ಭಕ್ತಿಯ ಗುಂಗು, ರಂಜಾನ್ ರಂಗು
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 9
ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಶುಕ್ರವಾರ ಬೆಳಗ್ಗೆ ಇಲ್ಲಿನ ದಾನಮ್ಮ ದೇವಸ್ಥಾನದ ಬಳಿಯಿರುವ ಈದ್ಗಾ ಮೈದಾನದಲ್ಲಿ ಭಕ್ತಿ-ಭಾವದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗೆ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಮಾಜ ಬಾಂಧವರು ಅಲ್ಲಾಹನ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹೊಸ ಬಟ್ಟೆ ಧರಿಸಿ ಈದ್ಗಾಕ್ಕೆ ಆಗಮಿಸಿದ್ದ ಸಮಾಜ ಬಾಂಧವರು ಅತ್ಯಂತ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗೆ ಆಗಸದಲ್ಲಿ ಮೋಡಗಳು ಕಂಡು ಬಂದರೂ ಸಾಮೂಹಿಕ ಪ್ರಾರ್ಥನೆಗೆ ಯಾವುದೇ ರೀತಿಯ ತೊಂದರೆ ಮಾಡಲಿಲ್ಲ.
ಪ್ರಾರ್ಥನೆ ನಂತರ ಸಮಾಜ ಬಾಂಧವರು ಉದಾರ ಮನದಿಂದ ದಾನ ನೀಡುವ ಮೂಲಕ ಅಲ್ಲಾಹನ ಕೃಪಾಕಟಾಕ್ಷಕ್ಕೆ ಪಾತ್ರರಾದರು. ರಂಜಾನ್ ಹಬ್ಬದ ಅಂಗವಾಗಿ ನಗರದ ಬಹುತೇಕ ಪ್ರದೇಶಗಳಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಶರಬತ್ ಹಾಗೂ ತಂಪು ಪಾನಿಯಗಳನ್ನು ವಿತರಿಸಿದರು. ಕಾಲ್ನಡಿಗೆ ಹಾಗೂ ವಾಹನಗಳಲ್ಲಿ ರಸ್ತೆ ಮೂಲಕ ತೆರಳುತ್ತಿರುವ ಜನರಿಗೆ ತಂಪು ಪಾನೀಯ ವಿತರಿಸಲಾಯಿತು. ಒಟ್ಟಾರೆ ಹಬ್ಬದ ಕಳೆಯಲ್ಲಿ ಇಡೀ ಹಾವೇರಿ ನಗರ ಮಿಂದೆದ್ದಿತ್ತು.
ವಕ್ಫ್ ಬೋರ್ಡ್ ಅಧ್ಯಕ್ಷ ಅಲ್ಲಾಭಕ್ಷ ತಿಮ್ಮಾಪುರ, ಮಾಜಿ ಅಧ್ಯಕ್ಷ ಸುಭಾಸಿ ಚೂಡಿದಾರ, ಜಮಾತ್ ಅಧ್ಯಕ್ಷ ಅಯೂಬ್ ಪಠಾಣ ಮತ್ತಿತರ ಗಣ್ಯರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ರುದ್ರಪ್ಪ ಲಮಾಣಿ ತಮ್ಮ ಬೆಂಬಲಿಗರೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಹಬ್ಬದ ಶುಭಾಶಯ ಕೋರಿದರು.
ಸಂಭ್ರಮದ ರಂಜಾನ್
ಹಾನಗಲ್ಲ: ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸಿದರು.
ಪಟ್ಟಣದ ಹೊರವಲಯದ ದರ್ಗಾ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಮೌಲಾನಾ ಜಹೀರುದ್ದೀನ ಮುವಝನ್ ಗುರುಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪುರಸಭೆ ಮಾಜಿ ಅಧ್ಯಕ್ಷರಾದ ಅಹಮ್ಮದ ಭಾಷಾ ಫೀರಜಾದೆ, ಎನ್.ಐ. ಸವಣೂರ, ಸರವರಪಾಶಾ ಫೀರಜಾದೆ, ಪುರಸಭಾ ಸದಸ್ಯ ಚಮನ್‌ಸಾಬ ಕಿತ್ತೂರ, ಶಕೀಲ ಬಾಳೂರ, ಪಾಪಾಸಾಬ ಖೇಣಿ, ಮಹಮ್ಮದ ಜಾಫರ ಖೇಣಿ, ಮಖಬೂಲ ಅಹ್ಮದ ಸರ್ವಿಕೇರಿ, ಗಣ್ಯರಾದ ಎಂ.ಆರ್. ಗುತ್ತಲ, ಕೆ.ಎಂ. ಹುಲ್ಲತ್ತಿ, ಎಂ.ಎಂ. ರಿಕಾಟಿ, ಎ.ಎಂ. ಬಾಳೂರ, ನೌಶಾದ ರಾಣಿಬೆನ್ನೂರ, ನಿಸಾರ ಗೌಂಡಿ, ಬಾಬಾಜಾನ ಕೊಂಡವಾಡಿ, ರಫೀಕ ನೀಲಂಜಿ, ಮೌಲಾನಾ ಕಲೀಲ ಅಹ್ಮದ, ಮಖಬೂಲ ಅಹ್ಮದ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಶಾಂತಿ-ಸೌಹಾರ್ದದ ರಂಜಾನ್ ಆಚರಣೆ
ಹಾನಗಲ್ಲ: ತಾಲೂಕಿನ ಅಕ್ಕಿಆಲೂರು ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಪವಿತ್ರ ರಮ್ಜಾನ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ಮುಸ್ಲಿಮರು ವಿಶ್ವಶಾಂತಿಗೆ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು. ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಶುಭಾಶಯ ಕೋರಿದರು. ಗ್ರಾಪಂ ಸದಸ್ಯ ಅಬ್ದುಲ ಸತ್ತಾರ ಅರಳೇಶ್ವರ, ಸಿದ್ದನಗೌಡ ಪಾಟೀಲ, ಜಾಫರಸಾಬ ಚನ್ನಾಪುರ, ವಹಾಬ ನಾಯಿಕೊಡಿ, ರಫೀಕಸಾಬ ಹಿತ್ತಲಮನಿ, ಶಾನು ರುಸ್ತುಂಖಾನವರ ಹಾಜರಿದ್ದರು.
