ಹಾವೇರಿ

ಇಂದು ಸರ್ಕಾರದ ವಿರುದ್ಧ ಧರಣಿ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ. 3
ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸದೇ, ತಾವೇ ಘೋಷಿಸಿದ ಯೋಜನೆಗಳನ್ನೂ ಜನತೆಗೆ ತಲುಪಿಸದೇ ಪೊಳ್ಳು ಆಶ್ವಾಸನೆಗಳ ಮೂಲಕ ಮೋಸದ ಅಧಿಕಾರಕ್ಕೆ ಅಂಟಿಕೊಂಡಿರುವ ಬಿಜೆಪಿ ಸರ್ಕಾರದ ವಿರುದ್ಧ ಫೆ. 4ರಿಂದ 11ರ ವರೆಗೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಹರ ತಹಸೀಲ್ದಾರ್ ತಿಳಿಸಿದರು.
ಭಾನುವಾರ ಸಂಜೆ ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ಲ ಮಿನಿವಿಧಾನ ಸೌಧದ ಎದುರು ಧರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ. ಸರ್ಕಾರ ಬಡವರಿಗಾಗಿ ಯೋಜಿಸಿರುವ ಯೋಜನೆಗಳು ಕೇವಲ ಪ್ರಚಾರವಾಗಿ ಕೆಲವೇ ದಿನಗಳಲ್ಲಿ ನಿಂತು ಹೋಗಿವೆ. ರೈತರಿಗೆ ಬೆಳೆವಿಮೆ ಕೊಡಿಸುವುದಾಗಿ ಹೇಳಿದ್ದ ನಾಯಕರು ಹಾಗೂ ಸರ್ಕಾರ ಈಗ ಕಣ್ಮುಚ್ಚಿ ಕುಳಿತಿದೆ. 2 ವರ್ಷಗಳಿಂದ ಬೆಳೆ ಇಲ್ಲದೇ ರೈತ ಕಂಗಾಲಾಗಿದ್ದರೂ ರೈತನಿಗೆ ಬೆಳೆ ವಿಮೆ ನೀಡಿಲ್ಲ. ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯನ್ನೂ ಸರಿಯಾಗಿ ಬಡವರಿಗೆ ತಲುಪಿಸಲಾಗದ ರಾಜ್ಯ ಸರ್ಕಾರರಿಂದ ಜನತೆಯ ಹಿತ ಕಾಯಲು ಸಾಧ್ಯವಿಲ್ಲ ಎಂದು ದೂರಿದರು.
ತಿಂಗಳೊಳಗಾಗಿ ವ್ಯವಸ್ಥೆ ಸರಿಪಡಿಸುವಂತೆ ಎಚ್ಚರಿಸಲಾಗಿತ್ತು. ಆದಾಗ್ಯೂ ತಾಲೂಕಾಡಳಿತ ಕಣ್ಮುಚ್ಚಿ ಕುಳಿತಿದೆ. ಅದಕ್ಕಾಗಿ ಈಗ 7 ದಿನಗಳ ಉಪವಾಸ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸತ್ಯಾಗ್ರಹ ಸಪ್ತಾಹದಲ್ಲಿ ಜಿಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆ.ಬಿ. ಕೋಳಿವಾಡ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಶಾಸಕ ಬಿ.ಸಿ. ಪಾಟೀಲ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಗಡ್ಡದೇವರಮಠ, ಸಿ.ಎಸ್. ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಸೇರಿದಂತೆ ಹಲವರು ಪಾಲ್ಗೊಳ್ಳುವರು.
ಫೆ.11ರಂದು ಮಧ್ಯಾಹ್ನ ಜರಗುವ ಸಮಾರೋಪ ಸತ್ಯಾಗ್ರಹದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ ಭಾಗವಹಿಸುವರು. ಅದೇ ದಿನ ಹಾನಗಲ್ಲಿನಿಂದ ಹಾವೇರಿ ಜಿಲ್ಲಾಧಿಕಾರಿ ಕಚೇರಿವರೆಗೆ 500 ಬೈಕ್‌ಗಳ ರ್ಯಾಲಿ ನಡೆಯಲಿದೆ. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವರು ಎಂದರು. ಇದಕ್ಕೆ ಮಣಿಯದಿದ್ದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ರಾಜಶೇಖರ ಸಾಲಿಮಠ, ಮುಖಂಡರಾದ ಉಜ್ಜನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಕೆ.ಎಲ್. ದೇಶಪಾಂಡೆ, ವೀರೇಶ ಬೈಲವಾಳ, ಆರ್.ಎಸ್. ಪಾಟೀಲ, ಸುರೇಶ ದೊಡ್ಡಕುರುಬರ, ಎಂ.ಎಂ. ಸರಖಾಜಿ, ಎಂ.ಆರ್. ಗುತ್ತಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.