ಹಾವೇರಿ

ಬಿಜೆಪಿಗೆ ಸಿದ್ಧ ವಾತಾವರಣ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಡಿ. 29
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಅಧಿಕಾರ ನಡೆಸುವಲ್ಲಿ ವಿಫಲವಾಗಿದೆ. ಬಿಜೆಪಿ ಕಾರ್ಯಕರ್ತರಿಗೆ ರಾಜ್ಯದಲ್ಲಿ  ರೆಡಿಮೇಡ್ ವಾತಾವರಣವಿದೆ. ಈ ಪರಿಸ್ಥಿತಿ ಲಾಭ ಪಡೆದು ಮೋದಿ ಪ್ರಧಾನಿಯನ್ನಾಗಿಸಲು ಎಲ್ಲರೂ ಕೊಡುಗೆ ನೀಡಬೇಕು ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಸುರೇಶಕುಮಾರ್ ಕರೆ ನೀಡಿದರು.
ನಗರದ ಗುರುಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಹಾವೇರಿ ಲೋಕಸಭಾ ಕ್ಷೇತ್ರದ ಶಕ್ತಿಗಳ ಕೇಂದ್ರಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬರಲಿರುವ ಲೋಕಸಭೆ ಚುನಾವಣೆ ದೇಶದ ಭವಿಷ್ಯವನ್ನು ರೂಪಿಸುವಲ್ಲಿ, ಪ್ರಬಲ ದೇಶವನ್ನು ಕಟ್ಟುವಲ್ಲಿ ಪ್ರಮುಖವಾಗಿದೆ. ನಮ್ಮಲ್ಲಿರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ವಿಫಲ
ಕೇವಲ 6 ತಿಂಗಳ ಅವಧಿಯಲ್ಲೇ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಿಎಂ ಸಿದ್ದರಾಮಯ್ಯ ಯೋಚಿಸುವ ಮೊದಲೇ ಯೋಜನೆಗಳನ್ನು ಘೋಷಣೆ ಮಾಡಿ ವಾಪಸ್ ಪಡೆಯುವ ಮೂಲಕ ನಗೆಪಾಟಲಿಗೆ ಒಳಗಾಗುತ್ತಿದ್ದಾರೆ. ಯೋಜನೆ ಘೋಷಿಸಿ, ಅದನ್ನು ವಾಪಸ್ ಪಡೆಯುವ ಅವರ ಕಾರ್ಯವೈಖರಿಯಿಂದ ಜನತೆ ಬೇಸತ್ತಿದ್ದು, ಸರ್ಕಾರದಲ್ಲಿ ಪರಸ್ಪರ ಸಮನ್ವಯ, ಸಂಘಟಿತ ಪ್ರಯತ್ನ ಕಂಡು ಬರುತ್ತಿಲ್ಲ. ಸಿದ್ದರಾಮಯ್ಯ ಏಕಾಭಿನಯ ಪಾತ್ರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದೇಶ 10 ವರ್ಷಗಳ ಕಾಲ ಸಮರ್ಥ ನಾಯಕತ್ವದ ಕೊರತೆಯಿಂದ ಹಲವಾರು ಜ್ವಲಂತ ಸಮಸ್ಯೆಗಳಲ್ಲಿ ಸಿಲುಕಿ ಒದ್ದಾಡುತ್ತಿದೆ. ಪ್ರಸ್ತುತ ಅಟಲ್ ಬಿಹಾರಿ ವಾಜಪೇಯಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂಥ ನಾಯಕರು ಅವಶ್ಯವಿದ್ದು, ಈ ಇಬ್ಬರ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಪಕ್ಷಭೇದ ಮರೆತು ಎಲ್ಲರೂ ಮುಂದಾಗುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ದೇಶದ ಭವಿಷ್ಯಕ್ಕಾಗಿ ಮೈಕೊಡವಿಕೊಂಡು ಮುಂದಿನ ತಿಂಗಳು ಪ್ರತಿ ಮನೆ-ಮನೆಗೆ ತೆರಳಿ ಯುಪಿಎ ಸರ್ಕಾರದ ವೈಫಲ್ಯ, ಬಿಜೆಪಿ ಸರ್ಕಾರದ ಸಾಧನೆ, ನರೇಂದ್ರ ಮೋದಿ ಅವರ ವ್ಯಕ್ತಿತ್ವವನ್ನು ತಲುಪಿಸಿ ಚುನಾವಣೆಗಾಗಿ ನಿಧಿ, ವಲ್ಲಭಭಾಯಿ ಪಟೇಲ್ ಸ್ಮಾರಕ ನಿರ್ಮಾಣಕ್ಕಾಗಿ ಲೋಹ ಸಂಗ್ರಹಣೆ ಮಾಡಬೇಕು ಎಂದರು.
ಸರ್ದಾರ್ ಪ್ರತಿಮೆಗೆ ಸಹಕರಿಸಿ
ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಅಖಂಡ ಭಾರತ ನಿರ್ಮಾಣದಲ್ಲಿ ದಿಟ್ಟ ಹೆಜ್ಜೆ ಇರಿಸಿದ ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿ ಗಳಿಸಿದ ಸರ್ದಾರ್ ವಲಭಭಾಯಿ ಪಟೇಲರ ಏಕತಾ ಪ್ರತಿಮೆಯನ್ನು ಜನತೆಯ ಸಹಭಾಗಿತ್ವದಲ್ಲಿ ನರ್ಮದಾ ನದಿ ತೀರದಲ್ಲಿ ನಿರ್ಮಿಸುವ ಯೋಜನೆ ಕಾರ್ಯಗತವಾಗುತ್ತಿದೆ. ವಿಶ್ವದಲ್ಲೇ ಅತಿ ಎತ್ತರವಾದ ಈ ಪ್ರತಿಮೆಯ ನಿರ್ಮಾಣಕ್ಕೆ ದೇಶದ ಪ್ರತಿ ರೈತನೂ ತಾನು ಉಪಯೋಗಿಸಿದ ಕಬ್ಬಿಣವನ್ನು ಕೊಡುವ ಮೂಲಕ ಸಹಕರಿಸಬೇಕು. ಜಿಲ್ಲೆಯ ಪ್ರತಿ ಗ್ರಾಮದಿಂದ ಮಣ್ಣು ಹಾಗೂ ಕಬ್ಬಿಣವನ್ನು ಸಂಗ್ರಹಿಸಿ ಎಲ್ಲ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ಕಳುಹಿಸಬೇಕು. ಅದನ್ನು ನೇರವಾಗಿ ಗುಜರಾತ್‌ಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ನಾಗರಾಜ, ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ಶ್ರೀಶೈಲ ಬಿದನೂರ, ಮೋಹನ ಲಿಂಬಿಕಾಯಿ, ಡಾ೤ ಆರ್.ಎಂ. ಕುಬೇರಪ್ಪ, ಮಲ್ಲೇಶಪ್ಪ ಹರಿಜನ, ಮಂಜುಳಾ ಕರಬಸಮ್ಮನವರ, ಬಸವರಾಜ ಅರಬಗೊಂಡ, ಮಂಜುನಾಥ ಓಲೇಕಾರ, ಪಾಲಾಕ್ಷಗೌಡ ಪಾಟೀಲ, ಪ್ರಭು ಹಿಟ್ನಳ್ಳಿ, ನಾಗೇಂದ್ರ ಕಡಕೋಳ, ನಿಂಗಪ್ಪ ಚಳಗೇರಿ ಇದ್ದರು. ಸಿದ್ದರಾಜ ಕಲಕೋಟಿ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.