ಹಾವೇರಿ

ಜೈಲ್ ಭರೋ, ವಿಧಾನಸೌಧ ಚಲೋ

Published On :

ಹಾವೇರಿ: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಮಿಷನ್ ಮೋಡ್ ಹೆಸರಿನಲ್ಲಿ ಖಾಸಗೀಕರಣ ಮಾಡುವುದನ್ನು ವಿರೋಧಿಸಿ, ಅಂಗನವಾಡಿ ನೌಕರರ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಜ. 10ರಂದು ಜೈಲ್ ಭರೋ ಹಾಗೂ ಫೆ. 10ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ, ದುರ್ಬಲ ವರ್ಗದ, ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ಕುಟುಂಬಗಳಿಗೆ ಆಶಾ ಕಿರಣವಾಗಿದ್ದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಕಾಯಂ ಮಾಡುವ ಬದಲಿಗೆ ಖಾಸಗೀಕರಣಗೊಳಿಸಿ ಅವರ ಉದ್ಯೋಗ ಭದ್ರತೆಗೆ ಕೊಡಲಿಯೋಟು ನೀಡಲು ಸರ್ಕಾರ ಮುಂದಾಗಿದೆ. ಆದ್ದರಿಂದ ಎರಡು ಹಂತದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರನ್ನು ಸಿ ಹಾಗೂ ಡಿ ದರ್ಜೆ ನೌಕರರೆಂದು ಪರಿಗಣಿಸಬೇಕು. ಕಾರ್ಯಕರ್ತೆಯರಿಗೆ ಕನಿಷ್ಠ ರು. 15 ಸಾವಿರ, ಸಹಾಯಕಿಯರಿಗೆ ರು. 10 ಸಾವಿರ ಮಾಸಿಕ ವೇತನ, ಪಿಂಚಣಿ ವೇತನವನ್ನು ಹೆಚ್ಚಳ ಮಾಡಬೇಕು. ಸೇವಾ ಹಿರಿತನದ ಆಧಾರದಲ್ಲಿ ಭತ್ಯೆ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಕಾರ್ಮಿಕರ ವಿಮಾ ಯೋಜನೆ, ಪಿಎಫ್ ಜಾರಿಗೊಳಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ನಿವೃತ್ತಿ ಹೊಂದಿದ ಬಳಿಕ ಕಾರ್ಯಕರ್ತೆಯರಿಗೆ ರು. 3 ಲಕ್ಷ,  ಸಹಾಯಕಿಯರಿಗೆ ರು. 2 ಲಕ್ಷ ನೀಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖೇತರ ಕೆಲಸಗಳಾದ ಸ್ತ್ರೀಶಕ್ತಿ, ಭಾಗ್ಯಲಕ್ಷ್ಮೀ, ಎಲ್ಲ ರೀತಿಯ ಸಮೀಕ್ಷಾ ಕಾರ್ಯ, ತರಬೇತಿ, ಚುನಾವಣಾ ಸಂಬಂಧಿತ ಕೆಲಸಗಳು ಸೇರಿದಂತೆ 32 ದಾಖಲೆಗಳನ್ನು ನಿರ್ವಹಣೆ ಮಾಡಿಸಲಾಗುತ್ತಿದೆ. ಅನ್ಯ ಕಾರ್ಯಗಳ ನಿರ್ವಹಣೆಯಿಂದ ಇಲಾಖೆ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಧಕ್ಕೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ಕಾರ್ಯಕರ್ತೆಯರಿಗೆ ಇಲಾಖಾ ಕಾರ್ಯಗಳನ್ನು ಹೊರತು ಪಡಿಸಿ ಬೇರೆ ಕಾರ್ಯಗಳನ್ನು ನೀಡಬಾರದು ಎಂದು ಒತ್ತಾಯಿಸಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಜ. 10ರಂದು ಮಧ್ಯಾಹ್ನ 12 ಗಂಟೆಗೆ ನಗರದ ಮುರುಘಾಮಠದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಂಚಾರ ತಡೆ, ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಜೈಲ್ ಭರೋ ನಡೆಸಲಾಗುವುದು ಎಂದರು.
ಎಐಟಿಯುಸಿ ಪದಾಧಿಕಾರಿಗಳಾದ ಹೇಮಾವತಿ ಆಸಾಧಿ, ನೀಲಮ್ಮ ವಾಲಿ, ಸುನಿತಾ ಮರ್ಕಳ್ಳಿ, ಪಾರ್ವತೆಮ್ಮ ಹಾದ್ರಿಹಳ್ಳಿ, ವಾಣಿಶ್ರೀ ಜೀವಣ್ಣನವರ, ಎಸ್.ಎ. ಪನ್ನೋಶಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.