ಹಾವೇರಿ

ಅಧ್ಯಕ್ಷ, ಪೌರಾಯುಕ್ತ ತರಾಟೆ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಫೆ.4
ನಗರದ ಜನತೆಗೆ ಅಗತ್ಯಗಿರುವ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ನಗರಸಭೆ ಸಿಬ್ಬಂದಿ ಸಂಪೂರ್ಣ ವಿಫಲಗೊಂಡಿದೆ ಎಂದು ನಗರಸಭೆ ಆಡಳಿತ ಪಕ್ಷದ ಸದಸ್ಯರು, ವಿರೋಧ ಪಕ್ಷದ ಸದಸ್ಯರೊಂದಿಗೆ ಕೈಜೋಡಿಸಿ, ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರನ್ನು ನಗರಸಭೆ ಸಭಾಭವನದಲ್ಲಿ ಸೋಮವಾರ ಜರುಗಿದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.
ತರಾಟೆ: ನಗರಸಭೆ ವಿರೋಧ ಪಕ್ಷದ ಸದಸ್ಯ ಶಿವಣ್ಣ ಮಣೇಗಾರ ಮಾತನಾಡಿ, ಹಲಗೇರಿ ರಸ್ತೆಯ ಮುಕ್ತಿಧಾಮದಲ್ಲಿನ ಸಮಸ್ಯೆ, ದಾನಿಗಳಿದ್ದಾಗ್ಯೂ ಕೊಳವೆಬಾವಿ ಕೊರೆಸದ ನಗರಸಭೆ ನಿರ್ಲಕ್ಷ್ಯ, ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ, ವಿವಿಧ ನಗರಗಳಿಗೆ ನೀರಿನ ಸೌಲಭ್ಯ, ಸಂಚಾರಿ ಪಶು ಆಸ್ಪತ್ರೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಏಕಕಾಲಕ್ಕೆ ಬಿಚ್ಚಿಡುವ ಮೂಲಕ ನಗರಸಭೆ ದಿವ್ಯ ನರಕದರ್ಶನ ಮಾಡಿಸಿದರು.
ಗದ್ದಲ: ಸಾರ್ವಜನಿಕರು ಮತ್ತು ಚುನಾಯಿತ ಸದಸ್ಯರು ಹಲವಾರು ಬಾರಿ ವಿವಿಧ ಸಮಸ್ಯೆಗಳ ಕುರಿತಂತೆ ಲಿಖಿತ ಅರ್ಜಿ ಸಲ್ಲಿಸಿದಾಗ್ಯೂ ಒಂದು ವರ್ಷದಿಂದ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನಗರಾಭಿವೃದ್ಧಿಗಾಗಿ ಭಾರಿ ಸಾಧನೆ ಮಾಡಿದ್ದೇವೆಂದು ಹೇಳುವವರ ಸಾಧನೆ ಇದೇನಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿಯ ಮಂಜುನಾಥಗೌಡ ಶಿವಣ್ಣನವರ, ಈರಣ್ಣ ಅಂಗಡಿ, ಬಸವರಾಜ ಲಕ್ಷ್ಮೇಶ್ವರ, ಡಿ.ಸಿ. ಕುಲಕರ್ಣಿ ಬೆಂಬಲಿಸಿ ಧ್ವನಿಗೂಡಿಸಿದ್ದರಿಂದ ಸುಮಾರು ಗಂಟೆಗೂ ಅಧಿಕ ಸಮಯ ಸಭೆಯಲ್ಲಿ ಗದ್ದಲದ ವಾತಾವರಣ ಉಂಟಾಯಿತು.
ನಗರಸಭೆಯ ಮಾಜಿ ಅಧ್ಯಕ್ಷ ರಾಮಣ್ಣ ಕೋಲಕಾರ ಮಧ್ಯ ಪ್ರವೇಶಿಸಿ, ಹಲಗೇರಿ ರಸ್ತೆಯಲ್ಲಿ ಸಾರ್ವಜನಿಕರಿಂದ ನಿರ್ಮಾಣಗೊಂಡಿರುವ ಮುಕ್ತಿಧಾಮಕ್ಕೆ ವಿದ್ಯುತ್ ಸಂಪರ್ಕಕ್ಕೆ ರಾಷ್ಟ್ರೀಯ ಹೆದ್ದಾರಿ ಹಾಗೂ ಹೆದ್ದಾರಿಯ ಕೆಳಗೆ ನಿರ್ಮಿಸಿರುವ ಸೇತುವೆಯೇ ತಾಂತ್ರಿಕ ತೊಂದರೆಯಾಗಿದೆ. ಪಶು ಆಸ್ಪತ್ರೆಗೆ ಬರುವ ದನಗಳಿಗೆ ಕುಡಿಯುವ ನೀರನ್ನು ಪೂರೈಸಲು ಜಿಪಂ ಮತ್ತು ತಾಪಂ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಉತ್ತರಿದ್ದುದರಿಂದ ಸಭೆ ಶಾಂತಗೊಂಡಿತು.
ಸಮ್ಮತಿ: ಅಡವಿ ಆಂಜನೆಯ ಬಡಾವಣೆಯ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಸಲು 4 ಕೊಳವೆ ಬಾವಿಗಳನ್ನು ಕೊರೆಸಲು, ಘನತ್ಯಾಜ್ಯ ನಿರ್ವಹಣೆಗಾಗಿ ವಾಹನ ಖರೀದಿಸಲು, ಕುಡಿಯುವ ನೀರು ಪೂರೈಸುತ್ತಿರುವ ಮುದೇನೂರು ಗ್ರಾಮದ ಬಳಿ ತುಂಗಭದ್ರಾ ನದಿಗೆ ಮರಳು ಚೀಲಗಳಿಂದ ತಡೆಗೋಡೆ ನಿರ್ಮಿಸಲು, ನೀರು ಶುದ್ದಿಕರಣ ಘಟಕದ ಯಂತ್ರಗಳ ರಿಪೇರಿಗೆ ಸಭೆ ಒಪ್ಪಿಗೆ ನೀಡಿತು.
ನಗರಸಭೆ ಅಧ್ಯಕ್ಷ ಡಾ. ಗಣೇಶ ದೇವಗಿರಿಮಠ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರೇಮಾ ಅಟವಾಳಗಿ, ಪೌರಾಯುಕ್ತ ಎಂ.ಎಂ. ಕರಭೀಮಣ್ಣನವರ ಉಪಸ್ಥಿತರಿದ್ದರು. ಅಭಿಯಂತರ ಪಾಟೀಲ್ ಸ್ವಾಗತಿಸಿದರು. ಕಾಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.