ಹಾವೇರಿ

ಅನ್ನಭಾಗ್ಯ: ಹಣ ಗಳಿಕೆ ಮಾರ್ಗ?

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜು. 23
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಕಡ್ಡಾಯವಾಗಿ ಭಾವಚಿತ್ರ ಹಾಗೂ ಹೆಬ್ಬೆಟ್ಟಿನ ಗುರುತು ನೀಡಲೇಬೇಕು ಎಂಬ ಕಾನೂನಿನ ನಿಯಮವನ್ನು ಕೆಲ ಫ್ರಾಂಚೈಸಿಗಳು ಹಣ ಗಳಿಕೆಯ ಮಾರ್ಗವನ್ನಾಗಿಸಿಕೊಂಡಿದ್ದಾರೆ.
ಫಲಾನುಭವಿಗಳ ಭಾವಚಿತ್ರ ಹಾಗೂ ಹೆಬ್ಬೆಟ್ಟಿನ ಗುರುತು ಸಂಗ್ರಹಿಸುವ ಕಾರ್ಯವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಖಾಸಗಿ ವ್ಯಕ್ತಿಗಳಿಗೆ ನೀಡಿದೆ. ಈ ಕಾರ್ಯದ ಗುತ್ತಿಗೆ ಪಡೆದಿರುವ ಕೆಲವೇ ಕೆಲವು ಫ್ರಾಂಚೈಸಿಗಳು, ಇದನ್ನೇ ಹಣ ಗಳಿಕೆ ಮಾರ್ಗವನ್ನಾಗಿಸಿಕೊಂಡಿದ್ದು, ನಿಜಕ್ಕೂ ಸರ್ಕಾರದ ಆಶಯವನ್ನೇ ಬುಡಮೇಲು ಮಾಡಿದಂತಾಗಿದೆ.
ಫ್ರಾಂಚೈಸಿಗಳ ಕರಾಮತ್ತು: ಕಡು ಬಡವ, ಬಡವ ಹಾಗೂ ಮಧ್ಯಮ ವರ್ಗದವರು ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ರು. 1ಗೆ ಕೆ.ಜಿ. ಪಡಿತರ ಅಕ್ಕಿ ವಿತರಣೆಯಲ್ಲಿ ಇತ್ತೀಚಿಗಷ್ಟೇ ದಿಟ್ಟಕ್ರಮ ಕೈಗೊಂಡಿದ್ದು, ಶ್ರೀಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ಕಾರದ ಈ ಸೌಲಭ್ಯ ಪಡೆಯಬೇಕೆಂಬುವರ ಸಂಖ್ಯೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದೆ. ಇದನ್ನೇ ಕೆಲ ಫ್ರಾಂಚೈಸಿಗಳು ಹಣ ಗಳಿಕೆಯ ಮಾರ್ಗವನ್ನಾಗಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಖಾಸಗಿ ವ್ಯಕ್ತಿಗಳಿಗೆ ಜವಾಬ್ದಾರಿ: ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಜನರಿಗೆ ತುರ್ತು ಹಾಗೂ ಸರಳವಾಗಿ ಚೀಟಿಗಳನ್ನು ವಿತರಿಸಲು ಅನುಕೂಲವಾಗಲೆಂಬ ಉದ್ದೇಶದಿಂದ ಆಹಾರ ಮತ್ತು ಪೂರೈಕೆ ಇಲಾಖೆ, ಆಯಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಭಾವಚಿತ್ರ ಹಾಗೂ ಹೆಬ್ಬಟ್ಟಿನ ಗುರುತು ಪಡೆಯುವ ಕಾರ್ಯವನ್ನು ಟೆಂಡರ್ ಮೂಲಕ ಖಾಸಗಿ ವ್ಯಕ್ತಿಗಳಿಗೆ ನೀಡಿದೆ.
ಸರ್ಕಾರಿ ಶುಲ್ಕ ಎಷ್ಟು: ವಿವಿಧ ರೀತಿಯ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರು ಭಾವಚಿತ್ರ ಹಾಗೂ  ಹೆಬ್ಬೆಟ್ಟಿನ ಗುರುತು ಸಂಗ್ರಹಿಸುವ ಕಾರ್ಯಕ್ಕೆ ಆಯಾ ಫ್ರಾಂಚೈಸಿಗಳಿಗೆ ರು. 50 ಸಂದಾಯ ಮಾಡಬೇಕು ಎಂದು ಸರ್ಕಾರ ನಿಗದಿಪಡಿಸಿದೆ. ಆದರೆ, ಕೆಲ ಫ್ರಾಂಚೈಸಿಗಳು ಪ್ರತಿಯೊಬ್ಬ ಫಲಾನುಭವಿಗಳಿಂದ ರು. 50ರಿಂದ ರು. 100ರ ವರೆಗೆ ಸುಲಿಗೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಫ್ರಾಂಚೈಸಿಗಳ ಹೆಚ್ಚಿನ ಪ್ರಮಾಣದ ಶುಲ್ಕ ಆಕರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಕೆಲವರಂತೂ ಗುತ್ತಿಗೆದಾರರ ಈ ಕ್ರಮದ ವಿರುದ್ಧ ಪ್ರತಿನಿತ್ಯ ವಾಗ್ವಾದ ನಡೆಸುತ್ತಿರುವುದು ಸಾಮಾನ್ಯವಾಗಿದೆ.
