ಮತದಾನ ಪ್ರಮಾಣ ಕುಸಿತ: ಆತಂಕ
ಕನ್ನಡಪ್ರಭ ವಾರ್ತೆ, ಹಾವೇರಿ, ಜ.25
ವರ್ಷದಿಂದ ವರ್ಷಕ್ಕೆ ಮತದಾನದ ಪ್ರಮಾಣ ಕುಸಿಯುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರು ಎಚ್ಚರಗೊಳ್ಳಬೇಕಿದೆ ಎಂದು ಜಿಲ್ಲಾ ನ್ಯಾಯಾಧೀಶ ಎಚ್.ಪಿ. ಸಂದೇಶ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಜಿಲ್ಲಾ ಗುರುಭವನಲ್ಲಿ ಜಿಲ್ಲಾಡಳಿತ ಹಾಗೂ ಭಾರತ ಚುನಾವಣಾ ಆಯೋಗದ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಾಯಕತ್ವ ಗುಣ ಬೆಳೆಸಿಕೊಳ್ಳಿ: ಮತದಾರರು ನಮ್ಮ ರಾಜಕೀಯ ವ್ಯವಸ್ಥೆ ಬಗ್ಗೆ ನಿರಾಸಕ್ತಿ ಬೆಳೆಸಿಕೊಳ್ಳುತ್ತಿರುವುದು ವಿಷಾದಕರ. ಮತದಾನ ಹಕ್ಕು ಸಂವಿಧಾನಬದ್ಧ. ವಿಶಿಷ್ಟ ಹಾಗೂ ಪವಿತ್ರ ಹಕ್ಕಾಗಿದೆ. ಸದೃಢ ದೇಶ ಕಟ್ಟುವ ಕೆಲಸಕ್ಕೆ ಮತದಾನ ಹಕ್ಕು ಸದ್ಭಳಕೆಯಾಗಬೇಕು. ಯುವಜನರು ದೇಶದ ಬಲಿಷ್ಠ ಶಕ್ತಿ. ಈ ಶಕ್ತಿ ಮತದಾನದ ಹಕ್ಕನ್ನು ವಿವೇಚನೆಯಿಂದ ಬಳಸಿ, ದೇಶಕ್ಕೆ ಒಳ್ಳೆಯ ಸರ್ಕಾರ ಮತ್ತು ನಾಯಕತ್ವ ದೊರೆಯುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ದೇಶ ಕಟ್ಟಲು ಮುಂದಾಗಿ: ಯುವಜನರು ನಮ್ಮ ಹಿರಿಯರ ಆದಶಗಳ ಬೆಳಕಿನಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು, ದೇಶಕ್ಕೆ ಎಲ್ಲ ಹಂತಗಳಲ್ಲಿ ಉತ್ತಮ ನಾಯಕತ್ವ ನೀಡಿ, ಆದರ್ಶ ಸಮಾಜ ಕಟ್ಟಲು ಮತ್ತು ಉತ್ತಮ ಸರ್ಕಾರ ರಚನೆಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ಮಹಿಳೆಯರು ಮತದಾನ ಹಕ್ಕು ಹೊಂದಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಮಾತನಾಡಿ, ಮತದಾರರು ಆಮೀಷಗಳಿಗೆ ಒಳಗಾಗದೇ ಪವಿತ್ರ ಮತದಾನ ಮಾಡಬೇಕಾದುದು ಅಗತ್ಯ. ಜಿಲ್ಲೆಯಲ್ಲಿ ಮಹಿಳಾ ಮತದಾರರ ಪ್ರಮಾಣ ಪುರುಷ ಮತದಾರರ ಪ್ರಮಾಣಕ್ಕೆ ಹೋಲಿಸಿದಲ್ಲಿ ಕಡಿಮೆ ಇದೆ. ಮಹಿಳೆಯರು ಮತದಾರರಾಗಿ ನೋಂದಣಿ ಮಾಡಿಕೊಳ್ಳುವ ಮೂಲಕ ಮತದಾನ ಹಕ್ಕನ್ನು ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಸುಮಾರು 36,280 ಯುವ ಮತದಾರರು ಮೊದಲ ಬಾರಿಗೆ ನೋಂದಣಿಯಾಗಿದ್ದು, ಅವರಿಗೆ ಗುರುತಿನ ಎಫಿಕ್ ಕಾರ್ಡ್ಗಳ ವಿತರಣೆ ಕಾರ್ಯ ನಡೆದಿದೆ ಎಂದರು.
