ಹಾವೇರಿ

ಜೌಗು: ಹಾಳಾಯಿತು ಹತ್ತಿ!

Published On :

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಅ. 9
ಹಾವೇರಿ ಜಿಲ್ಲೆಯ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿರೇಕೆರೂರು ದುರ್ಗಾದೇವಿ ಕೆರೆ ಭರ್ತಿಯಾಗುವ ಸಂಭವವಿದ್ದು, ಕೆರೆಯ ಅಕ್ಕಪಕ್ಕದ ಸಾವಿರ ಹೆಕ್ಟೇರ್ ಕೃಷಿ ಭೂಮಿ ಜೌಗಿನಿಂದಾಗಿ ಹತ್ತಿ ಬೆಳೆ ಕಮರುವ ಹಂತ ತಲುಪಿ ರೈತರು ಪರಿತಪಿಸುವಂತಾಗಿದೆ.
ಈ ಬಾರಿ ಎಲ್ಲಡೆ ಭಾರಿ ಮಳೆಯಾಗಿದ್ದು ನಿಜ. ಆದರೆ ಹಿರೇಕೆರೂರು ದುರ್ಗಾದೇವಿ ಕೆರೆ ಮಾತ್ರ ಇನ್ನೂ ಭರ್ತಿಯಾಗಿಲ್ಲ. ಹೀಗಿದ್ದರೂ ಇದರ ಅಕ್ಕಪಕ್ಕದ ಹತ್ತಿ ಬಿತ್ತನೆ ಮಾಡಿದ ಜಮೀನುಗಳು ಮಾತ್ರ ವಿಪರಿತ ಮಳೆಯಿಂದಾಗಿ ನೀರಿನಿಂದ ಅವೃತವಾಗಿವೆ. ಉತ್ತಮ ಮಳೆಯಾಗುತ್ತದೆ ಎಂಬ ನಿರೀಕ್ಷೆಯೇ ಇಲ್ಲದೆ ರೈತರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ದರದಲ್ಲಿ ಮಾರಾಟವಾಗುವ ಹಾಗೂ ಗರಿಷ್ಠ ಇಳುವರಿ ನೀಡುವ ಬಿಟಿ ಹತ್ತಿ ಬಿತ್ತನೆ ಮಾಡಿದರು. ಜೂನ್ ಕೊನೆಯ ವಾರದಲ್ಲಿ ಮೇಲು ಗೊಬ್ಬರ ಹಾಗೂ ಕೀಟನಾಶಕಗಳನ್ನು ಸಿಂಪರಣೆ ಮಾಡುವ ಮೂಲಕ ಉತ್ತಮವಾಗಿ ಬೆಳೆಯಲು ಬೇಕಾದ ಎಲ್ಲ ಪೋಷಕಾಂಶಗಳನ್ನು ಹತ್ತಿ ಬೆಳೆಗ ಪೂರೈಸಿದರು. ಸಮಯಕ್ಕೆ ಸರಿಯಾಗಿ ಕಳೆ ಕಸ ಸ್ವಚ್ಛಗೊಳಿಸಿದರು. ಜುಲೈ ಮೊದಲನೇ ವಾರದಿಂದ ದಿನ ನಿತ್ಯ ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ದುರ್ಗಾದೇವಿ ಕೆರೆ ಭರ್ತಿಯಾಗುವ ಹಂತ ತಲುಪಿತು. ಇನ್ನೇನು ಬಂಪರ್ ಬೆಳೆ ಬಂದು ಈ ಬಾರಿ ಸಾಲದ ಶೂಲದಿಂದ ಬಿಡುಗಡೆಯಾಗುತ್ತವೆ ಎನ್ನುವಾಗಲೇ ಬೆಳೆ ಜೌಗಿನಿಂದ ನಾಶವಾಗುತ್ತಿರುವುದು ರೈತರನ್ನು ಹತಾಶರನ್ನಾಗಿಸಿದೆ.
ಕೆಸರು ತಂದ ಕಷ್ಟ
