ಸುದ್ದಿ ಸಂಕ್ಷೇಪ
ವರ್ಷಾಸನ ನೀಡಿ: ಮನವಿ
ಹಾವೇರಿ: ರಾಜ್ಯದ ಎಲ್ಲ ಪುರಾತನ ಕಾಲದ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು. ಖಾಸಗಿ ದೇವಸ್ಥಾನಗಳ ಅರ್ಚಕರಿಗೆ ತಸ್ತಿಕ, ವರ್ಷಾಸನ ನೀಡಬೇಕು ಎಂದು ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಜಿಲ್ಲಾ ಸಂಘ ಒತ್ತಾಯಿಸಿದೆ. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಈ ಕುರಿತಂತೆ ಮನವಿ ಸಲ್ಲಿಸಿರುವ ಸಂಘ, ಪುರಾತನ ಕಾಲದಿಂದಲೂ ಪೂಜೆ ಸಲ್ಲಿಸುತ್ತ ಬಂದಿರುವ ರಾಜ್ಯದ ಎಲ್ಲ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದೆ. ದೇವಸ್ಥಾನಗಳಿಗೆ ಯಾವುದೇ ಆದಾಯ ಇಲ್ಲದಿದ್ದರೂ ಗ್ರಾಮೀಣ ಪ್ರದೇಶದ ದೇವಸ್ಥಾನಗಳಲ್ಲಿ ಪ್ರತಿನಿತ್ಯ ಪೂಜೆಗೆ ಬೇಕಾಗುವ ಸಾಮಗ್ರಿಗಳನ್ನು ಅರ್ಚಕರೇ ತೆಗೆದುಕೊಂಡು ಪೂಜೆ ಮಾಡುತ್ತಿದ್ದಾರೆ. ದೇವರಿಗೆ ನಿತ್ಯ ಖರ್ಚಾಗುವ ದೀಪ, ಧೂಪಾಧಿಗಳಿಗೆ ಪ್ರಸಕ್ತ ಬಜೆಟ್ನಲ್ಲಿ ಅನುದಾನ ತೆಗೆದಿರಿಸಬೇಕು ಎಂದೂ ಮನವಿಯಲ್ಲಿ ಒತ್ತಾಯಿಸಲಾಗಿದೆ. ದೇವಸ್ಥಾನದ ಅರ್ಚನೆ ಕೆಲಸ ಬಿಟ್ಟು ಅರ್ಚಕರು ಬೇರಾವುದೇ ಉದ್ಯೋಗ ಮಾಡುವುದು ಗೊತ್ತಿಲ್ಲ. ಇದರಿಂದ ಅರ್ಚಕರು ಜೀವನ ನಡೆಸುವುದು ಕಷ್ಟವಾಗಿದೆ. ಎಲ್ಲ ಅರ್ಚಕರನ್ನು ಡಿ ದರ್ಜೆಯ ನೌಕರರೆಂದು ಪರಿಗಣಿಸಿ ವೇತನ ನೀಡಬೇಕು. ಖಾಸಗಿ ದೇವಸ್ಥಾನಗಳ ಅರ್ಚಕರಿಗೆ ತಸ್ತಿಕ ಮಾಸಾಶನ ಮಂಜೂರು ಮಾಡಬೇಕು. ಅಲ್ಲದೇ, ವಾರ್ಷಿಕ ರು. 24 ಸಾವಿರಗಳನ್ನು ನೀಡಬೇಕು ಎಂದು ಹೇಳಿದ್ದಾರೆ. ಗ್ರಾಮೀಣ ಭಾಗದಲ್ಲಿ ದೇವಸ್ಥಾನಗಳು ಊರಿನಿಂದ ಸ್ವಲ್ಪ ದೂರದಲ್ಲಿ ಇರುವುದರಿಂದ ದೇವಸ್ಥಾನ ಇರುವ ಜಾಗದಲ್ಲಿಯೇ ವಾಸಿಸಲು ವಸತಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಸಂಘದ ಅಧ್ಯಕ್ಷ ರುದ್ರಯ್ಯ ಅಂದಾನಯ್ಯ ಸಾಲಿಮಠ, ಉಪಾಧ್ಯಕ್ಷ ಟಿ.ಡಿ. ಬಾಸೂರ ಆಗ್ರಹಿಸಿದ್ದಾರೆ.
ಸಂದರ್ಶನಕ್ಕೆ ಸೂಚನೆ
ಹಾವೇರಿ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರು 2013-14ನೇ ಸಾಲಿನ ಶಿಕ್ಷಕರ ವರ್ಗಾವಣೆಯಲ್ಲಿ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದು, 8 ಜುಲೈ, 2013ರಿಂದ 11 ಜುಲೈ, 2013ರವರೆಗೆ ಸಂದರ್ಶನ ಮೂಲಕ ಸ್ಥಳ ಆಯ್ಕೆ ಪ್ರಕ್ರಿಯೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ನೀಡಿರುತ್ತಾರೆ. ಹಾವೇರಿ ಜಿಲ್ಲೆಯಲ್ಲಿ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿರುವ ಶಿಕ್ಷಕರು ಉಪ ನಿರ್ದೇಶಕರು(ಆಡಳಿತ) ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಭವನ, ದೇವಗಿರಿ ಕಚೇರಿಯಲ್ಲಿ ತಮ್ಮ ಸರತಿಯಂತೆ ಸಂದರ್ಶನಕ್ಕೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ತಿಳಿಸಿದ್ದಾರೆ.
