ತಣ್ಣಗಾಗದ ಪೋಸ್ಕೊ ಹವಾ...
ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 20
ರಾಜ್ಯದಿಂದ ಈಗಾಗಲೇ ಹೊರ ಹೋಗಿರುವ ಪೋಸ್ಕೊ ಕಂಪನಿ ಮತ್ತೆ ಗದಗ ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂದು ಇಲ್ಲಿನ ಕೆಲ ರೈತರು ಮುಂಡರಗಿ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈ ವಿಷಯ ತಣ್ಣಗಾಗುವಂತೆ ಕಾಣುತ್ತಿಲ್ಲ.
ಪೋಸ್ಕೊ ಇಲ್ಲಿಂದ ಹೊರ ಹೋಗಿದೆ ಎಂದು ಎಲ್ಲ ರೈತರು, ಹೋರಾಟಗಾರರು, ಸ್ವಾಮೀಜಿಗಳು ನಿಟ್ಟುಸಿರುವ ಬಿಟ್ಟಿರುವ ಬೆನ್ನಲ್ಲಿಯೇ, ಹಳ್ಳಿಗುಡಿ ಗ್ರಾಮದಲ್ಲಿ ಪೋಸ್ಕೊಗೆ ಭೂಮಿ ನೀಡಲಿಕ್ಕೆ ಸಿದ್ಧರಿರುವುದಾಗಿ ತಿಳಿಸಿ, ಕೆಲ ಪ್ರಮುಖ ರೈತರು ಈಚೆಗೆ ಮುಂಡರಗಿಗೆ ಆಗಮಿಸಿ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿಯವರಿಗೆ ಮನವಿ ನೀಡಿದ್ದಾರೆ.
ಈ ಭಾಗದಲ್ಲಿ ಪೋಸ್ಕೊ ಉಕ್ಕು ಕಾರ್ಖಾನೆ ಪ್ರಾರಂಭಿಸಿದರೆ, ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಇಲ್ಲಿ ಕಾರ್ಖಾನೆ ಸ್ಥಾಪನೆಯಾಗುವುದರಿಂದ ನಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯವಿದೆ. ಮುಂದಿನ ಪೀಳಿಗೆಗೆ ಉದ್ಯೋಗ ದೊರೆತು ಅನುಕೂಲವಾಗಲಿದೆ. ಅಲ್ಲದೇ ಅನೇಕರಿಗೆ ಬೇರೆ ಬೇರೆ ಸ್ವಯಂ ಉದ್ಯೋಗ ಮಾಡಲು ಸಹಕಾರಿಯಾಗುತ್ತದೆ. ಆದ್ದರಿಂದ ಶಾಸಕರು ಸಿಎಂ ಸಿದ್ದರಾಮಯ್ಯನವರ ಮನವೊಲಿಸಿ ಇಲ್ಲಿ ಪೋಸ್ಕೊ ಸ್ಥಾಪನೆಗೆ ಮುಂದಾಗಬೇಕೆಂದು ಈ ರೈತರ ಕೋರಿಕೆಯಾಗಿದೆ.
ಸ್ಥಾಪನೆಗೆ ವಿರೋಧಿಸಿದ್ದ ಸಿದ್ದರಾಮಯ್ಯ: ಈ ಹಿಂದೆ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದ ಇಂದಿನ ಸಿಎಂ ಸಿದ್ದರಾಮಯ್ಯ ಅಂದು ಈ ಗ್ರಾಮಕ್ಕೆ ಆಗಮಿಸುವ ಮೂಲಕ ಬಿಜೆಪಿ ಸರ್ಕಾರದ ಬಣ್ಣದ ಮಾತಿಗೆ ಮರುಳಾಗಬೇಡಿ. ಈ ಭೂಮಿಯನ್ನು ಕಳೆದುಕೊಳ್ಳುವುದರಿಂದ ನೀವು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇಲ್ಲಿ ಉಕ್ಕು ಕಾರ್ಖಾನೆಗೆ ಅವಕಾಶ ನೀಡಬೇಡಿ. ಒಂದು ವೇಳೆ ಸರ್ಕಾರ ಇದಕ್ಕೆ ಪರವಾನಗಿ ನೀಡಿದ್ದೇ ಆದಲ್ಲಿ ತಾವು ಉಗ್ರ ಪ್ರತಿಭಟನೆ ನಡೆಸಿ, ರೈತರ ಭೂಮಿಯನ್ನು ಉಳಿಸಿಕೊಡುವುದಾಗಿ ಅಂದು ಹಳ್ಳಿಗುಡಿ ಗ್ರಾಮದಲ್ಲಿ ಭಾಷಣ ಮಾಡಿದ್ದರು.
