ಬೆಲೆಯೇರಿಕೆ ಬಿಸಿಯೂಟ
ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 27
ಶಾಲಾ ದಾಖಲಾತಿ ಪ್ರಮಾಣ ಹೆಚ್ಚಿಸಲು, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಆರೋಗ್ಯ ಸುಧಾರಿಸಲು ಶಾಲೆಗಳಲ್ಲಿ ಆರಂಭಿಸಿರುವ ಮಧ್ಯಾಹ್ನದ ಬಿಸಿಯೂಟ ಬೆಲೆ ಏರಿಕೆಯಿಂದಾಗಿ ಸಪ್ಪಗಾಗುತ್ತಿದೆ. ಪ್ರತಿ ಮಗುವಿಗೆ ನಿಗದಿಪಡಿಸಿದ ಹಣದಲ್ಲಿ ರುಚಿಕರ ಊಟ ಸಿದ್ಧಪಡಿಸಲು ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ಸರ್ಕಾರಿ, ಅನುದಾನಿತ, ಮದರಸಾ ಸೇರಿದಂತೆ ರಾಜ್ಯದ 55113 ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಚಾಲ್ತಿಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ ರು. 61,40,000 ಮಕ್ಕಳು ಈ ಯೋಜನೆ ವ್ಯಾಪ್ತಿಗೆ ಸೇರಿದ್ದಾರೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ. 80 ಹಾಗೂ ರಾಜ್ಯ ಶೇ. 20 ಅನುದಾನ ನೀಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ತರಕಾರಿ, ಸಾಂಬಾರ ಪದಾರ್ಥಗಳ ಬೆಲೆ ಹೆಚ್ಚಿರುವುದರಿಂದ ಪ್ರತಿ ಮಗುವಿಗೆ ನೀಡುವ ಹಣ ಯಾತಕ್ಕೂ ಸಾಲುತ್ತಿಲ್ಲ. ಇದರಿಂದ ಮಗುವಿನ ವಯಸ್ಸಿಗೆ ಅನುಗುಣವಾಗಿ ನಿಗದಿಪಡಿಸಿದ ಪ್ರಮಾಣದ ಕ್ಯಾಲೋರಿ ಬಿಸಿಯೂಟದಲ್ಲಿ ಸಿಗುತ್ತಿಲ್ಲ. ಇದರಿಂದ ಬಿಸಿಯೂಟ ರುಚಿಗೆಟ್ಟಿದ್ದು, ಗ್ರಾಮೀಣ ಪ್ರದೇಶಗಳ ಬಡ ಮಕ್ಕಳು ಅನಿವಾರ್ಯವಾಗಿ ಬಿಸಿಯೂಟ ಮಾಡಿದರೆ, ನಗರ ಪ್ರದೇಶದ ಶಾಲೆಗಳ ಬಹುತೇಕ ಮಕ್ಕಳು ಮನೆಗೆ ಹೋಗುತ್ತಿದ್ದಾರೆ.