ಸಂದರ್ಶನ ವೇಳಾಪಟ್ಟಿ: ಜು. 8ರಂದು ಮಾದರಿ ಶಾಲಾ ಮುಖ್ಯ ಶಿಕ್ಷಕರು(01), ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು(73), ದೈಹಿಕ ಶಿಕ್ಷಕರು(47) ಹಾಗೂ ಸಹ ಶಿಕ್ಷಕರು ಕ್ರಮ ಸಂಖ್ಯೆ 1ರಿಂದ 200ರ ವರೆಗಿನ ಶಿಕ್ಷಕರು. 9ರಂದು ಸಹ ಶಿಕ್ಷಕರು ಕ್ರಮಸಂಖ್ಯೆ 201ರಿಂದ 500ರ ವರೆಗೆ, 10ರಂದು ಸಹ ಶಿಕ್ಷಕರು ಕ್ರಮಸಂಖ್ಯೆ 501 ರಿಂದ 784ರ ವರೆಗೆ ಶಿಕ್ಷಕರು ಸಂದರ್ಶನಕ್ಕೆ ಹಾಜರಾಗಬೇಕೆಂದು ತಿಳಿಸಿದ್ದಾರೆ.
717 ವಿದ್ಯಾರ್ಥಿಗಳು ಹಾಜರು
ಹಾವೇರಿ: ಜಿಲ್ಲೆಯಲ್ಲಿ ಶನಿವಾರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಜಿಲ್ಲೆಯ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಸುವ್ಯವಸ್ಥಿತವಾಗಿ ಜರುಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಆರ್. ಕೊಣ್ಣೂರ ತಿಳಿಸಿದ್ದಾರೆ. ಒಟ್ಟು 881 ವಿದ್ಯಾರ್ಥಿಗಳಲ್ಲಿ 717 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 164 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿರುತ್ತಾರೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳು ಜರುಗಿಲ್ಲ ಹಾಗೂ ಯಾವ ವಿದ್ಯಾರ್ಥಿಯೂ ಡಿಬಾರ್ ಆಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ನೇಮಕಾತಿಗೆ ನೇರ ಸಂದರ್ಶನ
ಹಾವೇರಿ: ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 11 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ನೇರ ನೇಮಕಾತಿ ಜು. 15ರಂದು ಜಿಲ್ಲಾ ಆಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಜರುಗಲಿದೆ. ಸಾಮಾನ್ಯ ವರ್ಗ -5, ಪ. ಜಾತಿ-2, ಪ. ಪಂಗಡ, ಪ್ರವರ್ಗ-1, ಪ್ರವರ್ಗ-2 ಹಾಗೂ ಪ್ರವರ್ಗ-2 ಬಿ-1 ವರ್ಗಗಳಿಗೆ ತಲಾ ಒಂದು ಹೀಗೆ ಒಟ್ಟು 11 ಹುದ್ದೆಗಳಿಗೆ ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಷರತ್ತು ಹಾಗೂ ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು. ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಎಂಬಿಬಿಎಸ್ ವಿದ್ಯಾರ್ಹತೆಯ ಎಲ್ಲ ವರ್ಷದ ಅಂಕಪಟ್ಟಿಗಳು, ಕರ್ನಾಟಕ ಮೆಡಿಕಲ್ ಕೌನ್ಸೆಲಿಂಗ್ ನೋಂದಣಿ ಪ್ರಮಾಣಪತ್ರ, ಮೀಸಲಾತಿ ಬಯಸುವ ಅಭ್ಯರ್ಥಿಗಳು ಜಾತಿ ಪ್ರಮಾಣ ಹಾಗೂ ಇತರೆ ದಾಖಲಾತಿಗಳನ್ನು ಝರಾಕ್ಸ್ ಮಾಡಿಸಿ ದೃಢೀಕರಿಸಿ ಅರ್ಜಿಯ ಜೊತೆಗೆ ಲಗತ್ತಿಸಬೇಕು. ಮಾಸಿಕ ರು. 27,900 ಹಾಗೂ ನಿಯಮಾನುಸಾರ ಲಭ್ಯವಾಗುವ ಇತರೆ ಭತ್ಯೆಗಳನ್ನು ನೀಡಲಾಗುವುದೆಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯ್ಞ ತಿಳಿಸಿದ್ದಾರೆ.
ಖಾಲಿ ಇರುವ ಸ್ಥಳಗಳು: ಹಾವೇರಿ ತಾಲೂಕು ಮೇವುಂಡಿ, ಹಾನಗಲ್ಲ ತಾಲೂಕು ಶೇಷಗಿರಿ, ಹಿರೇಕೆರೂರು ತಾಲೂಕು ಮಡ್ಲೂರು, ಮೇದುರು, ಹೊಸ ವೀರಾಪುರ ಹಾಗೂ ಕಡೂರ, ಶಿಗ್ಗಾಂವಿ ತಾಲೂಕು ಚಂದಾಪುರ, ರಾಣಿಬೆನ್ನೂರು ತಾಲೂಕು ಕುಪ್ಪೇಲೂರು ಹಾಗೂ ಸವಣೂರು ತಾಲೂಕು ಕಳಸೂರ ಮತ್ತು ಕಾರಡಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಹುದ್ದೆ ಖಾಲಿ ಇವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

