ಹಾವೇರಿ

ಮತದಾನದ ಹಕ್ಕು ಒದಗಿಸಿ

Published On :

ಬ್ಯಾಡಗಿ: ಪುರಸಭೆ ಹಾಗೂ ನಗರಸಭೆಗಳ 552 ನೂತನ ಸದಸ್ಯರು ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನ ಹಕ್ಕು ಕಳೆದುಕೊಳ್ಳುವ ಭೀತಿ ಎದುರಾಗಿದ್ದು, ಸಂವಿಧಾನಾತ್ಮಕವಾಗಿ ನೀಡಿರುವ ಮತದಾನದ ಹಕ್ಕನ್ನು ಒದಗಿಸುವಂತೆ ಸದಸ್ಯ ಮುರಿಗೆಪ್ಪ ಶೆಟ್ಟರ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆಯೊಂದನ್ನು ನೀಡಿರುವ ಅವರು, ಹಾವೇರಿ ಜಿಲ್ಲೆಯಲ್ಲಿ 193, ಗದಗಿನಲ್ಲಿ 203, ಧಾರವಾಡ ಜಿಲ್ಲೆಯಲ್ಲಿ 156 ಒಟ್ಟು 552 ಸದಸ್ಯರು ಇತ್ತೀಚೆಗೆ ಜರುಗಿದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪುರಸಭೆ ಹಾಗೂ ನಗರಸಭೆಗಳಿಗೆ ಆಯ್ಕೆಯಾಗಿದ್ದು ಚುನಾವಣೆ ಮಕ್ತಾಯಗೊಂಡು 6 ತಿಂಗಳು ಗತಿಸಿದರೂ ಪುರಸಭೆಯಲ್ಲಿ ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಆಡಳಿತಾರೂಢ ಸರ್ಕಾರ ದ್ವೇಷ ರಾಜಕಾರಣದಲ್ಲಿ ತೊಡಗಿದ್ದು ಚುನಾಯಿತ ಸದಸ್ಯರ ಸಂವಿಧಾನಬದ್ಧವಾದ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ಮೌಲ್ಯ ಎತ್ತಿಹಿಡಿಯಿರಿ: ಅಧಿಸೂಚನೆ ಹೊರಡಿಸಿದ ನೂರು ದಿನಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಂಡು ಅಧಿಕಾರ ವಹಿಸಿಕೊಳ್ಳಬೇಕೆಂಬ ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಅದಾಗ್ಯೂ ಪ್ರಜಾಪ್ರಭುತ್ವ ವ್ಯವಸ್ಥೆ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ವಿಫಲವಾಗಿರುವ ಚುನಾವಣೆ ಆಯೋಗವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಚುನಾಯಿತ ಸದಸ್ಯರು ಪ್ರತಿಜ್ಞಾವಿಧಿ ಪಡೆದು ಪ್ರಮಾಣ ಪತ್ರಗಳನ್ನು ಹೊಂದಿದ್ದರೂ ಚುನಾವಣಾ ಆಯೋಗವು ಸದಸ್ಯರೆಂದು ಪರಿಗಣಿಸದೇ ಇರುವುದು ಚುನಾವಣಾ ವಿಧಿ ವಿಧಾನಗಳಿಗೆ ಮಸಿ ಬಳದಂತಾಗಿದೆ. ಇದು ಸ್ಥಳೀಯ ಸಂಸ್ಥೆಗಳ ಮೂಲ ಧ್ಯೇಯಕ್ಕೆ ಕೊಡಲಿ ಪೆಟ್ಟು ನೀಡಿದೆ. ಇದೀಗ ವಿಧಾನಪರಿಷತ್ ಚುನಾವಣೆಯ ಅಧಿಸೂಚನೆ ಹೊರ ಬಿದ್ದಿದ್ದು ಪುರಸಭೆ ಹಾಗೂ ನಗರಸಭೆ ಸದಸ್ಯರಿಗೆ ಮತದಾನದ ಹಕ್ಕು ಇಲ್ಲವೆಂಬ ಗುಮಾನಿಯಿದೆ. ಕೂಡಲೇ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸದಸ್ಯರ ಹೆಸರನ್ನು ಸೇರ್ಪಡೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಬಸವರಾಜ ಛತ್ರದ, ನಾರಾಯಣಪ್ಪ ಕರ್ನೂಲ, ಶಾಂತವ್ವ ಕುರಕುಂದಿ, ಬಸವರಾಜ ಹಂಜಿ, ಮುನ್ನಾ ಎರೇಶೀಮಿ, ಸುಧಾ ಕಳ್ಳಿಹಾಳ, ರಾಜೇಸಾಬ್ ಕಳ್ಳಿಮನಿ, ನೀಲವ್ವ ದೊಡ್ಮನಿ, ಪ್ರವೀಣ ಯಾದವಾಡ, ರೋಹಿಣಿ ಹುಣಸೀಮರದ, ಮಲ್ಲಿಕಾರ್ಜುನಗೌಡ ಭದ್ರಗೌಡ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.