ಗೋದಿ ಬೀಸಲು ಹಣವಿಲ್ಲ
ಸದ್ಯ ಅಕ್ಷರ ದಾಸೋಹಕ್ಕೆ ಎಲ್ಲ ಶಾಲೆಗಳಿಗೆ ಗೋದಿ ನೀಡಲಾಗಿದೆ. ಗೋದಿಯನ್ನು ನುಚ್ಚು ಮಾಡಿ ಅದರಿಂದ ಉಪ್ಪಿಟ್ಟು ತಯಾರಿಸಿ ಮಕ್ಕಳಿಗೆ ನೀಡಬೇಕು. ಆದರೆ, ಪ್ರತಿ ಕೆಜಿ ಗೋದಿ ಬೀಸಲು ರು. 4-5 ಗಿರಣಿಗೆ ನೀಡಬೇಕು. ಆದರೆ ಇದಕ್ಕಾಗಿ ಪ್ರತ್ಯೇಕವಾಗಿ ಹಣ ನೀಡಲಾಗುತ್ತಿಲ್ಲ. ಇದರಿಂದ ಶಿಕ್ಷಕರೆ ಜೇಬಿನಿಂದ ಖರ್ಚು ಮಾಡಿ ಗೋದಿ ನುಚ್ಚು ಮಾಡಿಸುತ್ತಿದ್ದಾರೆ. ಹೀಗೆ ಪ್ರತಿ ತಿಂಗಳು ಶಾಲಾ ಸಿಬ್ಬಂದಿ ಸಾವಿರಾರು ರು. ಖರ್ಚು ಮಾಡುವಂತಾಗಿದೆ. ಅಲ್ಲದೆ ಗಿರಣಿ ಇದ್ದಲ್ಲಿಗೆ ಗೋದಿ ಚೀಲ ಹೊತ್ತುಕೊಂಡು ಹೋಗಿ ನುಚ್ಚು ಮಾಡಿಸಿಕೊಂಡು ಹೋಗುವ ಹೊರೆಯೂ ಶಿಕ್ಷಕರ ಮೇಲೆ ಬಿದ್ದಿದೆ. ಗಿರಿಣಿ ಇಲ್ಲದ ಕಡೆ ಇನ್ನೂ ಕಷ್ಟಪಡುವಂತಾಗಿದೆ.
ನೀಡುತ್ತಿರುವ ಹಣ
ಸರ್ಕಾರ ಪ್ರಮಾಣೀಕರಿಸಿದ ಪ್ರಕಾರ 1-5ನೇ ತರಗತಿ ವರೆಗಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ 491 ಕ್ಯಾಲೋರಿ ನೀಡಬೇಕು. 6ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ 728 ಕ್ಯಾಲೋರಿ ಪ್ರಮಾಣದ ಆಹಾರ ನೀಡಬೇಕು. ಸದ್ಯ 1-5ನೇ ತರಗತಿ ಮಕ್ಕಳಿಗೆ ಬಿಸಿಯೂಟಕ್ಕಾಗಿ ರು. 3.34 ನೀಡಲಾಗುತ್ತಿದೆ. ಇದರಲ್ಲಿ ಅಡುಗೆ ಸಿಲಿಂಡರ್ ಹಾಗೂ ಸಾಗಣೆ ವೆಚ್ಚವೂ ಸೇರಿದೆ. ಬೇಳೆ ಕಾಳಿಗೆ ರು. 1.22, ತರಕಾರಿಗೆ 92 ಪೈಸೆ, ಅಡುಗೆ ಎಣ್ಣೆಗೆ 32 ಪೈಸೆ, ಉಪ್ಪು 2 ಪೈಸೆ ಹಾಗೂ ಖಾರದಪುಡಿ, ಸಾಂಬಾರ ಪದಾರ್ಥಕ್ಕಾಗಿ 16 ಪೈಸೆ ನೀಡಲಾಗುತ್ತಿದೆ. ಇನ್ನು 6-8ನೇ ತರಗತಿ ಮಕ್ಕಳಿಗೆ ತಲಾ ರು. 5 ಹಾಗೂ 9-10ನೇ ತರಗತಿ ವರೆಗಿನ ಮಕ್ಕಳಿಗೆ ತಲಾ 6.62 ನೀಡಲಾಗುತ್ತಿದೆ.
