ಪರೀಕ್ಷೆ ಅವಕಾಶ ನಿರಾಕರಣೆ
ಹಾವೇರಿ: ಹಾಜರಾತಿ ಕೊರತೆ ಹಾಗೂ ಬೇರೆ ಕಡೆ ಉದ್ಯೋಗದಲ್ಲಿರುವ ಕಾರಣದಿಂದ 22 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸುವ ಮೂಲಕ ಇಲ್ಲಿನ ಸ್ನಾತಕೋತ್ತರ ಕೇಂದ್ರದ ಆಡಳಿತ ಮಂಡಳಿ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.
ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರದಿಂದ ಪರೀಕ್ಷೆಗಳು ಆರಂಭವಾಗಿವೆ. ಹಾಜರಾತಿ ಕೊರತೆ ಕಂಡುಬಂದ 22 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಅಂಥವರ ಪಟ್ಟಿಯನ್ನು ನೋಟಿಸ್ ಬೋರ್ಡಿಗೆ ಅಂಟಿಸಲಾಗಿದ್ದು, ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಕೆಲಕಾಲ ಉಪನ್ಯಾಸಕರ ಜತೆ ವಾದ ಮಾಡಿ, ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸಾಗಿದ್ದಾರೆ.
ಎಚ್ಚರಿಸಿದರೂ ಉದಾಸೀನ: ಈ ಕುರಿತು ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ ಟಿ.ಎಂ. ಭಾಸ್ಕರ್ ಮಾತನಾಡಿ, ನಿಯಮದ ಪ್ರಕಾರ ಶೇ. 75ಕ್ಕಿಂತ ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿರಾಕರಿಸಲಾಗಿದೆ. ಕೆಲ ವಿದ್ಯಾರ್ಥಿಗಳ ಹಾಜರಾತಿ ಶೇ. 0, ಶೇ. 5, ಶೇ. 10ರಷ್ಟು ಇದೆ. ಇಂಥ ವಿದ್ಯಾರ್ಥಿಗಳಿಗೆ ಈ ಹಿಂದೆಯೇ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ ತರಗತಿಗೆ ಹಾಜರಾಗದೆ ಉದಾಸೀನ ತೋರಿದ್ದಾರೆ. ಈಗ ನಾವು ಏನೂ ಮಾಡುವಂತಿಲ್ಲ. ಇದಕ್ಕೆ ಆಯಾ ವಿದ್ಯಾರ್ಥಿಗಳೇ ಹೊಣೆಗಾರರು. ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಿದರೆ ಮುಂದೆ ನಾವು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.
ಶಿಕ್ಷಣ ಸಂಸ್ಥೆ ಇದ್ದವರೂ...: ಕೆಲ ವಿದ್ಯಾರ್ಥಿಗಳ ಹೆಸರಿನಲ್ಲಿ ಸ್ವಂತ ಶಿಕ್ಷಣ ಸಂಸ್ಥೆ ಇದೆ. ಮತ್ತೆ ಕೆಲವರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳ ಉದ್ಯೋಗಿಗಳೂ ಪ್ರವೇಶ ಪಡೆದಿದ್ದಾರೆ. ನಿಯಮದ ಪ್ರಕಾರ ಅಂಥವರು ನೇರವಾಗಿ ಪರೀಕ್ಷೆ ಬರೆಯುವಂತಿಲ್ಲ. ಹಾಜರಾತಿ ಕೊರತೆ ಹಾಗೂ ಉದ್ಯೋಗದ ಕಾರಣದಿಂದ 22 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಇವರಲ್ಲಿ ಪ್ರಥಮ ವರ್ಷದ 15 ಹಾಗೂ ಅಂತಿಮ ವರ್ಷದ 7 ವಿದ್ಯಾರ್ಥಿಗಳು ಸೇರಿದ್ದಾರೆ. ಈ ಕುರಿತು ಮೇಲಧಿಕಾರಿಗಳಿಗೆ ವರದಿ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಾ ಟಿ.ಎಂ. ಭಾಸ್ಕರ್ ತಿಳಿಸಿದರು.
ತಾರತಮ್ಯ ಮಾಡಿದ್ದಾರೆ: ಪರೀಕ್ಷೆ ವಂಚಿತರಾಗಿರುವ ವಿದ್ಯಾರ್ಥಿ ಹೇಮಂತ್ ಅವರನ್ನು ಕೇಳಿದಾಗ, ನನ್ನದು ಶೇ. 29ರಷ್ಟು ಹಾಜರಾತಿ ಇದೆ. ಇಷ್ಟು ಹಾಜರಾತಿ ಇದ್ದವರಿಗೆ ಈ ಹಿಂದೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ನನ್ನ ಹೆಸರಿನಲ್ಲಿ ದೂರಶಿಕ್ಷಣ ಸಂಸ್ಥೆ ನಡೆಯುತ್ತಿದೆ. ಅಲ್ಲಿ ನಾನು ಕೆಲಸ ಮಾಡುತ್ತಿಲ್ಲ. ಉಪನ್ಯಾಸಕರಿಗೆ ಬೇಕಾದ ಅಭ್ಯರ್ಥಿಗಳಿಗೆ ಹಾಜರಾತಿ ಕಡಿಮೆ ಇದ್ದರೂ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಈ ಕುರಿತು ಸೂಕ್ತ ದಾಖಲೆ ಕೇಳಿದರೂ ನೀಡುತ್ತಿಲ್ಲ. ನಮ್ಮ ಮನವಿಗೂ ಸ್ಪಂದಿಸುತ್ತಿಲ್ಲ. ಇಂಥ ತಾರತಮ್ಯ ನೀತಿಯಿಂದ ಉನ್ನತ ಪದವಿ ಪಡೆಯುವ ನಮ್ಮ ಆಸೆಗೆ ತಣ್ಣೀರೆರಚಿದಂತಾಗಿದೆ. ಪರೀಕ್ಷೆಗೆ ತಯಾರಿ ನಡೆಸಿದ್ದು ವ್ಯರ್ಥವಾಗಿದೆ ಎಂದು ತಮ್ಮ ನೋವು ತೋಡಿಕೊಂಡರು.
ಆದರೆ ಆಡಳಿತ ಮಂಡಳಿ ಕೈಗೊಂಡಿರುವ ಗಟ್ಟಿ ನಿರ್ಧಾರಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ತರಗತಿಗೆ ಹೋಗದೇ ನೇರವಾಗಿ ಪರೀಕ್ಷೆ ಬರೆಯಬಹುದು ಎಂಬ ಮನೋಭಾವನೆ ಇನ್ನಾದರೂ ದೂರವಾಗಬಹುದು. ನಿರಂತರವಾಗಿ ತರಗತಿಗೆ ಹಾಜರಾದವರಿಗೂ ಇದರಿಂದ ನ್ಯಾಯ ಸಿಕ್ಕಂತಾಗಿದೆ ಎಂದು ಹೇಳಲಾಗುತ್ತಿದೆ. ಸ್ನಾತಕೋತ್ತರ ಕೇಂದ್ರದ ಆಡಳಿತ ಮಂಡಳಿ ಕೈಗೊಂಡಿರುವ ನಿರ್ಧಾರದಿಂದ ಇನ್ನಾದರೂ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

