ತೃತೀಯ ರಂಗ ರಚನೆ: ಬಾಬಾಗೌಡ ಪಾಟೀಲ
ಹಾವೇರಿ: ಸಾಂಪ್ರದಾಯಿಕ ರಾಜಕಾರಣದಿಂದ ಕೂಡಿರುವ ಕಾಂಗ್ರೆಸ್, ಬಿಜೆಪಿ ಹೊರತಾದ ಪ್ರಾದೇಶಿಕ ಪಕ್ಷಗಳಿಂದ ಕೂಡಿದ ತೃತೀಯ ರಂಗ ರಚನೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಬಾಬಾಗೌಡ ಪಾಟೀಲ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಪ್ರಾದೇಶಿಕ ಪಕ್ಷ ಅನಿವಾರ್ಯವಾಗಿದೆ. ಇಂಥ ಒಂದು ವ್ಯವಸ್ಥೆ ಹುಟ್ಟುಹಾಕಲು ರಾಜ್ಯದಲ್ಲಿ ಸಮಾಜವಾದಿ ಚಿಂತನೆ ಹೊಂದಿರುವ ಪ್ರಮುಖರು ಹಾಗೂ ರೈತ ಸಂಘದ ಮುಖಂಡರೊಂದಿಗೆ ಚರ್ಚಿಸಲಾಗುವುದು. ಇದನ್ನು ಆಂದೋಲನದ ರೀತಿಯಲ್ಲಿ ಮಾಡಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆಸಲು ಪ್ರಯತ್ನಿಸಲಾಗುವುದು. ಶರದ್ ಪವಾರ್, ಮುಲಾಯಂ ಸಿಂಗ್, ಜಯಲಲಿತಾ, ನವೀನ್ ಪಟ್ನಾಯಕ್ ಮೊದಲಾದ ನಾಯಕರ ನೇತೃತ್ವದಲ್ಲಿ ತೃತೀಯ ರಂಗ ರಚನೆಗೆ ಚಿಂತಿಸಲಾಗುತ್ತಿದೆ ಎಂದು ಹೇಳಿದರು.
ದೇಶದಲ್ಲಿ ರೈತರ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಗ್ರಾಮೀಣ ಜನರ ಸ್ಥಿತಿ ಚಿಂತಾಜನಕವಾಗಿದೆ. ಕೃಷಿ ಸಮಸ್ಯೆ ಬಗೆಹರಿಸುವಲ್ಲಿ ಹಾಗೂ ಇದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ವಿಫಲವಾಗಿ, ರೈತ ಆತ್ಯಹತ್ಯೆಗೆ ಮುಂದಾಗುವಂತಾಗಿದೆ. ಬೆಲೆ ಏರಿಕೆ, ಆಹಾರದಲ್ಲಿ ಕಲಬೆರಕೆ ಫಲವಾಗಿ ನಗರ ಪ್ರದೇಶಕ್ಕೂ ಸಮಸ್ಯೆ ವ್ಯಾಪಿಸುತ್ತಿದೆ. ಸುಮಾರು ರು. 38 ಸಾವಿರ ಕೋಟಿಯ ಅಡುಗೆ ಎಣ್ಣೆಯನ್ನು ವಿದೇಶದಿಂದ ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಕೃಷಿ ಉತ್ಪಾದನೆ ತಗ್ಗಿದ್ದು, ದೇಶದ ಅಭಿವೃದ್ಧಿ ಯೋಜನೆಗಳೇ ಸರಿಯಿಲ್ಲ ಎಂದು ಅವರು ಟೀಕಿಸಿದರು.
ಗ್ರಾಮೀಣ ಜನರು ಉದ್ಯೋಗ ಇಲ್ಲದೇ ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಯುವಲ್ಲೂ ಸರ್ಕಾರಗಳು ವಿಫಲವಾಗಿವೆ. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಮೊರಕ್ಕೋ, ಇಥಿಯೋಪಿಯಾದಂತೆ ನಾವೂ ಪ್ರಪಾತಕ್ಕೆ ಬೀಳುವುದು ನಿಶ್ಚಿತ. ಕೃಷಿ ಬಗ್ಗೆ ವಾಸ್ತವಾಂಶ ಅರಿಯದ ರಾಜಕಾರಣಿಗಳಿಂದ ನಿರೀಕ್ಷೆ ಅಸಾಧ್ಯ. ಕೃಷಿಯಲ್ಲಿ ವಿದೇಶದ ಅನುಕರಣೆ ಮೂರ್ಖತನದ್ದು. ಸ್ವಂತ ಉಳುಮೆ ಮಾಡಿದ ಜ್ಞಾನ ಇದ್ದವನಿಗೆ ಮಾತ್ರ ರೈತರ ಸಮಸ್ಯೆ ಅರಿವಿರುತ್ತದೆ. ಸ್ಥಳೀಯ ಸಮಸ್ಯೆ ಬಗೆಹರಿಸುವುದು ಸಾಂಪ್ರದಾಯಿಕ ಪಕ್ಷಗಳಿಂದ ಅಸಾಧ್ಯ. ತೃತೀಯ ರಂಗವೇ ಎಲ್ಲ ಸಮಸ್ಯೆಗೆ ಪರಿಹಾರ ಎಂಡು ಬಾಬಾಗೌಡ ಪಾಟೀಲ ಅಭಿಪ್ರಾಯಪಟ್ಟರು. ರೈತ ಸಂಘದ ಬಸವಣ್ಣೆಪ್ಪ ನಲವಾಗಲ, ಅಶೋಕ ಭದ್ರಮ್ಮನವರ, ಎ.ಸಿ. ಗುಡಿಗೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