ಮಾಡುವುದು, ತಿನ್ನುವುದು ಕಷ್ಟ
ಮಧ್ಯಾಹ್ನದ ಬಿಸಿಯೂಟಕ್ಕೆ ಸರ್ಕಾರ ನೀಡುತ್ತಿರುವ ಹಣದಲ್ಲಿ ನಿಗದಿಪಡಿಸಿದ ಪ್ರಮಾಣದ ಕ್ಯಾಲೋರಿ ಇರುವ ಆಹಾರ ನೀಡುವುದು ಸಾಧ್ಯವಾಗುತ್ತಿಲ್ಲ. 1-5ನೇ ತರಗತಿ ವರೆಗಿನ ಮಕ್ಕಳಿಗೆ ನಿತ್ಯ 600ಗ್ರಾಂ ಹಾಗೂ 6-10ನೇ ತರಗತಿ ಮಕ್ಕಳಿಗೆ ತಲಾ 650 ಗ್ರಾಂ ಆಹಾರ ನೀಡಬೇಕು ಎಂಬ ನಿಯಮವಿದೆ. ಆದರೆ ಮಾರುಕಟ್ಟೆಯಲ್ಲಿ ತರಕಾರಿ, ಬೇಳೆಕಾಳು, ಸಾಂಬಾರ ಪದಾರ್ಥಗಳ ಬೆಲೆ ಏರಿದೆ. ಲಭ್ಯವಾಗುವ ಹಣದಲ್ಲಿ ಅಡುಗೆ ಮಾಡಿದರೆ ಅದನ್ನು ತಿನ್ನಲು ಸಾಧ್ಯವಾಗದೇ ಮಕ್ಕಳು ಅರ್ಧ ಊಟವನ್ನು ಚೆಲ್ಲುತ್ತಿದ್ದಾರೆ. 1-5ನೇ ತರಗತಿವರೆಗಿನ 100 ಮಕ್ಕಳಿರುವ ಶಾಲೆಯಲ್ಲಿ ಸಿಲಿಂಡರ್, ಸಾಗಣೆ ವೆಚ್ಚ ಬಿಟ್ಟು ಕೇವಲ ರು. 255ಗಳಲ್ಲಿ ಅಡುಗೆ ಸಿದ್ಧಪಡಿಸಬೇಕು. ತರಕಾರಿ, ಬೇಳೆ ಇಲ್ಲದೇ ಕೇವಲ ಖಾರದಪುಡಿ ಹಾಕಿ ಸಾಂಬಾರ ಸಿದ್ಧಪಡಿಸಲಾಗುತ್ತಿದೆ. ಮಕ್ಕಳು ಊಟ ಮಾಡಲು ಬೇಸರ ಮಾಡುತ್ತಾರೆ. ಆದರೆ ನಾವೇನೂ ಮಾಡಲಾಗುತ್ತಿಲ್ಲ ಎನ್ನುತ್ತಾರೆ ಶಿಕ್ಷಕರು. ಅತ್ಯಲ್ಪ ಹಣದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ಅಸಾಧ್ಯ ಎಂಬುದು ಶಿಕ್ಷಕರ ಅಭಿಪ್ರಾಯ. ಸರ್ಕಾರ ಹೆಚ್ಚಿನ ಅನುದಾನ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೋರಬೇಕಿದೆ.
ಪ್ರತಿ ವರ್ಷ ಶೇ. 7.5ರಷ್ಟು ಅನುದಾನವನ್ನು ಹೆಚ್ಚಿಸಲಾಗುತ್ತಿದೆ. ಸದ್ಯ ಗೋದಿ ಬೀಸಲು ಹಣದ ಕೊರತೆ ಎದುರಾಗಿದೆ. ಲಭ್ಯವಿರುವ ಅನುದಾನದಲ್ಲೇ ಖರ್ಚು ಮಾಡಲು ಸೂಚಿಸಲಾಗಿದೆ. ಎಷ್ಟು ಖರ್ಚು ಬರುತ್ತದೆ ಎಂಬುದನ್ನು ಪರಿಶೀಲಿಸಲಾಗುತ್ತಿದ್ದು, ಗೋದಿ ಬೀಸಲು ಹಣ ನೀಡಲು ಕ್ರಮ ಕೈಗೊಳ್ಳಲಾಗುವುದು.
- ರಾಜೇಂದ್ರ ಬಿ.ಎಂ., ಅಕ್ಷರ ದಾಸೋಹ ಅಧಿಕಾರಿ
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