ಮತದಾರರ ಪ್ರಮಾಣ: ಜಿಲ್ಲೆಯಲ್ಲಿ ಜ. 1ಕ್ಕೆ ಮತದಾರರ ಪಟ್ಟಿ ಪರಿಷ್ಕರಿಸಿ ಅಂತಿಮಪಟ್ಟಿ ಪ್ರಕಟಿಸಲಾಗಿದೆ. 6 ವಿಧಾನಸಭಾ ಕ್ಷೇತ್ರಗಳ ಜಿಲ್ಲೆಯ 7 ತಾಲೂಕುಗಳಲ್ಲಿ 5,33,448 ಪುರುಷ ಹಾಗೂ 4,93,850 ಮಹಿಳಾ ಮತದಾರರು ಮತ್ತು 23 ಇತರೆ ಮತದಾರರು ಸೇರಿದಂತೆ ಒಟ್ಟು 10,47,128 ಮತದಾರರಿದ್ದಾರೆ. ಈ ಪೈಕಿ ಮೊದಲ ಬಾರಿಗೆ ಮತದಾರರಾಗಿ ನೋಂದಣಿಯಾದವರ ಸಂಖ್ಯೆ 36,280. ಇವರಿಗೆ ಮತದಾರರ ಗುರುತಿನ ಎಪಿಕ್ ಕಾರ್ಡ್ನ್ನು ಇಂದಿನಿಂದಲೇ ವಿತರಿಸಲಾಗುತ್ತಿದೆ ಎಂದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಅಪರ ಜಿಲ್ಲಾಧಿಕಾರಿ ಜಿ. ಜಗದೀಶ ಮಾತನಾಡಿ, ಭಾರತ ಚುನಾವಣಾ ಆಯೋಗ ಕಳೆದ 3 ವರ್ಷದಿಂದ, ಜ. 25ನ್ನು ಮತದಾರರ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಯುವಜನರು ಹಾಗೂ ಮಹಿಳೆಯರ ಅರ್ಥಪೂರ್ಣ ಪಾಲ್ಗೊಳ್ಳುವಿಕೆಯ ಅರಿವು ಮೂಡಿಸಲು ಚುನಾವಣಾ ಆಯೋಗ ಒತ್ತು ನೀಡಿದೆ. ಜಿಲ್ಲೆಯಲ್ಲಿ ಮತದಾರರಿಗೆ ಎಪಿಕ್ ಕಾರ್ಡ್ ನೀಡಿಕೆ ಕಾರ್ಯ ಶೇ. 99.35ರಷ್ಟಾಗಿದೆ ಎಂದರು. ಡಿಡಿಪಿಐ ಎಸ್.ಬಿ. ಕೊಡ್ಲಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಮೊದಲ ಬಾರಿಗೆ ಮತದಾರರಾಗಿ ನೋಂದಣಿಯಾದ ಯುವಕರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು. ಸಮಾರಂಭದಲ್ಲಿ ಮತದಾರರ ನೋಂದಣಿ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಕೆ. ಚನ್ನಬಸಪ್ಪ, ಡಿಡಿಪಿಯು ಆರ್.ಆರ್. ಕೊಣ್ಣೂರ ಮತ್ತು ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಉಪಸ್ಥಿತರಿದ್ದರು. ತಹಸೀಲ್ದಾರ್ ಶಿವಲಿಂಗ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

