ಪಡಿತರ ಅವ್ಯವಹಾರ ತಡೆಗಟ್ಟಿ
ಹಾನಗಲ್ಲ: ತಾಲೂಕಿನ ಶಿರಗೋಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪಡಿತರ ವಿತರಣೆಯಲ್ಲಿ ಹಲವು ವರ್ಷಗಳಿಂದ ಅಕ್ರಮ ವ್ಯವಹಾರಗಳು ನಡೆಯುತ್ತಿದ್ದು, ಈ ಕೇಂದ್ರದ ವ್ಯವಸ್ಥಾಪಕರನ್ನು ಕೂಡಲೆ ಅಮಾನತುಗೊಳಿಸಬೇಕೆಂದು ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಆಗ್ರಹಿಸಿದ್ದಾರೆ.
ಗ್ರಾಮಸ್ಥರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸರಕಾರ ನಿಗದಿಪಡಿಸಿದ ಯುನಿಟ್ ಆಧಾರದ ಪಡಿತರದ ಪ್ರಕಾರ 5 ಯುನಿಟ್ಗೆ 20 ಕೆ.ಜಿ. ಅಕ್ಕಿ ವಿತರಿಸುವ ಬದಲು 3-4 ಯುನಿಟ್ಗೆ ಮಾತ್ರ ಅಕ್ಕಿ ವಿತರಿಸುತ್ತಿದ್ದಾರೆ. ಅಲ್ಲದೆ ಗೋದಿ, ಸಕ್ಕರೆ ವಿತರಣೆಯಲ್ಲಿ ಕಡಿಮೆಗೊಳಿಸಿ ವಿತರಿಸುತ್ತಿದ್ದಾರೆ. ಇದರಿಂದಾಗಿ ಪಡಿತರ ಮಾರಾಟಗಾರರಿಗೆ ಹಲವು ವರ್ಷಗಳಿಂದ ಪ್ರತಿ ತಿಂಗಳು 10 ಕ್ವಿಂಟಲ್ ಅಕ್ಕಿ, 2 ಕ್ವಿಂಟಲ್ ಗೋದಿ ಉಳಿಕೆಯಾಗುತ್ತಲೇ ಬಂದಿದೆ. ಇದನ್ನು ಮಾರಾಟಗಾರರು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಹಣ ಲೂಟಿ ಹೊಡೆಯುತ್ತಿದ್ದಾರೆ ಎಂದರು.
ಸಾರ್ವಜನಿಕರು, ಗ್ರಾಹಕರು ಪ್ರಶ್ನಿಸಿದರೆ ಪಡಿತರ ಕಡಿಮೆ ಬಂದಿದೆ, ಬೇರೇನೋ ಉಡಾಫೆ ಉತ್ತರ ನೀಡುತ್ತಿದ್ದಾರೆ. ಸೀಮೆಎಣ್ಣೆ ವಿತರಣೆಯಲ್ಲೂ ಅಕ್ರಮ ನಡೆಯುತ್ತದೆ. ಪ್ರತಿ ಪಡಿತರ ಚೀಟಿಗೆ 2 ಲೀಟರ್ ಕಡಿಮೆ ವಿತರಣೆ ಮಾಡುತ್ತಿದ್ದಾರೆ. ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಕಳೆದ ವಾರ ಗ್ರಾಮಸ್ಥರು ಪಡಿತರ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪಡಿತರ ವಿತರಿಸದಂತೆ ತಡೆಯೊಡ್ಡಿದ್ದರು.
ತಹಸೀಲ್ದಾರ್, ಆಹಾರ ಇಲಾಖೆ ಅಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ವ್ಯವಸ್ಥಾಪಕರು ತಮ್ಮ ದಾಖಲೆಗಳಲ್ಲಿ ಪೂರ್ಣ ಪ್ರಮಾಣದ ಪಡಿತರ ವಿತರಿಸಿದ ಲೆಕ್ಕ ತೋರಿಸಿದ್ದಾರೆ. ಆದರೆ, ಪಡಿತರ ಚೀಟಿಯಲ್ಲಿ ಕಡಿಮೆ ಲೆಕ್ಕ ನಮೂದಿಸಿದ್ದಾರೆ. ಅದರ ಎಲ್ಲ ದಾಖಲೆಗಳನ್ನೂ ತಾಲೂಕು ಆಡಳಿತಕ್ಕೆ ಪರಿಶೀಲನೆಗೆ ಸಲ್ಲಿಸಲಾಗಿದೆ.
ಈ ಹಿಂದೆ ಇದೇ ವ್ಯವಸ್ಥಾಪಕ 2010ರಲ್ಲಿ ಇಂಥದೆ ಪ್ರಕರಣದಲ್ಲಿ ಸಿಲುಕಿದ್ದಾಗ ತಾಲೂಕು ಆಡಳಿತ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ತನಿಖಾ ವರದಿ ಸಲ್ಲಿಸಿತ್ತು. ಆಗಲೂ ಪಡಿತರ ಕಡಿಮೆ ವಿತರಿಸಿದ ಆರೋಪ ತನಿಖೆಯಿಂದ ಬಯಲುಗೊಂಡಿತ್ತು. ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇದೇ ವ್ಯವಸ್ಥಾಪಕರಿಗೆ ರು. 12 ಸಾವಿರ ದಂಡ ವಿಧಿಸಿ ಅಮಾನತುಗೊಳಿಸಿದ್ದರು. ಆದರೆ, ಈಗ ಮತ್ತೆ ಅದೇ ವ್ಯವಸ್ಥಾಪಕರು ಇದೇ ಕೇಂದ್ರಕ್ಕೆ ಹಾಜರಾಗಿದ್ದು, ಮತ್ತದೆ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಇವರ ಮೇಲೆ ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಗ್ರಾಹಕರು ಹಾಗೂ ಸಾರ್ವಜನಿಕರು ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಹಕರು ಮನವಿಯಲ್ಲಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