ಎಲ್ಲೆಡೆ ಹಬ್ಬದ ಸಡಗರ
ರಾಣಿಬೆನ್ನೂರು: ನಗರ ಹಾಗೂ ಸುತ್ತಲಿನ ಗ್ರಾಮಗಳ ಮುಸ್ಲಿಂ ಬಾಂಧವರು ಇಲ್ಲಿನ ಮಾರುತಿ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಸಡಗರ ಸಂಭ್ರಮದಿಂದ ರಂಜಾನ್ ಹಬ್ಬದ ಪ್ರಾರ್ಥನೆ ಸಲ್ಲಿಸಿದರು.
ಸುಮಾರು 30 ದಿನ ಪವಿತ್ರ ರೋಜಾ ಆಚರಣೆಯ ಮುಖಾಂತರ ಅಲ್ಲಾಹನ ಧ್ಯಾನದಲ್ಲಿ ಕಾಲ ಕಳೆದು ಭಗವಂತನ ಕೃಪೆಗೆ ಪಾತ್ರರಾದ ಮುಸ್ಲಿಂ ಬಾಂಧವರಿಗೆ ಶಾಸಕರಾದ ಕೆ.ಬಿ. ಕೋಳಿವಾಡ, ಮಾಜಿ ಶಾಸಕ ಜಿ. ಶಿವಣ್ಣ, ನಗರಸಭೆಯ ಮಾಜಿ ಅಧ್ಯಕ್ಷರಾದ ರಾಮಣ್ಣ ಕೋಲಕಾರ, ಶೇಖಪ್ಪ ಹೊಸಗೌಡ್ರ, ಬಸವರಾಜ ಲಕ್ಷ್ಮೇಶ್ವರ, ಶರಿನ್ ತಾಜ ಶೇಖ, ಎಪಿಎಂಸಿ ಅಧ್ಯಕ್ಷ ಸಣ್ಣತಮ್ಮಪ್ಪ ಭಾರ್ಕಿ, ತಾಪಂ ಮಾಜಿ ಅಧ್ಯಕ್ಷೆ ಶಾರದಾ ಲಮಾಣಿ, ಗಣೇಶಪ್ಪ ಬಿಲ್ಲಾಳ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ರವಿಂದ್ರಗೌಡ ಎಫ್. ಪಾಟೀಲ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಶುಭ ಹಾರೈಸಿದರು.
ಈದ್ಗಾ ಮೈದಾನದಲ್ಲಿ ಸೇರಿದ್ದ 10 ಸಾವಿರಕ್ಕೂ ಅಧಿಕ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ನಿಮಿತ್ತ ಪ್ರಾರ್ಥನೆ ಸಲ್ಲಿಸಿದರು. ತಾಲೂಕು ಅಂಜುಮನ್ ಎ ಇಸ್ಲಾಂ ಕಮಿಟಿಯ ಅಧ್ಯಕ್ಷ ಎಂ.ಕೆ ಕಿಲ್ಲೇದಾರ, ಕಾರ್ಯದರ್ಶಿ ನಸರುಲ್ಲಾ ಮುಲ್ಲಾ, ನಗರಸಭೆ ಸದಸ್ಯರಾದ ಭಾಷಾಸಾಬ್ ಕಾಟೇನಹಳ್ಳಿ, ಬಾಬುಸಾಬ ಹಾವನೂರು, ಖಾಜಾಸಾಬ್ ಕರ್ಜಗಿ, ಫೈರೋಜ ಟಿನ್ ಮೇಕರ್ ಮುಂತಾದ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