ಅಂದಿನ ಸಭೆಯಲ್ಲಿ ಇಂದಿನ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಇದ್ದರು. ಇಂದು ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದು, ಪೋಸ್ಕೋ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರು ಯಾವ ನಿರ್ಧಾರ ಕೈಗೊಳ್ಳುತ್ತಾರೆನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಈ ಭಾಗದ ರೈತರು ಮತ್ತೆ ಪೋಸ್ಕೊಗೆ ಭೂಮಿ ಕೊಡಲು ಮುಂದಾಗುತ್ತಿರುವುದು ದುರದೃಷ್ಟಕರ. ಹಳ್ಳಿಗುಡಿ ಭಾಗದಲ್ಲಿರುವ ಭೂಮಿಯಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಬಂಗಾರದಂತಹ ಬೆಳೆ ಬಂದಿದೆ. ಎಲ್ಲರಿಗೂ ಅನ್ನ ನೀಡುವ ಭೂಮಿಯಿಂದ ಲಾಭವಾಗುವುದೇ ಹೊರತು ಇಂತಹ ಕಾರ್ಖಾನೆಗಳಿಂದಲ್ಲ.
ಪೋಸ್ಕೊ ಕಂಪನಿ ಈಗಾಗಲೇ ನಮ್ಮ ರಾಜ್ಯದಿಂದಲೇ ಹೊರಗೆ ಹೋಗಿದೆ. ಇದೀಗ ಮತ್ತೆ ಪೋಸ್ಕೊ ಸ್ಥಾಪಿಸುವಂತೆ ಮಾಡುತ್ತಿರುವ ಮನವಿಗಳು ಕೇವಲ ವ್ಯರ್ಥ ಪ್ರಯತ್ನವಾಗಿದೆ. ಒಂದು ವೇಳೆ ಮತ್ತೆ ಪೋಸ್ಕೋ ಸ್ಥಾಪನೆಗೆ ಸರ್ಕಾರ ಮುಂದಾದಲ್ಲಿ ನಮ್ಮ ಪ್ರತಿಭಟನೆಯಂತೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ಇದೀಗ 536 ರೈತರಲ್ಲಿ 436 ರೈತರು ತಮ್ಮ ಜಮೀನುಗಳನ್ನು ಪೋಸ್ಕೊ ಉಕ್ಕು ಕಾರ್ಖಾನೆಗೆ ನೀಡಲು ಮುಂದಾಗಿದ್ದಾರೆ. ಇಲ್ಲಿ ಮಳೆಗಾಲಕ್ಕಿಂತ ಬರಗಾಲವೇ ಅಧಿಕವಾಗಿರುವುದರಿಂದ ನಮ್ಮ ಜಮೀನುಗಳು ನಮಗೆ ಇದ್ದೂ ಇಲ್ಲದಂತಾಗುತ್ತವೆ. ನಾವು ನೀಡಲಿರುವ ಮೂರು ಸಾವಿರ ಎಕರೆ ಭೂಮಿಯಿಂದ ಇಲ್ಲಿ ಕಾರ್ಖಾನೆ ಸ್ಥಾಪನೆ ಮಾಡುವುದರಿಂದ ಸಾವಿರಾರು ಕೋಟಿ ಆದಾಯ ಬರಲಿದೆ. ಅಲ್ಲದೇ ಬರಗಾಲದ ಹಣೆಪಟ್ಟಿ ಕಟ್ಟಿಕೊಂಡಿರುವ ಮುಂಡರಗಿ ತಾಲೂಕು ಹಾಗೂ ಗದಗ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಪೂರಕವಾಗಲಿದೆ. ನಮ್ಮಲ್ಲಿ ನೂರಾರು ಯುವಕರು ಬೆಂಗಳೂರು ನಗರದಲ್ಲಿ ಕೆಲಸ ಅರಸಿ ಹೋಗುತ್ತಿದ್ದಾರೆ. ಇಲ್ಲಿಯೇ ಕಾರ್ಖಾನೆಯಾದರೆ ಅದನ್ನು ತಪ್ಪಿಸಿ ಅವರೆಲ್ಲರೂ ನಮ್ಮ ಗ್ರಾಮದಲ್ಲಿಯೇ ಕೆಲಸ ಮಾಡಬಹುದು. ಇದೀಗ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಈ ಯೋಜನೆ ಸ್ಥಾಪನೆಗೆ ಹೆಚ್ಚು ಪೂರಕವಾಗಲಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಬೇಕು. ಅದಕ್ಕಾಗಿ ಈ ಕುರಿತು ಮುಂಡರಗಿ ಶಾಸಕರಿಗೆ ಮನವಿ ಮಾಡಲಾಗಿದೆ.
ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

