ಹಾವೇರಿ

ರು. 19.79 ಕೋಟಿ ಬಜೆಟ್ ನಿರೀಕ್ಷೆ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ.4
ಪುರಸಭೆಯ 2013-14ನೇ ಸಾಲಿಗೆ ಅಂದಾಜು ರು. 19 ಕೋಟಿ, 79 ಲಕ್ಷ ಬಜೆಟ್‌ಗೆ ಪುರಸಭೆಯ ಸಭಾಭವನದಲ್ಲಿ ಸೋಮವಾರ ಅಧ್ಯಕ್ಷೆ ಪಾರ್ವತಿ ಕೊಪ್ಪದ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದ ಅಂಗೀಕಾರ ದೊರೆಯಿತು.
ರು. 2.31 ಕೋಟಿ ಎಸ್‌ಎಫ್‌ಸಿ ಯೋಜನೆಯಡಿ, ರು. 5 ಕೋಟಿ ಸಿಎಂಎಸ್, ಎಂಟಿಡಿಪಿ, ರು. 1.21 ಕೋಟಿ 13 ನೇ ಹಣಕಾಸು ಯೋಜನೆಯಡಿ, ರು. 18 ಲಕ್ಷ ಬಾಡಿಗೆ, ರು. 38 ಲಕ್ಷ ಆಸ್ತಿ ತೆರಿಗೆ, ರು. 7.5 ಲಕ್ಷ ದಂಡ ಹಾಗೂ ಮೇಲ್ವಿಚಾರಣಾ ಶುಲ್ಕ, ರು. 6.5 ಲಕ್ಷ ಹಕ್ಕು ಬದಲಾವಣೆ ಫೀ, ರು. 2.5 ಲಕ್ಷ ಟೆಂಡರ್ ಫಾರ್ಮ್ ಮಾರಾಟ, ರು. 1.10 ಕೋಟಿ ವಿದ್ಯುತ್ ಮೇಲ್ವಿಚಾರಣೆ, ರು. 35 ಲಕ್ಷ ನೀರಿನ ಕರ, ರು. 20 ಲಕ್ಷ ಹೊಸ ನಿವೇಶನ ಮೇಲ್ವಿಚಾರಣೆ, ರು. 8.5 ವಾರದ ಮಾರುಕಟ್ಟೆ ಫೀ ಹಾಗೂ ಅನುಪಯುಕ್ತ ವಸ್ತು ಮಾರಾಟ ಸೇರಿದಂತೆ ಇನ್ನಿತರ ಮೂಲಗಳಿಂದ ಒಟ್ಟು ರು. 19 ಕೋಟಿ 79 ಲಕ್ಷ ಸಂಗ್ರಹಿಸುವ ಗುರಿಯೊಂದಿಗೆ ಬಜೆಟ್ ಮಂಡಿಸಲಾಯಿತು.
ಪುರಸಭೆ ಆದಾಯದಲ್ಲಿ ಕುಡಿಯುವ ನೀರು, ವಿದ್ಯುತ್ ಬಿಲ್, ಸಿಬ್ಬಂದಿ ವೇತನ, ಗುತ್ತಿಗೆ ಸಿಬ್ಬಂದಿ ವೇತನ, ನಗರ ನೈರ್ಮಲ್ಯ, ವಾಹನಗಳ ನಿರ್ವಹಣೆ, ಕ್ರೀಡಾ ಚಟುವಟಿಕೆ ಹಾಗೂ ಪಟ್ಟಣದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ಪಡೆದು ವೆಚ್ಚ ಮಾಡುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸಕಾಲಕ್ಕೆ ನೀರು ಸರಬರಾಜಾಗಲಿ: ಈ ಸಂದರ್ಭ ಸದಸ್ಯ ಎಸ್.ಆರ್. ಪಾಟೀಲ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರು ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪಟ್ಟಣದ ಸಾರ್ವನಿಕರಿಗೆ ನೀರು ವಿತರಣೆಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಲು ಎಚ್ಚರಿಸಿದರು.