ಪರಿಚಯದಾರನಿಗೂ: ಸರ್ಕಾರಿ ಶುಲ್ಕದಷ್ಟು ಹಣವನ್ನು ಫ್ರಾಂಚೈಸಿಗಳು ಕೀಳುತ್ತಿದ್ದರೆ ಫಲಾನುಭವಿಗಳು ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ. ಆಯಾ ಫಲಾನುಭವಿಗಳು, ಪಡಿತರ ಕಾರ್ಡ್‌ಗಾಗಿ ಭಾವಚಿತ್ರ ಹಾಗೂ ಹೆಬ್ಬೆಟ್ಟಿನ ಗುರುತು ಪಡೆಯಲು ಬಂದಾಗ ಕಡ್ಡಾಯವಾಗಿ ಒಬ್ಬ ಪರಿಚಯದಾರನಿಗೂ ಕರೆದು ತರಬೇಕಾಗಿದೆ. ಸರ್ಕಾರದ ಈ ನಿಯಮದ ದುರ್ಲಾಭ ಪಡೆಯಲು ಕೆಲ ಫ್ರಾಂಚೈಸಿಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವವರು ತಮಗೆ ಪರಿಚಿತರಾಗಿದ್ದಾರೆ ಎಂದು ಸೂಚಿಸುವವರೆಗೂ ರು. 100  ನೀಡಬೇಕು ಎಂದು ಫ್ರಾಂಚೈಸಿಗಳು ಫಲಾನುಭವಿಗಳಿಗೆ ಸೂಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಪಡಿತರ ಚೀಟಿ ಪಡೆಯಲು ಕನಿಷ್ಠ ಎಂದರೂ ರು. 200 ವ್ಯಯಿಸಬೇಕಾದ ಅನಿವಾರ್ಯತೆಯಲ್ಲಿ ಫಲಾನುಭವಿಗಳು ಸಿಲುಕಿಕೊಂಡಿದ್ದಾರೆ. ಇಷ್ಟೊಂದು ಹಣ ಭರಿಸಲು ಸಾಧ್ಯವಾಗದ ಅನೇಕರು ಪಡಿತರ ಚೀಟಿಯ ಸಹವಾಸವೇ ಬೇಡ ಎನ್ನುವಂತಾಗಿದೆ.
ಪಡಿತರ ಯಾವಾಗೋ:  ಪಡಿತರ ಆಹಾರ ಧಾನ್ಯ ಪಡೆಯುವುದು ಯಾವಾಗೋ ಏನೋ ಈಗಲೇ ಹಣ ನೀಡಬೇಕಾಗಿದೆ ಎಂದು ಹಾವೇರಿಯಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿರುವ ರಾಮಪ್ಪ ಎಂಬುವರು ಕನ್ನಡಪ್ರಭದೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 38: ಆಯಾ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಶೀಘ್ರದಲ್ಲೇ ಕಾರ್ಡ್‌ಗಳನ್ನು ವಿತರಿಸಲು ಸಹಾಯಕಾರಿ ಆಗಲಿ ಎಂಬ ಉದ್ದೇಶದಿಂದ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಜಿಲ್ಲೆಯಾದ್ಯಂತ ಒಟ್ಟು 38 ಫ್ರಾಂಚೈಸಿಗಳನ್ನು ನೇಮಿಸಿದೆ. ಆಯಾ ಗ್ರಾಮ ಪಟ್ಟಣಗಳಲ್ಲಿ ವಾಸವಾಗಿರುವ ಜನರ ಸಮಯ ಹಾಗೂ ಹಣ ವ್ಯರ್ಥವಾಗಬಾರದೆಂಬ ಉದ್ದೇಶ ಇದರಲ್ಲಿ ಅಡಗಿದೆ. ಆದರೆ, ಈ ಉದ್ದೇಶ ಫಲಕಾರಿಯಾದಂತೆ ಕೆಲ ಫ್ರಾಂಚೈಸಿಗಳು ವರ್ತಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತೀವೆ. ಭಾವಚಿತ್ರ ಹಾಗೂ ಹೆಬ್ಬೆಟ್ಟಿನ ಗುರುತು ಪಡೆಯುವ ನೆಪದಲ್ಲಿ ಸರ್ಕಾರಿ ಶುಲ್ಕಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಣ ಕೀಳುತ್ತಿರುವವರ ವಿರುದ್ಧ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಬೇಕಿದೆ.

 ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.