ಸಮರ್ಪಕ ಕುಡಿವ ನೀರು ಕೊಡಿ
ಬ್ಯಾಡಗಿ: ಸಮರ್ಪಕ ಮಳೆಯಾಗದೇ ಅಂತರ್ಜಲ ಮಟ್ಟ ಕುಸಿದಿದ್ದು, 600 ಅಡಿಗಳಷ್ಟು ಕೆಳ ಭಾಗದಷ್ಟು ಕೆಳಗೆ ನೀರು ಹೋಗಿದ್ದು, ಕಳೆದೆರಡು ತಿಂಗಳಿಂದ ಕುಡಿಯುವ ನೀರಿಗೆ ಗ್ರಾಮದ ಜನತೆ ಪರಿತಪಿಸುವಂತಾಗಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ತಾಲೂಕಿನ ಆಣೂರು ಗ್ರಾಮದಲ್ಲಿ ನಡೆದ ಜನಸ್ಪಂದನದಲ್ಲಿ ಗ್ರಾಮಸ್ಥರು ಆಗ್ರಹಿಸಿದರು.
ಎರಡು ದಿನದಲ್ಲಿ ನೀರು: ಈ ಸಂದರ್ಭ ತಾಪಂ ಇಓ ಕೃಷ್ಣಮೂರ್ತಿ ಮಾತನಾಡಿ, ಇನ್ನೆರಡು ದಿನಗಳಲ್ಲಿ ಗ್ರಾಮಕ್ಕೆ ಹೆಚ್ಚುವರಿಯಾಗಿ 2 ಕೊಳವೆ ಭಾವಿಗಳನ್ನು ನಿರ್ಮಿಸುವ ಭರವಸೆ ನೀಡಿದರಲ್ಲದೇ ಗ್ರಾಮಸ್ಥರು ಕೊಳವೆಬಾವಿ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಆಣೂರು ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು, ತನ್ಮೂಲಕ ಜನತೆಗೆ ಶಾಶ್ವತ ಹಾಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು ಎಂದರು.
ಶೀಘ್ರ ಕಾಮಗಾರಿ ಆರಂಭ: ಆಣೂರು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ಬಳಿಕ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ ಅವರು, ನದಿ ನೀರಿನಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯೂ ಸರ್ಕಾರದ ಮುಂದಿದೆ. ಅನುಮೋದನೆ ದೊರೆತಲ್ಲಿ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.
ವಿದ್ಯುತ್ ಕಂಬ ಸರಪಡಿಸಿ: ಗ್ರಾಮದಲ್ಲಿರುವ ಬಹಳಷ್ಟು ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ನೆಲಕ್ಕುರಳಲಿವೆ. ಕಳೆದೆರಡು ದಿನಗಳಿಂದ ಅತೀಯಾದ ಗಾಳಿ, ಮಳೆ ಆರಂಭವಾಗಿದ್ದು, ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದ ಗ್ರಾಮದ ಕರಬಸಪ್ಪ ಕೊಪ್ಪದ ಪ್ರಾಣಹಾನಿ ಸಂಭವಿಸುವ ಪೂರ್ವದಲ್ಲಿಯೇ ಎಚ್ಚೆತ್ತುಕೊಳ್ಳುವುದು ಸೂಕ್ತವೆಂದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಭಿಯಂತರ ದಾಸಪ್ಪ, ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್ ಕಂಬಗಳ ಬದಲಾಗಿ ಹೊಸ ಕಂಬಗಳನ್ನು ಅಳವಡಿಸಲು ಗ್ರಾಪಂ ಹಣ ಪಾವತಿಸಲು ಮುಂದಾದರೆ ಕೂಡಲೇ ಹೊಸ ಕಂಬಗಳನ್ನು ಅಳವಡಿಸುವುದಾಗಿ ತಿಳಿಸಿದರು.
ಗ್ರಾಮದ ಶೇಖಪ್ಪ ಬ್ಯಾಡಗಿ, ಗ್ರಾಮದಲ್ಲಿ ಇತ್ತೀಚೆಗೆ ಕೈಗೊಂಡಿರುವ ಕೆರೆಯ ಏರಿಗೆ ಕಲ್ಲುಗೋಡೆ ನಿರ್ಮಾಣ ಕಾಮಗಾರಿ ಕಳಪೆಯಾದ ಹಿನ್ನೆಲೆಯಲ್ಲಿ ಕಟ್ಟಿದ ಗೋಡೆ ಭಾಗಶಃ ಕುಸಿದು ಕೆರೆಯಲ್ಲಿ ಕಲ್ಲುಗಳು ಮುಳುಗಿ ಹೋಗಿವೆ. ಇದರಿಂದ ಹೊರಬರುತ್ತಿರುವ ನೀರು ಸುತ್ತಲಿನ ಜಮೀನುಗಳಿಗೆ ನುಗ್ಗುವ ಮೂಲಕ ಬೆಳೆಗಳನ್ನು ಹಾಳು ಮಾಡುತ್ತಿದೆ. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಇಓ ಲಿಖಿತ ದೂರನ್ನು ಸಲ್ಲಿಸುವಂತೆ ಸೂಚಿಸಿ, ಪರಿಶೀಲಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಚನ್ನಪ್ಪ ಮುಚ್ಚಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುಭಾಸ್ ಪುಲಾರೆ, ರಾಕೇಶ, ಸಿ. ಪ್ರಸನ್ನಕುಮಾರ, ಸಹಾಯಕ ತೋಟಗಾರಿಕಾ ನಿರ್ದೇಶಕ ಚಿದಾನಂದ, ನಟರಾಜ, ಜಿಪಂ ಅಭಿಯಂತ ಸುರೇಶ ಬೇಡರ, ಎಚ್.ಎಚ್. ಬಣಕಾರ, ಶಿವಾನಂದಪ್ಪ ಬಡ್ಡಿಯವರ, ಬಸವಣ್ಣೆಪ್ಪ ಬಣಕಾರ, ಬಸವರಾಜ ಹಲಗೇರಿ, ಮಲ್ಲಪ್ಪ ನೇಸ್ವಿ, ಬಂಡಿವಡ್ಡರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

