ನಕಲಿ ವೈದ್ಯರಿಗೆ ಸರ್ಜರಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಡಿ. 19
ನಕಲಿ ವೈದ್ಯರ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಗುರುವಾರ ತಾಲೂಕಿನ ಹಲವೆಡೆ ತಾಲೂಕು ವೈದ್ಯಾಧಿಕಾರಿಗಳ ತಂಡ ದಾಳಿ ನಡೆಸಿ, ಅನಧಿಕೃತ ಕ್ಲಿನಿಕ್ಗಳನ್ನು ವಶಕ್ಕೆ ತೆಗೆದುಕೊಂಡಿತು.
ಭಾರತೀಯ ವೈದ್ಯಕೀಯ ಪರಿಷತ್, ಆಯುಷ್ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಪೊಲೀಸರ ನೆರವಿನೊಂದಿಗೆ 15 ಖಾಸಗಿ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿ, ಪರಿಶೀಲಿಸಿತು. ಬಾಗಿಲು ಹಾಕಿದ್ದ ಕೆಲ ಕ್ಲಿನಿಕ್ಗಳಿಗೆ ದಾಖಲೆ ಒದಗಿಸುವಂತೆ ಸೂಚಿಸುವ ನೋಟಿಸ್ ಅಂಟಿಸಿದರು. ಮೋಟೆಬೆನ್ನೂರು ಗ್ರಾಮದಲ್ಲಿ ನಕಲಿ ವೈದ್ಯನೊಬ್ಬನನ್ನು ಕ್ಲಿನಿಕ್ನಿಂದ ಹೊರಹಾಕಿ, ಆಸ್ಪತ್ರೆಯನ್ನು ವಶಕ್ಕೆ ತೆಗೆದುಕೊಂಡರು.
ಎಸ್ಸೆಸ್ಸೆಲ್ಸಿ ಡಾಕ್ಟರ್!
ಕೇವಲ ಎಸ್ಸೆಸ್ಸೆಲ್ಸಿ ಓದಿರುವ ವ್ಯಕ್ತಿಯೊಬ್ಬ ರಕ್ತದೊತ್ತಡ, ಮಧುಮೇಹ ಹಾಗೂ ಹೃದ್ರೋಗ ತಜ್ಞ ಎಂದು ಹೇಳಿಕೊಳ್ಳುತ್ತಿದ್ದ. ಪಾರಂಪರಿಕ ವೈದ್ಯನಾಗಿರುವ ಈತ ದಾಖಲೆ ಕೇಳಿದರೆ, ಕೋರ್ಟ್ ಆದೇಶ ತೋರಿಸಿದ. ಆಯುರ್ವೇದ ಓದಿರುವ ವೈದ್ಯರೊಬ್ಬರು ಅಲೋಪತಿ ಚಿಕಿತ್ಸೆ ನೀಡುತ್ತಿರುವುದನ್ನೂ ವೈದ್ಯರ ತಂಡ ಗಮನಿಸಿ, ಸ್ಥಳದಲ್ಲೇ ನೋಟಿಸ್ ಜಾರಿ ಮಾಡಿತು. ಪಟ್ಟಣದ ಚಾವಡಿ ರಸ್ತೆಯಲ್ಲಿ ಆಯುರ್ವೇದ ವೈದ್ಯರೊಬ್ಬರು ರೋಗಿಗೆ ಸಲೈನ್ ಏರಿಸಿದ್ದರು. ಅಲೋಪತಿ ಔಷಧಿ ನೀಡುತ್ತಿರುವ ಬಗ್ಗೆಯೂ ತಂಡಕ್ಕೆ ಸಾಕ್ಷಿ ದೊರೆಯಿತು.
ಹೊಲಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಕೆಲವು ನಕಲಿ ವೈದ್ಯರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿರುವುದು ಗೊತ್ತಾದ ಹಿನ್ನೆಲೆಯಲ್ಲಿ ವಾಹನಗಳನ್ನೂ ಪರಿಶೀಲನೆ ಮಾಡಿದರು. ವಾಯು ಮಾಲಿನ್ಯ, ವೈದ್ಯಕೀಯ ಹಾಗೂ ನೋಂದಣಿ ಪ್ರಮಾಣಪತ್ರ ಸಲ್ಲಿಸದ ಹಲವು ವೈದ್ಯರಿಗೂ ನೋಟಿಸ್ ಜಾರಿ ಮಾಡಲಾಯಿತು. ನಿಗದಿತ ಅವಧಿಯಲ್ಲಿ ಉತ್ತರ ನೀಡದಿದ್ದಲ್ಲಿ ಕ್ರಿಮಿನಲ್ ಹಾಗೂ ವಂಚನೆ ಪ್ರಕರಣ ದಾಖಲಿಸುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ ಬಿ.ಆರ್. ಲಮಾಣಿ ಎಚ್ಚರಿಸಿದರು. ತಪ್ಪಿತಸ್ಥರನ್ನು ಮುಲಾಜಿಲ್ಲದೆ ಜೈಲಿಗೆ ಕಳುಹಿಸುವಂತೆ ಭಾರತೀಯ ವೈದ್ಯಕೀಯ ಪರಿಷತ್ ಅಧ್ಯಕ್ಷ ಡಾ ಪ್ರಕಾಶ ಭಸ್ಮೆ ಆಗ್ರಹಿಸಿದರು.
ನಕಲಿ ವೈದ್ಯರ ವಿರುದ್ಧ ಸಮರ ಸಾರಿರುವ ಆರೋಗ್ಯ ಇಲಾಖೆ ಸರ್ಕಾರದ ನಿರ್ದೇಶನದ ಮೇರೆಗೆ ನಿರಂತರ ದಾಳಿ ನಡೆಸಲಿದೆ. ಪೊಲೀಸರ ನೆರವಿನೊಂದಿಗೆ ದಿನದ 24 ಗಂಟೆಯೂ ಕಾರ್ಯಾಚರಣೆ ಮಾಡುವುದಾಗಿ ವೈದ್ಯ ಡಾ ಶಿವಕುಮಾರ ಸುಣಗಾರ ತಿಳಿಸಿದರು. ಹಿರಿಯ ಆರೋಗ್ಯ ಸಹಾಯಕ ವೈ.ಎಂ. ಹಿರಿಯಕ್ಕನವರ, ಪಿಎಸ್ಐ (ಅಪರಾಧ ವಿಭಾಗ) ಮಹಾಂತೇಶ್, ಎಎಸ್ಐ ಕಡೂರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

