ಹಾವೇರಿ

ಕನ್ನಡ ಕರ್ನಾಟಕದ ಆತ್ಮ

Published On :

ಶರೀಫ ಶಿವಯೋಗಿ ವೇದಿಕೆ, ಶಿಗ್ಗಾಂವಿ, ಜೂ. 14
ಕನ್ನಡ ಕೇವಲ ಭಾಷೆಯಾಗಿರದೆ ನಮ್ಮ ಬದುಕು, ಉಸಿರು ಮತ್ತು ಜೀವನ ಪದ್ಧತಿಯಾಗಿದೆ. ಕರ್ನಾಟಕದ ಆತ್ಮ ಕನ್ನಡ. ಕನ್ನಡ ಭಾಷೆ ಇಲ್ಲದೆ ಕನ್ನಡಿಗರಿಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಪಟ್ಟಣದ ವಿರಕ್ತಮಠದಲ್ಲಿ ನಡೆದ ಶಿಗ್ಗಾಂವಿ ತಾಲೂಕು ಮಟ್ಟದ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಕನ್ನಡಕ್ಕೆ ಅಗ್ರಗಣ್ಯ ಸ್ಥಾನವಿದೆ. ಇದೇ ಕಾರಣಕ್ಕಾಗಿ ಬೇರೆ ಭಾಷೆಗಿಂತ ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಸಂದಿವೆ. ಕನ್ನಡ ನಿತ್ಯ ನಿರಂತರವಾಗಿದ್ದು, ಭವಿಷ್ಯದಲ್ಲಿ ಜಾಗತಿವಾಗಿ ಉತ್ತಮ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೇರು ಮಟ್ಟದಲ್ಲಿ ಕನ್ನಡ ಭಾಷೆ ಬೆಳೆಸುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಉತ್ತೇಜನ ನೀಡಿತ್ತು ಎಂದ ಅವರು ದಾಸ ಶ್ರೇಷ್ಠ ಕನಕದಾಸರು, ತತ್ವಪದ ಹರಿಕಾರ ಶಿಶುವಿನಾಳ ಶರೀಫರು, ಗುರು ಗೋವಿಂದರು ಜನಿಸಿದ ಶಿಗ್ಗಾಂವಿಯಲ್ಲಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿ ಎಂದು ಆಶಿಸಿದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಕನ್ನಡಕ್ಕೆ ಆದ್ಯತೆ ನೀಡಿ ಇಂಗ್ಲಿಷ್‌ನ್ನು ಒಂದು ಭಾಷೆಯನ್ನಾಗಿ ಕಲಿಯಬೇಕು. ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಜಗತ್ತಿನ ಬೇರೆ ಭಾಷೆಗಳು ಶೈಶಾವಸ್ಥೆಯಲ್ಲಿದ್ದಾಗ ಕನ್ನಡದಲ್ಲಿ ಮಹಾಕಾವ್ಯ ರಚನೆ ಆಗಿದ್ದವು. ಇಂತಹ ಭವ್ಯ ಪರಂಪರೆ ಹೊಂದಿರುವ ಕನ್ನಡದ ಕುರಿತಾಗಿ ನಿರ್ಲಕ್ಷ್ಯ ಸಲ್ಲದು ಎಂದರು. ಭಾರತೀಯ ಸಂಸ್ಕೃತಿ ಮೇಲೆ ಮೆಕಾಲಿ ಇಂಗ್ಲಿಷನ್ನು ಒತ್ತಾಯಪೂರ್ವಕವಾಗಿ ಹೇರಿದ್ದರಿಂದ ಇಂಗ್ಲಿಷ್ ಪ್ರಭಾವ ಹೆಚ್ಚಿತು ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಉದ್ಘಾಟಿಸಿದರು. ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷ ಮುತಾಲಿಕ ದೇಸಾಯಿ ಮಾತನಾಡಿ, ಸೃಜನಶೀಲ ಸಾಹಿತ್ಯ ನಿರ್ಮಾಣಕ್ಕೆ ಆದ್ಯತೆ ಸಿಗಲಿ ಎಂದು ಆಶಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿದ್ಯವನ್ನು ವಿರಕ್ತಮಠದ ಸಂಗನಬಸವ ಸ್ವಾಮಿಗಳು ವಹಿಸಿದ್ದರು.
ಸಮ್ಮೇಳನ ಅಧ್ಯಕ್ಷತೆಯನ್ನು ಬ.ಫ. ಯಲಿಗಾರ ವಹಿಸಿದ್ದರು. ಶಂಕರಗೌಡ ಪಾಟೀಲ, ಮುರಿಗೆಪ್ಪ ಅಂಕಲಕೋಟಿ, ತಾಪಂ ಉಪಾಧ್ಯಕ್ಷೆ ಸುಗಂಧಭಾಯಿ ಘೋಡಕೆ, ಸದಸ್ಯೆ ಸುಜಾತಾ ಕಲಕಟ್ಟಿ, ಉಮಾ ಡವಗಿ, ಬಿಜೆಪಿ ಅಧ್ಯಕ್ಷ ದೇವಣ್ಣಾ ಚಾಕಲಬ್ಬಿ, ತಾಲೂಕಾ ನ್ಯಾಯವಾಧಿಗಳ ಸಂಘದ ಅಧ್ಯಕ್ಷ ಎಸ್.ಕೆ. ಅಕ್ಕಿ, ಜಯಣ್ಣಾ ಹೆಸರೂರ, ಜನಾರ್ದನ ಭ್ರಹ್ಮಾವರ, ಜಿ.ಎನ್. ಯಲಿಗಾರ, ಎಸ್.ಎಂ. ದೇವತಿ, ಪುರಸಭಾ ಸದಸ್ಯ ಪ್ರಸಾದ ಸುರಗಿಮಠ, ಸಿ.ಡಿ ಯತ್ನಳ್ಳಿ, ಎಸ್.ಎನ್. ಮುಗಳಿ, ಮಲ್ಲಪ್ಪ ರಾಮಗೇರಿ, ಶ್ರೀಕಾತ ದುಂಡಿಗೌಡ್ರ, ಬಸವರಾಜ ಹೆಸರೂರ,
ತಾಲೂಕು ಕಸಾಪ ಅಧ್ಯಕ್ಷ ಬಸವರಾಜ ಬಸರಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು ಭರಮಜ್ಜ ನವಲಗುಂದ ಸ್ವಾಗತಿಸಿದರು. ವೀರೇಶ ಬಡಿಗೇರ ಹಾಗೂ ಬಸವರಾಜ ಶಿಗ್ಗಾಂವಿ ಸಂಗಡಿಗರು ರೈತ ಗೀತೆ ಹಾಡಿದರು. ವೀರೇಶ ಬಡಿಗೇರ ಸಂಗಡಿಗರು ಪ್ರಾರ್ಥಿಸಿದರು. ಭರಮಜ್ಜ ನವಲಗುಂದ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.