ಹಾವೇರಿ

ಸುದ್ದಿ ಸಂಕ್ಷೇಪ

Published On :

ಸಕಾಲ: ಖಾಸಗಿ ಸೈಬರ್ ಕೆಫೆಯಿಂದ ಅರ್ಜಿ ಆಹ್ವಾನ
ಹಾವೇರಿ: ರಾಜ್ಯ ಸರ್ಕಾರ ತನ್ನ ಸಕಾಲ ಸೇವೆ ಅಧಿನಿಯಮದ ವ್ಯಾಪ್ತಿಗೆ ತಂದಿರುವ 30 ಇಲಾಖೆಗಳ 265 ಸೇವೆಗಳನ್ನು ಆನ್‌ಲೈನ್ ಮೂಲಕ ಖಾಸಗಿ ಸೈಬರ್ ಕೆಫೆಗಳಿಂದ ಪಡೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಆನ್‌ಲೈನ್ ಟಿಕೆಟ್ ಸೇರಿದಂತೆ ವಿವಿಧ ರೀತಿಯ ಸಾರ್ವಜನಿಕ ಸೇವೆ ನೀಡುವ ಮತ್ತು ಅಂತರ್ಜಾಲ ಸೌಲಭ್ಯ ಹೊಂದಿರುವ ಖಾಸಗಿ ಸೈಬರ್ ಕೆಫೆ ವೆಬ್ ಪಾರ್ಲರ್‌ಗಳಿಂದ ಸಕಾಲ ಸೇವೆ ನಿರ್ವಹಣೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಫೆ ಹಾಗೂ ಪಾರ್ಲರ್‌ಗಳು ಸಕಾಲ ಸೇವೆ ಆನ್‌ಲೈನ್ ಮೂಲಕ ಸೇವೆ ಒದಗಿಸಲು ಅಗತ್ಯ ಸ್ಕ್ಯಾನರ್ ಸಾಮಗ್ರಿ, ಗಣಕಯಂತ್ರ, ಮುದ್ರಣ ಸಾಮಗ್ರಿ(ಪ್ರಿಂಟರ್), ಅಂತರ್ಜಾಲದ ಮೂಲಕ ದೃಶ್ಯ ಗ್ರಹಿಸುವ ಕ್ಯಾಪ್ಟರ್, ವೆಬ್‌ಕ್ಯಾಮ್ ಮತ್ತು ಬಯೋವುಟ್ರಿಕ್ ತಂತ್ರಜ್ಞಾನ ಸಾಮಗ್ರಿಗಳನ್ನು ಹೊಂದಿದ್ದು, ಅವುಗಳ ಬಗ್ಗೆ ತಿಳಿವಳಿಕೆಯುಳ್ಳವರಾಗಿರಬೇಕು. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿರುವ ಅಂತಹ ವ್ಯಕ್ತಿಗಳು ಸೈಬರ್ ಕೇಂದ್ರಗಳು ತಮ್ಮ ಅರ್ಜಿಗಳನ್ನು ನಿಗದಿತ ನಮೂನೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಡೆದು, ಜಿಲ್ಲಾಧಿಕಾರಿಗಳು, ಹಾವೇರಿ ಜಿಲ್ಲೆ ಹಾವೇರಿ ಅವರಿಗೆ ಈ ಪ್ರಕಟಣೆ ಪ್ರಕಟಗೊಂಡ 15 ದಿನಗೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.
ಮಾಂಸದ ಅಂಗಡಿಗೆ ಅನುಮತಿ: ಪ್ರತಿಭಟನೆ
ಹಾವೇರಿ: ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ಮಾಂಸದಂಗಡಿ ಹಾಗೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದನ್ನು ಖಂಡಿಸಿ ಇಲ್ಲಿನ ಲಾಲ ಬಹಾದ್ದೂರು ಶಾಸ್ತ್ರಿ ಮಾರುಕಟ್ಟೆ ವರ್ತಕರು ಮಾಂಸದಂಗಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಇದು ತರಕಾರಿ ಮಾರುಕಟ್ಟೆ, ಇಲ್ಲಿ ಮಹಿಳೆಯರು, ಮಕ್ಕಳು ಎಲ್ಲರೂ ಬರುತ್ತಾರೆ. ಇಲ್ಲಿ ಮಾಂಸದಂಗಡಿ ಮತ್ತು ಮದ್ಯದಂಗಡಿ ತೆರೆಯಲು ಅನುಮತಿ ನೀಡುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ, ಅಲ್ಲದೇ ತರಕಾರಿ ವ್ಯಾಪಾರಕ್ಕೂ ಹೊಡೆತ ಬೀಳುತ್ತಿದೆ. ಕೂಡಲೇ ಇದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಮಾಂಸದಂಗಡಿಗೆ ಬೀಗ ಜಡಿದರು. ತರಕಾರಿ ವ್ಯಾಪಾರಸ್ಥರು ಹಾಗೂ ಅಂಗಡಿಗಳ ಮಾಲೀಕರು ಪ್ರತಿಭಟನೆ ನಡೆಸಿದರು. ಮುಂದೆ ಮಾಸದಂಗಡಿ ಆರಂಭಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ನಗರಸಭೆಗೆ ಬೀಗ ಜಡಿಯಬೇಕಾಗುತ್ತದೆ. ಈಗ ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಶವ ಪತ್ತೆ: ಆತ್ಮಹತ್ಯೆ ಶಂಕೆ
ಹಾವೇರಿ: ಇಲ್ಲಿನ ಮುನ್ಸಿಪಲ್ ಹೈಸ್ಕೂಲ್‌ನ ಮುಂಭಾಗದಲ್ಲಿರುವ ತೋಟದಲ್ಲಿ ವ್ಯಕ್ತಿಯೊಬ್ಬರ ಶವ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳುತ್ತಿದ್ದ ಜನರು, ಬೇವಿನ ಮರಕ್ಕೆ ನೇಣು ಹಾಕಿಕೊಂಡಿದ್ದ ವ್ಯಕ್ತಿಯ ಶವ ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಈ ಕುರಿತಂತೆ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.