ವಸೂಲಿಗೆ ಸಹಕರಿಸಿ: ಕಳೆದ 2012-13ನೇ ಸಾಲಿನಲ್ಲಿ ಸುಮಾರು ರು. 5 ಲಕ್ಷಗಳಿಗೂ ಹೆಚ್ಚು ನೀರಿನ ಕರ ಬಾಕಿಯಿದ್ದು, ಇವುಗಳ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ ಸಂಬಂಧಿಸಿ ವಾರ್ಡ್ ಸದಸ್ಯರು ಪುರಸಭೆ ಸಿಬ್ಬಂದಿಯೊಂದಿಗೆ ತೆರಳಿ ವಸೂಲಾತಿಗೆ ಸಹಕರಿಸುವಂತೆ ಸಲಹೆ ನೀಡಿದರು.
ಸದಸ್ಯ ಮುರಿಗೆಪ್ಪ ಶೆಟ್ಟರ್ ಮಾತನಾಡಿ, ಕುಡಿಯುವ ನೀರು ಹಾಗೂ ನಗರ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಸ್ವಯಂಚಾಲಿತ ಫಾಗಿಂಗ್ ಯಂತ್ರಗಳಿಂದ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಫಾಗಿಂಗ್ ಸಿಂಪಡಿಸುವ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು. ಪಟ್ಟಣದಲ್ಲಿರುವ ಚರಂಡಿಗಳ ಪಕ್ಕದಲ್ಲಿ ಬೆಳೆಯುವ ಗಿಡ, ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಲು ಕಾರ್ಯೋನ್ಮುಖವಾಗುವಂತೆ ಸೂಚಿಸಿದರು.
ಪಟ್ಟಣದಲ್ಲಿ ಬೀದಿ ದೀಪದ ಸೌಲಭ್ಯಕ್ಕಾಗಿ ಕಡಿಮೆ ವಿದ್ಯುತ್ ಬಳಸಿ ಹೆಚ್ಚು ಬೆಳಕು ನೀಡುವಂತಹ ಎಲ್‌ಇಡಿ ಬಲ್ಬಗಳನ್ನೇ ಕಡ್ಡಾಯವಾಗಿ ಉಪಯೋಗಿಸಲು ಕ್ರಮ ತೆಗೆದುಕೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಬಾಬುಸಾಬ್ ಬಡಿಗೇರ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸಂಕಣ್ಣನವರ, ಸದಸ್ಯ ರಾದ ರಾಮಣ್ಣ ಕೋಡಿಹಳ್ಳಿ, ಗುಡ್ಡಪ್ಪ ಆಡಿನವರ, ಶಂಭಣ್ಣ ಬಿದರಿ, ಬಸವರಾಜ ಸಂಕಣ್ಣನವರ, ಅಜೀಜ್‌ಸಾಬ್ ಬಳ್ಳಾರಿ, ದುರ್ಗೇಶ್ ಗೋಣೆಮ್ಮನವರ, ರಾಜಾಭಕ್ಷ ಕೂರಗುಂದ, ರೇಣುಕಾ ಹಾವೇರಿ, ನೀಲಮ್ಮ ಯಾದವಾಡ, ಸೌದಾಗರ, ಖುರ್ಷಿದಾಬಾನು ಬೆಳಗಾವಿ, ಶಾಂತವ್ವ ಬೆಳಕೇರಿ, ಅಬ್ದುಲ್‌ನಬಿ ಕೂರಗುಂದ, ಶಾಂತವ್ವ ಹಂಜಿ, ಮಹಾಂತೇಶ ಹಾವೇರಿ, ರಾಮಣ್ಣ ಉಕ್ಕುಂದ, ಹೊನ್ನೂರಪ್ಪ ಕಾಡಸಾಲಿ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು. ಮಲ್ಲಿಕಾಜುನ ಯಲ್ಲಣ್ಣನವರ ಸ್ವಾಗತಿದರು, ಎಂ.ಎಮ್.ಅಗಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.