ಹಾವೇರಿ

ಸಮುದಾಯ ಭವನಕ್ಕೆ ರು. 10 ಕೋಟಿ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ. 15
ಭಾವಸಾರ ಕ್ಷತ್ರೀಯ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ರು. 10 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು.
ಇಲ್ಲಿನ ವಿಠ್ಠಲ ಮಂದಿರದ ಕಳಸಾರೋಹಣ ಹಾಗೂ ನಿಯೋಜಿತ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕ್ಷತ್ರೀಯ ಸಮಾಜ ಇಡೀ ಸಮುದಾಯಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ. ಇದೊಂದು ಸಂಘಟಿತ ಸಮಾಜವಾಗಿದ್ದು, ಬೇರೆ ಸಮಾಜದವರಿಗೆ ಅನ್ಯಾಯವಾಗದಂತೆ ನಡೆದುಕೊಳ್ಳುವುದೇ ಇಂದಿನ ಅಗತ್ಯವಾಗಿದೆ ಎಂದರು.
ಕ್ಷತ್ರೀಯರು ಶೇ. 90ರಷ್ಟು ಜನ ದರ್ಜಿ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ತಮ್ಮ ಕುಲಕಸುಬುಗಳನ್ನು ನಂಬಿ ಜೀವನ ನಡೆಸುವುದು ಕಷ್ಟಸಾಧ್ಯ. ಬದುಕು ಬದಲಾಯಿಸುವಂತ ಕ್ಷೇತ್ರಗಳಲ್ಲಿ ಹೊಸ ಹೆಜ್ಜೆ ಇಡುವುದು ಅತ್ಯವಶ್ಯ. ಶೈಕ್ಷಣಿಕ ಬದಲಾವಣೆ ಅವಶ್ಯವಾಗಿದ್ದು, ಆರ್ಥಿಕ ಸುಧಾರಣೆಗೆ ಸಕಾರಾತ್ಮಕ ಚಿಂತನೆ ನಡೆಸಿ ಉದ್ಯೋಗಾಧಾರಿತ ತಾಂತ್ರಿಕ ಶಿಕ್ಷಣ ಪಡೆಯುವಂತೆ ಹೇಳಿದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ ಮಾತನಾಡಿ, ಕ್ಷತ್ರೀಯ ಸಮಾಜ ಎಲ್ಲ ರೀತಿಯ ಶೋಷಣೆಗೆ ಒಳಗಾಗಿದ್ದು, ಆರ್ಥಿಕ ಮುನ್ನಡೆ ಸಾಧಿಸಲು ಸಾಧ್ಯವಾಗಿಲ್ಲ. ಶೈಕ್ಷಣಿಕ ಹಿನ್ನಡೆಯೇ ಇದಕ್ಕೆ ಕಾರಣ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅಗತ್ಯವಾಗಿದ್ದು, ಪಾಲಕರಲ್ಲಿ ಈ ಕುರಿತು ಜಾಗೃತಿ ಮೂಡಬೇಕಿದೆ. ಸರ್ಕಾರ ನೀಡುವ ಎಲ್ಲ ಶೈಕ್ಷಣಿಕ ಸಹಾಯಗಳನ್ನು ಪಡೆಯುವ ಮೂಲಕ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಲು ಮುಂದೆ ಬರಬೇಕೆಂದು ವಿನಂತಿಸಿದರು.
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ ಸಿಂಧೂರು ಮಾತನಾಡಿ, ನಾನು ರಾಜಕೀಯ ಪ್ರವೇಶಿಸಿ ಯಶಸ್ವಿಯಾಗಲು ಭಾವಸಾರ ಕ್ಷತ್ರೀಯ ಸಮಾಜದ ಪ್ರೋತ್ಸಾಹವೇ ಕಾರಣ. ಸೇವಾ ಭಾವನೆ ಬೆಳೆಸಿಕೊಂಡು ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಬೇಕೆಂದು ಮನವಿ ಮಾಡಿದರು.
ಪಂಡರಪುರದ ಹ.ಭ.ಪ ಪ್ರಭಾಕರಬುವಾ ಬೋಧಲೆ ಮಹಾರಾಜರು ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೇಷ್ಠ ಭಾವವಿರುವ ಸಮಾಜವೇ ಭಾವಸಾರ ಕ್ಷತ್ರೀಯ ಸಮಾಜವಾಗಿದೆ. ಸಂತ ಸಂಪ್ರದಾಯದ ಸ್ಥಾಪಕರಾದ ನಾಮದೇವ ಮಹಾರಾಜರು ಹಾಗೂ ಸಂತ ಜನಾಬಾಯಿ ಇದೇ ಸಮಾಜದವರಾಗಿದ್ದು, ಭಕ್ತಿ ಪರಂಪರೆಯ ಪ್ರವರ್ತಕರಾಗಿದ್ದಾರೆ. ಮಾನವರಲ್ಲಿ ಮನುಷ್ಯತ್ವದ ಸಂಸ್ಕಾರವಿರಬೇಕು. ಸಮಾಜ ಉಳಿಸಲು ಸಂಸ್ಕಾರ ಅತ್ಯಗತ್ಯ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸತ್ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಹೇಳಿದರು. ಭಾವಸಾರ ಕ್ಷತ್ರಿಯ ಸಮಾಜದ ತಾಲೂಕಾಧ್ಯಕ್ಷ ಚಂದ್ರಕಾಂತ ಬೇದ್ರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಸಮಾಜ ಅಧ್ಯಕ್ಷ ನಾರಾಯಣರಾವ್ ತಾತುಸ್ಕರ್, ಆದಿಶೇಷ ಕುಂಠೆ, ಮನೋಹರ ತಹಸೀಲ್ದಾರ, ಎಂ.ಬಿ. ಕಲಾಲ ಮಾತನಾಡಿದರು.
ಕಳಸಾರೋಹಣ: ವಿಠೋಬ ಮಂದಿರದ ನೂತನ ಗೋಪುರದ ಕಳಾಸಾರೋಹಣವನ್ನು ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮೀಜಿ,  ನೆರವೇರಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ದಾಮೋದರ, ಗಣಪತಿ ಬೇದ್ರೆ, ತುಕಾರಾಮ್ಬುಗರೆ, ಪರಶುರಾಮ ತಿರುಮಲೆ, ನಾಮದೇವಪ್ಪ ತಾಂದಳೆ, ಪಾಂಡುರಂಗ ದಾಮೋದರ, ಕಮಲಾಕರ ಸುಲಾಖೆ ಹಾಗೂ ಮುರಲೀಧರ ದಾಮೋದರ ಮುಂತಾದವರನ್ನು ಸನ್ಮಾನಿಸಲಾಯಿತು.ಪ್ರಮೋದ ಬೇದ್ರೆ ಸ್ವಾಗತಿಸಿದರು. ಮಾತನಾಡಿದರು. ಪ್ರವೀಣ ಬೇದ್ರೆ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.