ಸಿದ್ಧಾರೂಢರ ತೆಪ್ಪದ ತೇರು
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 21
ತಾಲೂಕಿನ ಕೋಣನತಂಬಿಗಿ ಗ್ರಾಮದಲ್ಲಿ ಶ್ರೀ ಸಿದ್ಧಾರೂಢರ ತೆಪ್ಪದ ತೇರನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೂಲು ಹುಣ್ಣಿಮೆಯ ದಿನವಾದ ಬುಧವಾರ ಶ್ರದ್ಧಾ ಭಕ್ತಿಯಿಂದ ಎಳೆಯಲಾಯಿತು.
ಕೋಣನತಂಬಗಿ ಗ್ರಾಮದ ಬಳಿ ಪೂರ್ವದಿಂದ ಪಶ್ಚಿಮಕ್ಕೆ ರಭಸವಾಗಿ ಹರಿಯುವ ವರದಾ ನದಿಯಲ್ಲಿ ಬುಧವಾರ ಸಂಜೆ 4ರಿಂದ 6ರ ತನಕ 500ಕ್ಕೂ ಹೆಚ್ಚು ಭಕ್ತರು ಶ್ರೀ ಸಿದ್ಧಾರೂಢರ ತೇರನ್ನು ಪಂಚಾಕ್ಷರಿ ಮಂತ್ರ ಪಠಿಸುತ್ತ ಎಳೆದು, ಭಕ್ತಿ ಸಾಗರದಲ್ಲಿ ತೇಲಾಡಿದರು.
ಶ್ರೀ ಸಿದ್ಧಾರೂಢರ ತೆಪ್ಪವನ್ನು ಭಕ್ತರು ಕುಂಬಳಕಾಯಿ ಸಹಾಯದಿಂದ, ಕೆಲವರು ಈಜುತ್ತಾ ಕೈಕೈ ಹಿಡಿದು ದೂಡುತ್ತಾ ತುಂಬಿದ ನದಿಯಲ್ಲಿ ಸಾಗುತ್ತಿದ್ದ ದೃಶ್ಯ ನೋಡಲು ನದಿಯ ಎರಡೂ ದಂಡೆಗಳ ಮೇಲೆ ಸಹಸ್ರಾರು ಭಕ್ತಾದಿಗಳು ನೆರದಿದ್ದರು.
ನದಿಯ ಪಕ್ಕದ ನದಿನೀರಲಗಿ ದಡದಲ್ಲಿ ಅಲ್ಲಿಯ ಭಕ್ತರಿಂದ ಪೂಜೆಗೊಂಡು ಶ್ರೀ ಸಿದ್ಧಾರೂಢರ ತೇರು ಪುನಃ ಗ್ರಾಮದ ದಡ ಸೇರಿತು. ಶ್ರೀ ಸಿದ್ಧಾರೂಢರ ತೇರು ಡೊಳ್ಳು, ಭಜನೆ ಮತ್ತು ಪೂಜೆಯೊಂದಿಗೆ ದೇವಾಲಯವನ್ನು ತಲುಪಿತು.
ಜಾತ್ರೆ ಅಂಗವಾಗಿ ಭಕ್ತರು ಎಂಟು ದಿನಗಳ ಕಾಲ ಹಗಲಿರುಳು ನಿರಂತರ ಪಂಚಾಕ್ಷರಿ ಮಂತ್ರ ಪಠಿಸುತ್ತ ಶ್ರೀ ಸಿದ್ಧಾರೂಡನ್ನು ಆರಾಧಿಸಿದರು. ಶ್ರೀ ಸಿದ್ಧಾರೂಢರ ಪ್ರವಚನವೂ ನಡೆಯಿತು.
ಸುಮಾರು ವರ್ಷಗಳಿಂದ ನಡೆದು ಬಂದರೂ ಇಂತಹ ಸಾಹಸಮಯ ಹಬ್ಬದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದೆ ಇರುವುದು ಶ್ರೀ ಜಗದ್ಗುರು ಸಿದ್ಧಾರೂಡರ ಕೃಪೆ ಎಂಬುದು ಭಕ್ತರ ಅಂಬೋಣ.
ಕಾರ್ಯಕ್ರಮದಲ್ಲಿ ಗಂಗಯ್ಯ ಶಾಂತಯ್ಯ ಕುಲಕರ್ಣಿ, ಮಾದೇವಪ್ಪ ಲೆಂಕಪ್ಪನವರ, ಮಲ್ಲೇಶಪ್ಪ ಬಣಕಾರ, ನಿಂಗಣ್ಣ ಕುಲಕರ್ಣಿ, ಡಾ ಬೆನ್ನೂರ ಪಾಲ್ಗೊಂಡಿದ್ದರು. ಕರ್ನಾಟಕದಲ್ಲೇ ವಿಶಿಷ್ಟವಾದ ಈ ತೆಪ್ಪದ ತೇರನ್ನು ವೀಕ್ಷಿಸಲು ರಾಜ್ಯದ ಮೂಲೆ-ಮೂಲೆಯಿಂದ ಭಕ್ತರು ಆಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

