ಹಾವೇರಿ

ಇಂದು ಪ್ರತಿಮೆ ಅನಾವರಣ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಡಿ. 22
ವೀರಶೈವ ಮಹಾಸಭೆ ಸ್ಥಾಪಿಸಿ, ಮಠಗಳ ಮೌಲ್ಯ ಸಾಮಾಜಿಕ ಕಳಕಳಿಯನ್ನು ಆಚರಣೆಗೆ ತಂದ ಮೂರು ಶತಮಾನಗಳ ಇತಿಹಾಸವುಳ್ಳ ಹಾನಗಲ್ಲ ಕುಮಾರೇಶ್ವರ ವಿರಕ್ತಮಠ ಧರ್ಮ, ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಪ್ರೋತ್ಸಾಹಿಸುತ್ತ ಸಮಾಜಮುಖಿಯಾಗಿದ್ದು, ಜಗಜ್ಯೋತಿ ಬಸವೇಶ್ವರ ಹಾಗೂ ವೀರಮಹಿಳೆ ಕಿತ್ತೂರು ಚನ್ನಮ್ಮ ಅವರ 12.5 ಅಡಿ ಎತ್ತರದ ಎರಡು ಕಂಚಿನ ಪುತ್ಥಳಿಗಳನ್ನು ಸ್ಥಾಪಿಸಿ, ಸಾಂಸ್ಕೃತಿಕ ವಾತಾವರಣ ಇಮ್ಮಡಿಗೊಳಿಸಿ ಮೆಚ್ಚುಗೆಗೆ ಪಾತ್ರವಾಗಿದೆ.
ಪಟ್ಟಣದ ಕುಮಾರೇಶ್ವರ ವಿರಕ್ತಮಠ ಪುತ್ಥಳಿಗಳ ಅನಾವರಣಕ್ಕೆ ಸಿದ್ಧಗೊಂಡಿದೆ. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾನಗಲ್ಲ ಮಠಕ್ಕೆ ಪಟ್ಟಾಧಿಕಾರಿಗಳಾದ ಬಳಿಕ ಧರ್ಮ, ಸಂಸ್ಕೃತಿಯ ಜತೆಗೆ ಶೈಕ್ಷಣಿಕ ಕಾಳಜಿಗಾಗಿ ಶಿಶುವಿಹಾರದಿಂದ ಬಿಇಡಿವರೆಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಈ ಎಲ್ಲ ಅಭಿವೃದ್ಧಿಗಳಿಗೆ ಮುಂಚೂಣಿಯಲ್ಲಿ ಶ್ರಮಿಸಿದವರು ಮಾಜಿ ಸಚಿವ ಸಿ.ಎಂ. ಉದಾಸಿ. ಕುಮಾರೇಶ್ವರ ಬಿಇಡಿ ಕಾಲೇಜು ರಾಜ್ಯದಲ್ಲೇ ಅತ್ಯುನ್ನತ ವಿದ್ಯಾಲಯವಾಗಿ ಸುಸಜ್ಜಿತ ಕಟ್ಟಡ, ಪಾಠೋಪಕರಣ, ಸೌಲಭ್ಯ ಹೊಂದಿ ಮೆಚ್ಚುಗೆಗೆ ಪಾತ್ರವಾಗಿದೆ.
ಬಯಲು ರಂಗಮಂದಿರ
ಪ್ರತಿ ವರ್ಷ ಮಠದಿಂದ ನಡೆಯುವ ಲಿಂ. ಕುಮಾರ ಶಿವಯೋಗಿಗಳ ಸ್ಮರಣೋತ್ಸವದಲ್ಲಿ ತಾಲೂಕಿನ ನಿವೃತ್ತ ಶಿಕ್ಷಕರನ್ನು ಗೌರವಿಸುವ ಸತ್ಸಂಪ್ರದಾಯಕ್ಕೆ ಶ್ರೀಕಾರ ಹಾಕಿದರು. ದತ್ತಿ ನಿಧಿಗಳನ್ನು ಸ್ಥಾಪಿಸಿ ಸಾಹಿತಿ, ಕಲಾವಿದರನ್ನು ಗೌರವಿಸುವ ಕಾರ್ಯಕ್ಕೆ ಶ್ರೀಗಳು ಮುಂದಾಗಿದ್ದಾರೆ. ಶ್ರೀಮಠದ ಆವರಣದಲ್ಲಿ ಗ್ರೀಕ್ ಮಾದರಿಯ ಸುಸಜ್ಜಿತ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಅದೀಗ ಸಾಂಸ್ಕೃತಿಕ ಕೇಂದ್ರವೇ ಆಗಿದೆ.
ಶಿವಯೋಗ ಮಂದಿರ ಶತಮಾನೋತ್ಸವವನ್ನು ನಭೂತೋ ಎಂಬಂತೆ ಬಾಲೇಹೊಸೂರಿನ ಪ್ರವಚನ ಪ್ರಭಾಕರ ದಿಂಗಾಲೇಶ್ವರ ಸ್ವಾಮೀಜಿಗಳಿಂದ ಒಂದು ತಿಂಗಳ ಕಾಲ ಜೀವನ ದರ್ಶನ ಪ್ರವಚನ ನಡೆಸಿ, ಧಾರ್ಮಿಕ ಕ್ರಾಂತಿ ಮಾಡಿದ ನೆನಪು ಹಚ್ಚಹಸಿರಾಗಿದೆ. ನಾಡಿನ ಹರಗುರು ಚರಮೂರ್ತಿಗಳು, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಹಾನಗಲ್ಲ ಮಠಕ್ಕೆ ಯಾತ್ರಿ ನಿವಾಸ ಹಾಗೂ ಸುಸಜ್ಜಿತ ಭವನ ನಿರ್ಮಿಸಿಕೊಟ್ಟಿದ್ದು ವಿಶೇಷ. ಹಾನಗಲ್ಲ ವಿರಕ್ತಮಠ ಅನ್ನ-ಜ್ಞಾನ ದಾಸೋಹದ ಜತೆಗೆ ಧರ್ಮ-ಸಂಸ್ಕೃತಿಯ ಜಾಗೃತಿಯನ್ನೂ ಮಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.