುಂದುವರಿಸಲು ಆಗ್ರಹಿಸಿದರು.
ಪರಿಹಾರ ಹೆಚ್ಚಿಸಿ: ಹನುಮಂತಪ್ಪ ಮಾಗೋಡ ಮಾತನಾಡಿ, ಕೃಷಿಯನ್ನು ಮುನ್ನಡೆಸಿಕೊಂಡು ಹೋಗುವುದೇ ದುಸ್ತರವಾದ ಈ ದಿನಗಳಲ್ಲಿ ಬಹುತೇಕ ರೈತ ಕುಟುಂಬಗಳು ಸಾಲದ ಶೂಲಕ್ಕೆ ಸಿಲುಕಿವೆ. ಇದ್ದಕ್ಕಿದ್ದಂತೆ ರೈತನೇ ಮೃತಪಟ್ಟರೆ ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗಲಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತ ಆಕಸ್ಮಿಕ ಸಾವನ್ನಪ್ಪಿದಲ್ಲಿ ರೈತ ಸಂಜೀವಿನ ಯೋಜನೆಯಡಿ ಸಂತ್ರಸ್ತ ಕುಟುಂಬಕ್ಕೆ ನೀಡುತ್ತಿರುವ ಪರಿಹಾರದ ಮೊತ್ತವನ್ನು ರು. 1ರಿಂದ 5 ಲಕ್ಷಕ್ಕೆ ಏರಿಸಬೇಕು ಹಾಗೂ ಮೃತ ರೈತನ ಕೃಷಿ ಸಂಬಂಧಿತ ಸಾಲಗಳನ್ನು ಮನ್ನಾ ಮಾಡುವಂತೆ ಆಗ್ರಹಿಸಿದರು.
ತಹಸೀಲ್ದಾರ್ ಸುಭಾಸ್ ಪುಲಾರೆ ಮನವಿ ಸ್ವೀಕರಿಸಿದರು. ನಿಂಗಪ್ಪ ಆರಳೀಮಟ್ಟಿ, ರುದ್ರಪ್ಪ ಹೊಸಮನಿ, ಈರಪ್ಪ ಸಂಕಣ್ಣನವರ, ಮುತ್ತಪ್ಪ ಸಂಕಣ್ಣನವರ, ಬಸವರಾಜ ಹೊಳಲ, ಮಂಜುನಾಥ ಬೆಳಕೇರಿ, ಯಲ್ಲಪ್ಪ ಅಂಗರಗಟ್ಟಿ, ಅಶೋಕ ಕದರಮಂಡಲಗಿ, ಕಲ್ಲಪ್ಪ ತಳಮನಿ, ಈರಣ್ಣ ಚೌಟಿ, ಮಹದೇವಪ್ಪ ಎಲಿ, ರಾಜು ಚನ್ನಗೌಡ್ರ, ಗುರಪ್ಪ ಹೊಳಲ, ಚನ್ನಬಸಪ್ಪ ಮೋಟೆಬೆನ್ನೂರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