ಜುಲೈ ಮೊದಲನೇ ವಾರದಿಂದ ಸತತವಾಗಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯೇನೋ ಸುರಿಯಿತು. ಆದರೆ ದುರ್ಗಾದೇವಿ ಕೆರೆ ಭರ್ತಿಯಾಗಿಲಿಲ್ಲ. ಇದು ರೈತರನ್ನು ಮತ್ತಷ್ಟು ಹತಾಶರನ್ನಾಗಿಸಿದೆ. ಇದರಿಂದ ಕೆರೆಯ ಇಕ್ಕೆಲಗಳಲ್ಲಿ ಇರುವ ಜಮೀನುಗಳು ಮಾತ್ರ ನೀರಿನಿಂದ ಅವೃತವಾಗಿ ಹತ್ತಿ ಬೆಳೆ ನೀರಿನಲ್ಲಿ ಮುಳುಗಿತು. ರೈತರು ತಲೆ ಮೇಲೆ ಕೈಹೊತ್ತು ಚಿಂತಿಸುವಂತಾಯಿತು.
ಹತ್ತಿ ಬೆಳೆ ನಾಶವಾದರೆ ಬತ್ತದ ಬೆಳೆಯಾದರೂ ನಾಟಿ ಮಾಡೋಣ ಎಂದರೆ ಕೆರೆ ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಬತ್ತದ ಬೆಳೆಗೆ ನೀರು ಹೆಚ್ಚು ಅಗತ್ಯ. ಬೆಳೆ ಬರುವಷ್ಟು ದಿನಗಳ ಕಾಲ ಕೆರೆಯಲ್ಲಿ ನೀರು ನಿಲ್ಲುವುದೆ? ಬೆಳೆಗೆ ಸಾಕಾಗುವಷ್ಟು ನೀರು ಬರುವುದೇ? ಎಂಬ ಅತಂಕ ಒಂದೆಡೆಯಾದರೆ, ಬತ್ತದ ಮಡಿ ತಯಾರಿಸಿ ಸಸಿ ಮಾಡಲು ದಿನಗಳೇ ಇಲ್ಲ. ನಾಟಿ ಮಾಡಲು ದಿನಗಳಿಲ್ಲ. ಇತ್ತ ನಾಟಿ ಮಾಡಲು ಗದ್ದೆ-ಜಮೀನುಗಳನ್ನು ಹದಗೊಳಿಸಲು ಯಾಂತ್ರೀಕೃತ ಬೇಸಾಯ ಬೇಕು. ದುಬಾರಿ ಡೀಸೆಲ್ ಬಳಸಿ ಗದ್ದೆಗಳನ್ನು ಹದ ಮಾಡಲು ಟ್ರ್ಯಾಕ್ಟರ್ ಮಾಲೀಕರು ವಿಪರೀತ ಹಣ ಕೇಳುತ್ತಾರೆ. ಸಸಿಗಳನ್ನು ನಾಟಿ ಮಾಡಲು ದಿನವೊಂದಕ್ಕೆ ಕಳೆದ ವರ್ಷ ರು. 150 ಇದ್ದ ಕೂಲಿ ದರ ಇದೀಗ ರು. 250ಕ್ಕಿಂತಲೂ ಹೆಚ್ಚಾಗಿದೆ. ಇದು ಇಲ್ಲಿನ ರೈತರಿಗೆ ನುಂಗಾಲಾರದ ತುತ್ತಾಗಿದೆ.
ವಿವಿಧೆಡೆ ಬತ್ತದ ನಾಟಿ
ಪರಿಸ್ಥಿತಿ ತೀರಾ ಇಕ್ಕಟ್ಟನಲ್ಲಿದ್ದರೂ ಕೆಲ ರೈತರು ಧೈರ್ಯದಿಂದ ಬತ್ತದ ನಾಟಿಗೆ ಮುಂದಾಗಿದ್ದಾರೆ. ಕೆರೆಯ ಪಕ್ಕದಲ್ಲಿರುವ ಗ್ರಾಮಗಳಾದ ತಾವರಗಿ, ಹೊಸಳ್ಳಿ ಕೆರೆಗಳ ತಗ್ಗು ಪ್ರದೇಶಗಳಲ್ಲಿರುವ ಕೆಲ ರೈತರು ಎತ್ತು, ಟ್ರ್ಯಾಕ್ಟರ್, ಪವರ್ ಟಿಲ್ಲರ್ ಮೂಲಕ ಬತ್ತ ನಾಟಿಗೆ ಭೂಮಿ ಹದಗೊಳಿಸುತ್ತಿದ್ದಾರೆ. ರೈತರ ಸಂಕಷ್ಟದ ಸಮಯದಲ್ಲಿ ಅವರಿಗೆ ರಿಯಾಯತಿ ದರದಲ್ಲಿ ಬತ್ತದ ಬೀಜ ಮತ್ತು ಗೊಬ್ಬರ ಒದಗಿಸಲು ಜನಪ್ರತಿನಿಧಿಗಳು ಮುಂದಾಗಬೇಕಿದೆ.

ಗಂಗಾಧರ ಎಸ್. ಹಲಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.