ಹಾವೇರಿ

ಹಿರೇಕೆರೂರು ದೊರೆ ಯಾರು?

Published On :

 ಗಂಗಾಧರ ಹಲಗೇರಿ
ಹಿರೇಕೆರೂರು: ಕಳೆದ ಬಾರಿ ಚುನಾವಣೆಯಲ್ಲಿ ಈ ಪಟ್ಟಣ ಪಂಚಾಯತಿ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ಒಟ್ಟು ಹದಿನಾರು ವಾರ್ಡ್ ಹೊಂದಿರುವ ವಾರ್ಡ್‌ನಲ್ಲಿ ಒಟ್ಟು 11,259 ಮತದಾರರಿದ್ದಾರೆ. 5,964 ಪುರುಷರು, 5,292 ಮಹಿಳಾ ಮತದಾರಿದ್ದಾರೆ. ನಾಲ್ಕುವರೆ ವರ್ಷದಲ್ಲಿ ಪಪಂಗೆ ಒಟ್ಟು ರು. 1.5 ಕೋಟಿ ಅನುದಾನ ಬಿಡುಗಡೆಯಾಗಿದೆ.
ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಂತ್ಯ ಹಾಡುವುದಕ್ಕೆ ಆದ್ಯತೆ ನೀಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರ ಹಾಗೂ ಜಲಮಂಡಳಿ ಸಹಕಾರದೊಂದಿಗೆ ಪಟ್ಟಣದಿಂದ 32 ಕಿಲೋ ಮೀಟರ್ ದೂರದ ತುಂಗಭದ್ರಾ ನದಿ ದಂಡೆಯ ಕುಸಗಟ್ಟೆ ಗ್ರಾಮದಲ್ಲಿ ರು. 20 ಕೋಟಿ ವೆಚ್ಚದಲ್ಲಿ ಜಾಕ್‌ವೆಲ್ ನಿರ್ಮಿಸಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಪರಿಹಾರವಾಗಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸುತ್ತಾರೆ.
ಪಪಂ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಾಣ, ಪಕ್ಕಾ ಗಟಾರ್ ಕಾಮಗಾರಿ, ರು. 10 ಲಕ್ಷ ವೆಚ್ಚದಲ್ಲಿ 3 ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಒಟ್ಟು 16 ಅಂಗನವಾಡಿ ಕೇಂದ್ರಗಳು ಈ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ 13 ಬಾಡಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದರೆ, 3 ಸರ್ಕಾರದ ಆಸ್ತಿಯಾಗಿವೆ.
ಸ್ಥಳೀಯ ಚುನಾವಣೆಯಲ್ಲಿ ಮತೊಮ್ಮೆ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಸದಸ್ಯರು, ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಜನತಾ ಜನಾರ್ದನನ ಮುಂದೆ ಮಂಡಿಸುತ್ತಿದ್ದರೆ, ಬಿಜೆಪಿಗರು ತಮ್ಮ ಸರ್ಕಾರ ನೀಡಿರುವ ಕೋಟ್ಯಂತರ ಅನುದಾನದಿಂದಾಗಿ ಹಿರೇಕೆರೂರ ಸಮಗ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾದ ನಂತರ, ಹಿರೇಕೆರೂರನಲ್ಲಿ ಒಂದು ರೀತಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಆದರೆ, ಮತದಾರ ಪ್ರಭು ಮಾತ್ರ ಯಾವ ಪಕ್ಷಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂಬ ಗುಟ್ಟನ್ನು ರಟ್ಟು ಮಾಡುತ್ತಿಲ್ಲ.
ಕುತೂಹಲಕ್ಕೆ ಕಾರಣ: ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ಸ್ಪರ್ಧೆಯಿಂದಾಗಿ ಚುರುಕು ಪಡೆದುಕೊಳ್ಳುತ್ತಿದ್ದ ಚುನಾವಣಾ ಆಖಾಡಕ್ಕೆ ಈ ಬಾರಿ ಬಿಎಸ್‌ವೈ ನೇತೃತ್ವದ ಕೆಜೆಪಿಯೂ ಸೇರ್ಪಡೆಗೊಂಡಿದ್ದು ಮತದಾರರಲ್ಲಿಯೂ ಕುತೂಹಲ ಮೂಡಿಸಿದೆ. ಹೇಗಾದರೂ ಸರಿ, ಸ್ಥಳೀಯ ಸಂಸ್ಥೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷದ ವರ್ಚಸ್ಸು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕೆಂಬ ಧಾವಂತ ಬಿಜೆಪಿಯಲ್ಲಿ ಕಂಡು ಬರುತ್ತಿದ್ದರೆ, ಕೆಜೆಪಿ ಈ ಚುನಾವಣೆ ಮೂಲಕ ರಾಜಕೀಯವಾಗಿ  ಅಸ್ಥಿತ್ವ ರೂಪಿಸಿಕೊಳ್ಳಲು ಯತ್ನಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗುರುತಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್, ಕೆಜೆಪಿ-ಬಿಜೆಪಿ ಒಳಜಗಳ ಬಿಂಬಿಸುವ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ.
ಒಟ್ಟಾರೆ, ಪಪಂಗೆ ನಡೆಯುತ್ತಿರುವ ಈ ಚುನಾವಣೆ ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲದೇ ಜನಸಾಮಾನ್ಯರಲ್ಲಿಯೂ ತೀರಾ ಕುತೂಹಲ ಸೃಷ್ಟಿಸಿದ್ದು ಅಂತಿಮವಾಗಿ ಮತದಾರ ಯಾರತ್ತ ಒಲವು ತೊರಲಿದ್ದಾನೆ ಎಂಬುದು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.