ಗ್ರಾಹಕರ ವೇದಿಕೆಯಿಂದ ದಂಡ
ಹಾವೇರಿ: ಸವಣೂರು ತಾಲೂಕಿನ ಮಂಟಗಣಿ ಗ್ರಾಮದ ಭರತೇಶ ಶಾಂತಪ್ಪ ಜಗಣ್ಣವರ ಎಂಬುವರು ಕರ್ಜಗಿ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ ಅಯ್ಯಂಗಾರ ಬೇಕರಿ ಮತ್ತು ಸ್ವೀಟ್ಸ್ ಅಂಗಡಿಯಲ್ಲಿ 13 ಫೆಬ್ರವರಿ, 2013ರಂದು ಮೈನುಟ್ ಮೇಡ್ ಎಂಬ ಹೆಸರಿನ (ಎಲ್ಲಾ ಟ್ಯಾಕ್ಸ್) ರು. 22 ಬೆಲೆಯ 400 ಎಂಎಲ್ನ ಹಣ್ಣಿನ ಜ್ಯೂಸ್ ಬಾಟಲನ್ನು ಖರೀದಿಸಿದ್ದರು. ಅಂಗಡಿಯವರು ರು. 25ಗಳನ್ನು ವಸೂಲು ಮಾಡಿದ್ದು, ರು. 3ಗಳನ್ನು ಹೆಚ್ಚುವರಿಯಾಗಿ ಪಡೆದಿರುತ್ತಾರೆಂದು ಭರತೇಶ ಜಗಣ್ಣವರ 1 ಮಾರ್ಚ್, 2013ರಂದು ಅಂಗಡಿಯವರಿಗೆ ನೋಟಿಸ್ ಜಾರಿ ಮಾಡಿ, ಹೆಚ್ಚುವರಿಯಾಗಿ ವಸೂಲು ಮಾಡಿದ ರು. 3 ಹಾಗೂ ಮೋಸದ ವ್ಯಾಪಾರ ಮಾಡಿದ್ದಕ್ಕಾಗಿ ಐದು ಸಾವಿರ ರೂ ದಂಡ ಹಾಗೂ ಅನುಭವಿಸಿದ ಮಾನಸಿಕ ವೇದನೆ ಪರಿಹಾರವಾಗಿ ಮತ್ತು ಖರ್ಚುಗಳಿಗಾಗಿ ಆರು ಸಾವಿರ ರು.ಗಳನ್ನು ಕೊಡುವಂತೆ ತಿಳಿಸಿದ್ದರು. ಅಂಗಡಿಯವರು ನೋಟಿಗೆ ಉತ್ತರ ನೀಡದ ಕಾರಣ, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ನ್ಯಾಯ ಕೊಡಿಸುವಂತೆ ಕೋರಿ 3 ಮೇ, 2013ರಂದು ದೂರು ದಾಖಲಿಸಿದ್ದರು. ಜಿಲ್ಲಾ ವೇದಿಕೆಯು ಎರಡೂ ಪಕ್ಷದವರಿಗೆ ನೋಟಿಸ್ ಜಾರಿ ಮಾಡಿದ್ದರೂ ಎದುರುಗಾರ ಗೈರು ಹಾಜರಾಗಿದ್ದರಿಂದ ಪಿರ್ಯಾದಿದಾರರ ಸಮ್ಮುಖದಲ್ಲಿ ಏಕಪಕ್ಷೀಯವಾಗಿ ನಡೆಸಿ, ಪಿರ್ಯಾದಿದಾರರ ವಾದ ಮತ್ತು ಸಾಕ್ಷ್ಯಗಳನ್ನು ಆಲಿಸಿದ್ದಲ್ಲದೇ ಕೂಲಕುಂಶವಾಗಿ ಪರಿಶೀಲನೆ ನಡೆಸಿ, ಎದುಗಾರ ಶ್ರೀ ಲಕ್ಷ್ಮೀ ವೆಂಕಟೇಶ ಅಯ್ಯಂಗಾರ ಬೇಕರಿ ಮತ್ತು ಸ್ವೀಟ್ಸ್ ಅಂಗಡಿಯ ಮಾಲೀಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ಕಾನೂನು ವಿರುದ್ಧವಾಗಿದ್ದು, ಎದುರುಗಾರ ಅಂಗಡಿಯವರು ಮೋಸದ ವ್ಯಾಪಾರ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ದೂರುದಾರನಿಂದ ಹೆಚ್ಚುವರಿಯಾಗಿ ಪಡೆದ ರು. 