ಹಾವೇರಿ

ಸಾಕ್ಷರರಿಂದ ದೇಶದ ಪ್ರಗತಿ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಆ. 17
ಶೈಕ್ಷಣಿಕ ಪ್ರಗತಿ ಕುಂಠಿತವೆಂದರೆ ಅನಾಗರಿಕತೆಯ ಸಂಕೇತ ಇಂತಹ ತಾರ್ಕಿಕ ಸತ್ಯವನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇಬೇಕಾಗಿದ್ದು, ಸಾಕ್ಷರರ ಸಂಖ್ಯೆಯಿಂದಲೇ ದೇಶದ ಪ್ರಗತಿ ಪರಿಗಣಿಸುವಂಥ ಕಾಲ ಬಂದಿದೆ ಎಂದು ತಾಪಂ ಕಾರ್ಯನಿರ್ವಾಹಕಾಧಿಕಾರಿ ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ಸ್ಥಳೀಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪ್ರೇರಕರ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಂಪನ್ಮೂಲ ಸದ್ಬಳಕೆಯಾಗಲಿ: ದೇಶದಲ್ಲಿ ಹೇರಳವಾಗಿ ಮಾನವ ಸಂಪನ್ಮೂಲ ಹೊಂದಿದೆಯಾದರೂ ಅದರ ಸದ್ಬಳಕೆಯಾಗುತ್ತಿಲ್ಲ ಎಂಬ ಕೂಗು ಎಲ್ಲೆಡೆಯಿಂದ ಕೇಳಿ ಬರುತ್ತಿದೆ ಎಂದರು.
ಶಿಕ್ಷಣದಿಂದ ಪ್ರಗತಿ: ಶೈಕ್ಷಣಿಕ ಪ್ರಗತಿ ಹಿನ್ನೆಡೆಯಿಂದಲೇ ನಿರೀಕ್ಷಿಸಿದಷ್ಟು ಪ್ರಗತಿ ಹೊಂದಲು ಸಾಧ್ಯವಾಗಿಲ್ಲವೆಂಬ ಸಾರ್ವತ್ರಿಕ ಸತ್ಯವನ್ನು ದೇಶದ ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇಬೇಕು. ಈ ಹಿನ್ನೆಲೆಯಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿ ವಿದ್ಯಾವಂತನಾಗಿ ಹೊರಹೊಮ್ಮಿದಾಗ ಮಾತ್ರ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವೆಂದರು.
ಶಿಕ್ಷಣವಿಲ್ಲದಿದ್ದರೆ ದೇಶ ಅಧೋಗತಿಗಿಳಿಯಲಿದೆ. ವಿದ್ಯಾವಂತರು ಅನಕ್ಷರಸ್ಥರನ್ನು ಸಾಕ್ಷರನ್ನಾಗಿಸುವಲ್ಲಿ ಆಸಕ್ತಿ ತೋರಬೇಕಾಗಿದೆ. ಸ್ವಾತಂತ್ರ್ಯ ದೊರೆತು ಆರೂವರೆ ದಶಕ ಗತಿಸಿದರೂ ಮೂಢನಂಬಿಕೆ, ಬಡತನ, ನಿರುದ್ಯೋಗ ಸಮಸ್ಯೆಗಳು ದೇಶದಲ್ಲಿ ಇಂದಿಗೂ ಜೀವಂತವಾಗಿವೆ. ಇದಕ್ಕೆ ಅಪ್ರತ್ಯಕ್ಷವಾಗಿ ಅನಕ್ಷರತೆ ಕಾರಣವಾಗಿದೆ ಎಂದರು.
ಸಾಕ್ಷರತೆ ಪ್ರಮಾಣ: ಸಾಕ್ಷರತಾ ಪ್ರತಿಜ್ಞಾ ವಿಧಿ ಬೋಧಿಸಿದ ಸಂಯೋಜಕ ಆರ್.ಎಂ. ಪಾಟೀಲ, ಜನರನ್ನು ಸಾಕ್ಷರರನ್ನಾಗಿಸುವ ಉದ್ದೇಶದಿಂದಲೇ ಸಾಕ್ಷರ ಭಾರತ ಕಾರ್ಯಕ್ರಮವನ್ನು ಸರ್ಕಾರ ಮುಂದುವರೆಸಿದೆ. ಜಿಲ್ಲೆಯಲ್ಲಿ ಶೇ. 23.4ರಷ್ಟು ಅನಕ್ಷರಸ್ಥರಿದ್ದಾರೆ. ಅದರಲ್ಲೂ ಮಹಿಳೆಯರು ಶೇ. 19ರಷ್ಟಿದ್ದು ದೌರ್ಬಲ್ಯವನ್ನರಿತ ಕೆಲವರು ಹತ್ತು ಹಲವು ಸಂದರ್ಭಗಳಲ್ಲಿ ಅವರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ನಾಗರತ್ನ ಹುಲ್ಲತ್ತಿ, ಅನಕ್ಷರತೆ ಹೋಗಲಾಡಿಸಲು ಪ್ರೇರಕರು ಶ್ರಮಿಸಿದಾಗ ಮಾತ್ರ ಸಾಕ್ಷರ ಭಾರತ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅನಕ್ಷರಸ್ಥರಿಗೆ ಅಕ್ಷರದ ಅರಿವು ಮೂಡಿಸುವ ಮೂಲಕ ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸಲು ಸಾರ್ವಜನಿಕರ ಸಹಕಾರ ಕೋರಿದರು.
ಈ ಸಂದರ್ಭ ತಾಪಂ ಅಧ್ಯಕ್ಷೆ ಚಿನ್ನಮ್ಮ ಪಾಸಿ, ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಸದಸ್ಯ ಚನ್ನಬಸಪ್ಪ ದೇಸಾಯಿ ಹಾಗೂ ತಾಪಂ ಕಾರ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.