3ಗಳನ್ನು ಮರಳಿ ಕೊಡುವುದರೊಟ್ಟಿಗೆ, ರು. 300 ಪರಹಾರ ಕೊಡುವಂತೆ ಹಾಗೂ ರು. 500ಗಳ ಖರ್ಚಿನ ಬಾಬ್ತು ಹಾಗೂ ಎದುರುಗಾರನು ವೇದಿಕೆಯ ನೋಟಿಸಿಗೆ ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿದ್ದರಿಂದ ಮತ್ತು ಮೋಸದ ವ್ಯಾಪಾರದ ಸಲುವಾಗಿ ರು. 500ಗಳ ಶಿಕ್ಷಾರ್ಹ ದಂಡವನ್ನು ಜಿಲ್ಲಾ ವೇದಿಕೆಯ ವೆಲಫೇರ್ ಅಕೌಂಟರ್ಗೆ ಪಾವತಿಸಬೇಕೆಂದು 15 ಜೂನ್, 2013 ರಂದು ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ಹೊರಡಿಸಿದೆ. ಈ ಆದೇಶದನ್ವಯ 30 ದಿನದೊಳಗೆ ದಂಡದ ಹಣ ಪಾವತಿಸಬೇಕು. ಇದಕ್ಕೆ ತಪ್ಪಿದಲ್ಲಿ ಶೇ. 9ರಂತೆ ಬಡ್ಡಿ ಆಕರಣೆ ಮಾಡಿ ಪಾವತಿಸಲು ವೇದಿಕೆ ಅಧ್ಯಕ್ಷರಾದ ಬಿ.ಎಚ್. ಶ್ರೀಹರ್ಷ ಹಾಗೂ ಸದಸ್ಯರಾದ ರಾಜು ನಾಮದೇವ ಮೇತ್ರಿ ಆದೇಶ ಹೊರಡಿಸಿದ್ದಾರೆ.
ಪರಿಸರ ಸಂರಕ್ಷಿಸಿ: ಬಣಕಾರ
ಹಿರೇಕೆರೂರು: ಮಾನವನ ದುರಾಸೆಗೆ ಪರಿಸರ ನಾಶವಾಗುತ್ತಿದೆ. ಎಲ್ಲರೂ ಗಿಡ-ಮರಗನ್ನು ಬೆಳಸಲು ಮುಂದಾಗಬೇಕು ಎಂದು ಶಾಸಕ ಯು.ಬಿ. ಬಣಕಾರ ಕರೆ ನೀಡಿದರು. ತಾಲೂಕಿನ ಚಿಕ್ಕೇರೂರಿನ ಗ್ರಾಮ ಪಂಚಾಯಿತಿ ವತಿಯಿಂದ ಸ್ಥಳೀಯ ಕುಂತಿ ಗುಡ್ಡದಲ್ಲಿದಲ್ಲಿರುವ ಮುಕ್ತಿ ಧಾಮದಲ್ಲಿ ವನಮಹೋತ್ಸವದ ಅಂಗವಾಗಿ ಮಹತ್ಮಾ ಗಾಂಧಿ ಉದ್ಯೋಗ ಖಾತ್ರಿಯೋಜನೆಯಲ್ಲಿ ಸುಮಾರು 600ಕ್ಕೂ ಹೆಚ್ಚು ಸಸಿ ನೆಡುವ ಕಾಯ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

